Advertisement

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

09:44 PM Jan 16, 2022 | Team Udayavani |

ಉಡುಪಿ: ನಗರದಲ್ಲಿ ಕಳ್ಳತನ ಪ್ರಕರಣಗಳು ದಿನೇ ದಿನೇ ವರದಿಯಾಗುತ್ತಿದ್ದು, ಈ ನಡುವೆ ಪರ್ಯಾಯೋತ್ಸವ ನಡೆಯುತ್ತಿರುವುದರಿಂದ ಶ್ರೀಕೃಷ್ಣ ಮಠದ ಪರಿಸರಕ್ಕೆ ಎಚ್‌ಡಿ ಗುಣಮಟ್ಟದ 63 ಸಿಸಿಟಿವಿ ಕೆಮರಾ ಅಳವಡಿಸಲಾಗಿದೆ. ಈ ಮೂಲಕ ಕಳ್ಳತನ ಸಹಿತ ಇತರ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಪೊಲೀಸ್‌ ಇಲಾಖೆಯಿಂದ ಸಕಲ ಕ್ರಮ ತೆಗೆದುಕೊಳ್ಳಲಾಗಿದೆ.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ, 5 ಡಿವೈಎಸ್‌ಪಿಗಳು, 47 ಪಿಎಸ್‌ಐ, 62 ಎಎಸ್‌ಐ, 529 ಕಾನ್‌ಸ್ಟೆಬಲ್‌ ಹಾಗೂ ಹೆಡ್‌ಕಾನ್‌ಸ್ಟೆಬಲ್‌ಗ‌ಳು, 93 ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ ಹಾಗೂ ಹೆಡ್‌ಕಾನ್‌ಸ್ಟೆಬಲ್‌ಗ‌ಳು, 7 ಡಿಎಆರ್‌, 2 ಕೆಎಸ್‌ಆರ್‌ಪಿ ತುಕಡಿ, 1 ಕ್ವಿಕ್‌ ರೆಸ್ಪಾನ್ಸ್‌ ಟೀಮ್‌, 3 ವಿಧ್ವಂಸಕ ವಿರೋಧಿ ತಪಾಸಣೆ ತಂಡಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜಿಲ್ಲೆಯಷ್ಟೇ ಅಲ್ಲದೆ ಹೊರಜಿಲ್ಲೆ ಗಳಿಂದಲೂ ಪೊಲೀಸರು ಭದ್ರತೆಗಾಗಿ ಆಗಮಿಸಿದ್ದಾರೆ.

ರಥಬೀದಿಯೊಳಗೆ ಪೊಲೀಸ್‌ ಚೌಕಿ
ರಥಬೀದಿಯ ಶ್ರೀ ಕೃಷ್ಣಾಪುರ ಮಠದ ಬಲಬದಿಯಲ್ಲಿ ಪೊಲೀಸ್‌ ಚೌಕಿ ಮಾಡಲಾಗಿದೆ. ಇಲ್ಲಿ ಸಿಸಿಟಿವಿ ದೃಶ್ಯಾವಳಿಗಳೆಲ್ಲವನ್ನೂ ಪೊಲೀಸರು ಮಾನಿಟರಿಂಗ್‌ ಮಾಡಲಿದ್ದಾರೆ. ಪಾಳಿ ಅವಧಿಯಲ್ಲಿ ಪೊಲೀಸರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ರಥಬೀದಿ ಸಂಪರ್ಕಿಸುವ ಎಲ್ಲ ದ್ವಾರಗಳು, ವಾಹನ ನಿಲುಗಡೆ ಪ್ರದೇಶ, ಪರ್ಯಾಯೋತ್ಸವ ಮೆರವಣಿಗೆ ಹಾದು ಹೋಗುವ ಭಾಗಗಳು ಸಹಿತ ಎಲ್ಲೆಡೆ ಪೊಲೀಸರು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಚಂದು ಮೈದಾನದಲ್ಲಿ ಸಭೆ
ಪರ್ಯಾಯೋತ್ಸವ ಸಂದರ್ಭದಲ್ಲಿ ವಹಿಸಬೇಕಾಗಿರುವ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ನಗರದ ಚಂದು ಮೈದಾನದಲ್ಲಿ ಎಲ್ಲ ಪೊಲೀಸರಿಗೂ ರವಿವಾರ ಮಾಹಿತಿ ನೀಡಿದರು.

ಎಚ್ಚರಿಕೆ ಫ‌ಲಕ
ಉಡುಪಿ ಜಿಲ್ಲೆ ಸಹಿತ ನಗರ ಪೊಲೀಸ್‌ ಠಾಣೆಯ ಸಿಬಂದಿ ನಗರ, ಶ್ರೀಕೃಷ್ಣಮಠದ ಪರಿಸರದಲ್ಲಿ ಎಚ್ಚರಿಕೆ ಫ‌ಲಕಗಳನ್ನು ಅಳವಡಿಕೆ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸರಳಗಳ್ಳತನದ ಬಗ್ಗೆ ಎಚ್ಚರಿಕೆ ಸಂದೇಶ ಸಹಿತ ಮಕ್ಕಳು, ಬ್ಯಾಗ್‌, ಪರ್ಸ್‌ಗಳ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತಹ ಜಾಗೃತಿ ಫ‌ಲಕಗಳು ಶ್ರೀಕೃಷ್ಣ ಮಠ ಪರಿಸರದಲ್ಲಿ ರಾರಾಜಿಸುತ್ತಿವೆ.

Advertisement

ಎಲ್ಲೆಲ್ಲಿಸಿಸಿ ಕೆಮರಾ ಅಳವಡಿಕೆ ?
ಪರ್ಯಾಯೋತ್ಸವ ಮೆರವಣಿಗೆ ಹಾದುಹೋಗುವ ಮಾರ್ಗ, ಕಿನ್ನಿಮೂಲ್ಕಿಯಿಂದ ರಥಬೀದಿ ಪರಿಸರ ಸುತ್ತಮುತ್ತ, ಇಂದ್ರಾಳಿ, ಕಲ್ಸಂಕ, ಕುಕ್ಕಿಕಟ್ಟೆ ಸಹಿತ ಎಲ್ಲ ಪ್ರಮುಖ ಭಾಗಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಈ ಮೂಲಕ ಯಾರೂ ಕೂಡ ಸಿಸಿಟಿವಿ ಕಣ್ಣು ತಪ್ಪಿಸಿ ಪರಾರಿಯಾಗಲು ಸಾಧ್ಯವೇ ಇಲ್ಲ ಎಂಬಂತೆ ಭದ್ರತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next