Advertisement
ಈ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಎಂ.ಎಸ್. ರಾಮಯ್ಯ ಆಸ್ಪತ್ರೆಯ ವೈದ್ಯರಾದ ಡಾ.ನರೇಶ್, “ಪಾರ್ವತಮ್ಮ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿದೆ. ವೆಂಟಿಲೇಟರ್‌ನಿಂದ ಹೊರಬರುವವರೆಗೆ ಪರಿಸ್ಥಿತಿ ಸ್ವಲ್ಪ ಗಂಭೀರವಾಗಿರುತ್ತದೆ. ಅದು ಬಿಟ್ಟರೆ ಬಿಪಿ, ಪಲ್ಸ್‌ನಲ್ಲಿ ಸುಧಾರಣೆ ಕಾಣುತ್ತಿದೆ. ಅವರಿಗೆ ಕಿಡ್ನಿಯ ಸಮಸ್ಯೆಯೂ ಇದ್ದು, ಅಗತ್ಯಬಿದ್ದರೆ ಡಯಾಲೀಸಿಸ್ ಮಾಡುತ್ತೇವೆ. ಅದು ಬಿಟ್ಟರೆ ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದರು.
“ವೈದ್ಯರ ತಂಡ ಅಮ್ಮನಿಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡುತ್ತಿದೆ.ಈಗ ಅಮ್ಮ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಬೇಕು. ಎಲ್ಲರ ಪ್ರಾರ್ಥನೆಯ ಅಗತ್ಯವಿದೆ’ ಎಂದರು. ಪಾರ್ವತಮ್ಮ ಅವರ ಆರೋಗ್ಯದ ಸ್ಥಿತಿಯಲ್ಲಿ ಏರುಪೇರಾಗುತ್ತಿದ್ದಂತೆ ಅವರ ಕುಟುಂಬ ವರ್ಗ ಆಸ್ಪತ್ರೆಗೆ ಭೇಟಿ ನೀಡಿತು. ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್, ಪುತ್ರಿಯರಾದ ಪೂರ್ಣಿಮ, ಲಕ್ಷ್ಮೀ, ಮೊಮ್ಮಕ್ಕಳು ಸೇರಿದಂತೆ ಅವರ ಕುಟುಂಬ ವರ್ಗ ಆಸ್ಪತ್ರೆಗೆ ಭೇಟಿ ನೀಡಿ ಪಾರ್ವತಮ್ಮ ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿತು. ಇನ್ನು, ಆಸ್ಪತ್ರೆಗೆ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್, ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಸೇರಿದಂತೆ ಅನೇಕರು ಭೇಟಿ ನೀಡಿ, ಪಾರ್ವತಮ್ಮ ಅವರ ಆರೋಗ್ಯದ ಮಾಹಿತಿ ಪಡೆದರು.
Related Articles
Advertisement
ಇನ್ನು, ಪಾರ್ವತಮ್ಮ ಅವರ ಆರೋಗ್ಯದ ಸ್ಥಿತಿ ಬಗ್ಗೆ ವದಂತಿಗಳು ಹಬ್ಬಿದ್ದರಿಂದ ಹಾಗೂ ಮಾಧ್ಯಮಗಳಲ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ಹರಡಿದ್ದರಿಂದ ಆಸ್ಪತ್ರೆ ಬಳಿ ಸಾಕಷ್ಟು ಮಂದಿ ಜಮಾಯಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೂಡಾ ಮಾಡಲಾಗಿತ್ತು.
ಬ್ರೆಸ್ಟ್ ಕ್ಯಾನ್ಸರ್‌ಗೆ ಒಳಗಾಗಿದ್ದ ಪಾರ್ವತಮ್ಮ ಅವರು ಅದರಿಂದ ಗುಣಮುಖರಾಗಿದ್ದರು ಕೂಡಾ. ಆದರೆ, ಇತ್ತೀಚಿನ ದಿನಗಳಲ್ಲಿ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಆಗಾಗ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ತಪಾಸಣೆಗೆ ಹೋಗಿ ಬರುತ್ತಿದ್ದರು. ಅದರಂತೆ ಮೂರು ದಿನಗಳ ಹಿಂದೆಯೂ ಪಾರ್ವತಮ್ಮ ಅವರು ಪ್ರತಿ ತಿಂಗಳ ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದರು. ಆದರೆ, ವೈದ್ಯರು ಇವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದರು. ಮೊನ್ನೆಯಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೂಡಾ ಆಸ್ಪತ್ರೆಗೆ ತೆರಳಿ ಪಾರ್ವತಮ್ಮ ಅವರ ಅವರ ವಿಚಾರಿಸಿದ್ದರು. ಆದರೆ, ಬುಧವಾರ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿದೆ. ಈಗ ಪಾರ್ವತಮ್ಮ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದರಿಂದ ಇಡೀ ಕುಟುಂಬ ಹಾಗೂ ಅಭಿಮಾನಿ ವರ್ಗದಲ್ಲಿ ಆತಂಕದ ಛಾಯೆ ಮೂಡಿದೆ.