Advertisement

ಪಾರ್ವತಮ್ಮ ಹೆಸರಲ್ಲಿ ಸೌಹಾರ್ದ ಪ್ರಶಸ್ತಿ

10:49 AM Sep 05, 2017 | |

ಮುಂಬರುವ ದಿನಗಳಲ್ಲಿ ಪಾರ್ವತಮ್ಮ ರಾಜ್‌ ಕುಮಾರ್‌ ಅವರ ಹೆಸರಲ್ಲಿ “ಸೌಹಾರ್ದ ಪ್ರಶಸ್ತಿ’ ವಿತರಿಸಲು ಡಾ.ರಾಜಕುಮಾರ್‌ ಪುತ್ರರು ನಿರ್ಧರಿಸಿದ್ದಾರೆ. ಈಗಾಗಲೇ ಡಾ.ರಾಜಕುಮಾರ್‌ ಅವರ ಹೆಸರಲ್ಲಿ ಚಿತ್ರರಂಗಕ್ಕೆ ಸೇವೆ ಸಲ್ಲಿಸಿರುವ ಮೂವರು ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡಲಾಗುತ್ತಿದೆ. ಮುಂದಿನ ವರ್ಷದಿಂದ ಪಾರ್ವತಮ್ಮ ರಾಜಕುಮಾರ್‌ ಅವರ ಹೆಸರಲ್ಲೂ “ಸೌಹಾರ್ದ ಪ್ರಶಸ್ತಿ’ ವಿತರಣೆ ಮಾಡಲು ಶಿವರಾಜಕುಮಾರ, ರಾಘವೇಂದ್ರರಾಜಕುಮಾರ್‌ ಹಾಗೂ ಪುನೀತ್‌ರಾಜಕುಮಾರ್‌ ತೀರ್ಮಾನಿಸಿದ್ದಾರೆ. ಈ ವಿಷಯವನ್ನು ಸ್ವತಃ ರಾಘವೇಂದ್ರ ರಾಜಕುಮಾರ್‌ ಅವರೇ ಸ್ಪಷ್ಟಪಡಿಸಿದ್ದಾರೆ.

Advertisement

“ಅಮ್ಮನ ಹೆಸರಲ್ಲಿ ಕೊಡಲಾಗುವ “ಸೌಹಾರ್ದ ಪ್ರಶಸ್ತಿ’ಯಲ್ಲಿ ಸಿನಿಮಾ ರಂಗದ ಒಬ್ಬರಿಗೆ ಕೊಡುವುದರ ಜತೆಯಲ್ಲಿ ಇತರೆ ಕ್ಷೇತ್ರದ ಇಬ್ಬರು ಸಾಧಕರಿಗೆ ಪ್ರಶಸ್ತಿ ಕೊಡಲಾಗುವುದು. ಅದರಲ್ಲೂ ಸಾಧನೆ ಮಾಡಿದ ಮಹಿಳೆಗೆ ಆ ಪ್ರಶಸ್ತಿಯನ್ನು ನೀಡಲಾಗುವುದು. ಇನ್ನು, ಕಂಠೀರವ ಸ್ಟುಡಿಯೋದಲ್ಲಿ ಅಮ್ಮನ ಸಮಾಧಿಯನ್ನು ಅಭಿವೃದ್ಧಿಗೊಳಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ. ಅದಕ್ಕೊಂದು ಟೆಂಡರ್‌ ಕರೆದು, ಆ ನಂತರ ಪ್ರಕ್ರಿಯೆ ಶುರುವಾಗಲಿದೆ. ಈಗ ಮಳೆ ಬಿದ್ದು, ಎಲ್ಲವೂ ಹಸಿಯಾಗಿದೆ. ಹಾಗಾಗಿ, ಅಮ್ಮನ ಸಮಾಧಿ ಸುತ್ತ ಕೆಲಸ ಮಾಡೋಕು ಸುಲಭವಾಗಿದೆ. ಈಗಾಗಲೇ ಸರ್ಕಾರದ ಸಮಿತಿ ಆ ಬಗ್ಗೆ ರೂಪುರೇಷೆ ಸಿದ್ಧತೆಯಲ್ಲಿದೆ. ಆ ಕಡೆ ಅಪ್ಪಾಜಿ, ಈ ಕಡೆ ಅಮ್ಮನ ಸಮಾಧಿಗೆ ಪ್ರದಕ್ಷಿಣೆ ಹಾಕಿ ಬರಲು ಅನುಕೂಲವಾಗುವಂತೆ ಮಾಡುವ ಉದ್ದೇಶವೂ ಇದೆ. ಸದ್ಯಕ್ಕೆ ಈ ಕಾರ್ಯ ರೂಪಗೊಳ್ಳಲು ಸರ್ಕಾರ ಟೆಂಡರ್‌ವೊಂದನ್ನು ಕರೆಯಬೇಕಿದೆ. ಆ ಬಳಿಕ ಎಲ್ಲವೂ ನಡೆಯಲಿದೆ’ ಎಂಬುದು ರಾಘವೇಂದ್ರ ರಾಜಕುಮಾರ್‌ ಮಾತು.

ನಟನೆ ಮಾಡೋ ಆಸೆ ಇದೆ

 ನಟನೆಯ ಬಗ್ಗೆ ಮಾತನಾಡಿದ ರಾಘವೇಂದ್ರ ರಾಜಕುಮಾರ್‌,”ಈಗಲೂ ಸಹ ನನಗೆ ನಟನೆ ಮಾಡುವ ಆಸೆ ಇದೆ.ಈಗಷ್ಟೇ ಆರೋಗ್ಯ ಸುಧಾರಿಸಿದೆ. ಹಾಗಂತ, ನಾನು ಹೀರೋ ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತೇನೆ ಅಂತೇನಿಲ್ಲ. ನಾನು ಡೀಸೆಂಟ್‌ ಆಗಿರುವ ಪಾತ್ರವಿದ್ದರೆ, ಅದು ನನಗೆ ಸರಿಹೊಂದುವುದಾದರೆ ಖಂಡಿತ ಮಾಡುತ್ತೇನೆ. ಪೋಷಕ ಪಾತ್ರವಿದ್ದರೂ, ಸರಿ, ಅದು ಚೆನ್ನಾಗಿರಬೇಕಷ್ಟೇ’ ಎನ್ನುವ ರಾಘವೇಂದ್ರರಾಜಕುಮಾರ್‌, “ಅಪ್ಪಾಜಿ ಬರ್ತ್‌ಡೇ ವಿಶೇಷ ಕಾರ್ಯಕ್ರಮ ಮಾಡಲು ಯೋಚಿಸಿದ್ದೇವೆ. ಅದು ಸಸಿ ನೆಡುವುದು. ನಾನು, ಶಿವಣ್ಣ ಹಾಗೂ ಅಪ್ಪು ಸೇರಿ, ಅಭಿಮಾನಿಗಳಿಗೆ ಹಾಗೂ ಜನರಿಗೆ ಒಂದು ಸಂದೇಶ ಕೊಡ್ತೀವಿ. ಒಂದು ಸಸಿ ನೆಟ್ಟು, ಫೋಟೋ ಕಳುಹಿಸಿಕೊಡಿ ಎಂಬ ಸಂದೇಶವದು. ಆ ಮೂಲಕ  ಒಂದಷ್ಟು “ಹಸಿರು ಉಳಿಸಿ’ ಎಂಬ ಘೋಷಣೆ ಮಾಡಲಿದ್ದೇವೆ. ಈ ಕಾರ್ಯಕ್ರಮದಡಿ ಕೇವಲ ಸಸಿ ನೆಡುವುದಷ್ಟೇ ಅಲ್ಲ, ಸಾಲು ಮರದ ತಿಮ್ಮಕ್ಕ ಅವರೊಂದಿಗೆ ಸಸಿಗಳನ್ನು ಹೇಗೆಲ್ಲಾ ಪೋಷಿಸಬೇಕೆಂಬ ಬಗ್ಗೆಯೂ ತಿಳಿದುಕೊಂಡು, ಅವರೊಂದಿಗೆ ಈ ಹಸಿರು ಕ್ರಾಂತಿಗೆ ಮುಂದಾಗಲಿದ್ದೇವೆ. ಇದು ಹೆಸರಿಗೋಸ್ಕರ ಮಾಡುವ ಕೆಲಸವಲ್ಲ, ಎಲ್ಲೆಡೆಯೂ ಪಸರಿಸಬೇಕೆಂಬ ಉದ್ದೇಶ ನಮ್ಮದು’ ಎನ್ನುತ್ತಾರೆ ಅವರು.

ಸೋಲು ಗೆಲುವಾಗಬೇಕು

Advertisement

ರಾಜಕುಮಾರ್‌ ಅವರ ಮಾತುಗಳನ್ನು ನೆನಪಿಸಿಕೊಂಡ ರಾಘವೇಂದ್ರ ರಾಜಕುಮಾರ್‌, ಅಪ್ಪಾಜಿ ಯಾವಾಗಲೂ ಹೇಳುತ್ತಿದ್ದರು, “ಸೋಲು ಗೆಲುವಾಗಬೇಕು’ ಅಂತ. ಆ ಬಗ್ಗೆ ನನಗೆ ಸರಿಯಾಗಿ ಅರ್ಥವಾಗಲಿಲ್ಲ.

ಅವರು ನಮ್ಮನ್ನಗಲುವ ಮೂರು ತಿಂಗಳ ಹಿಂದೆ ಹೇಳಿದ್ದರು. “ಸೋಲು ಗೆಲುವಾಗಬೇಕು’ ಎಂಬ ಬಗ್ಗೆ
ಕೇಳಿದಾಗ, ನನ್ನ ಅಪ್ಪನ ಮಾತಿಗೆ ಸೋತು ಅಮ್ಮನ ಮದುವೆಯಾದೆ. ಈಗ ನೋಡು ಎಷ್ಟೊಂದು ಗೆಲುವಿದೆ. ಬದುಕಲ್ಲಿ ಸೋಲು-ಗೆಲುವು ಸಹಜ. ಬದುಕಿನಲ್ಲಿ ಬಂದದ್ದನ್ನು ಸ್ವೀಕರಿಸಬೇಕು. ಅದರಿಂದ ತಪ್ಪಿಸಿಕೊಂಡು ಓಡಿ ಹೋಗುವುದಕ್ಕಾಗುವುದಿಲ್ಲ. ಪ್ರತಿ ದಿನ ಹೋರಾಟ ಮಾಡಬೇಕು, ಸೋಲು, ಗೆಲುವು ಕಾಣುತ್ತಿರಲೇಬೇಕು. ಅಪ್ಪ, ಅಮ್ಮ ಹೇಳಿಕೊಟ್ಟಿದ್ದನ್ನೇ ನಾವು ಪಾಲಿಸುತ್ತಿದ್ದೇವೆ. ಈಗ ನಾನು ನಿತ್ಯವೂ ಜಿಮ್‌ ಹಾಗೂ ಪಿಜಿಯೋಥೆರಫಿ ಮಾಡುತ್ತಿದ್ದೇನೆ.

ಕಾಲಕ್ರಮೇಣ ಎಲ್ಲವೂ ಸರಿಹೋಗುತ್ತೆ ಎಂದು ನಂಬಿದ್ದೇನೆ. ಇನ್ನು, ಅಪ್ಪಾಜಿ ಹೆಸರಿನ ಐಎಎಸ್‌ ಕೋಚಿಂಗ್‌ ಅಕಾಡೆಮಿ ಕೂಡ ಚೆನ್ನಾಗಿ ನಡೆಯುತ್ತಿದೆ. ನನ್ನ ಮಗ ಗುರು ಅದನ್ನು ನಿರ್ವಹಣೆ ಮಾಡುತ್ತಿದ್ದಾನೆ. ನಮ್ಮ ಅಕಾಡೆಮಿಯಿಂದ ಒಂದಷ್ಟು ಅಧಿಕಾರಿಗಳು ಹೊರಬಂದರೆ, ಅದಕ್ಕಿಂತ ಖುಷಿ
ಬೇರೊಂದಿಲ್ಲ ಅಲ್ಲವೇ’ ಎನ್ನುತ್ತಲೇ ಮಾತು ಮುಗಿಸುತ್ತಾರೆ ರಾಘವೇಂದ್ರ ರಾಜಕುಮಾರ್‌.

Advertisement

Udayavani is now on Telegram. Click here to join our channel and stay updated with the latest news.

Next