Advertisement

ಸುಮಕ್ಕ ಕಂಡಂತೆ ಪಾರ್ವತಮ್ಮ

09:04 AM May 18, 2019 | mahesh |

ಚಿತ್ರರಂಗವನ್ನು ಗಮನಿಸಿದರೆ, ನಾಯಕಿ ಪ್ರಧಾನ ಚಿತ್ರಗಳ ಸಂಖ್ಯೆ ಕಡಿಮೆ. ನಾಯಕಿ ಪ್ರಧಾನ ಚಿತ್ರಗಳಿಗೆ ಪ್ರೋತ್ಸಾಹವೂ ಕಡಿಮೆ. ಆದರೆ, ಹರಿಪ್ರಿಯಾಗೆ ಅವಕಾಶ ಸಿಕ್ಕಿದೆ. ವೃತ್ತಿರಂಗದಲ್ಲಿ 25 ನೇ ಚಿತ್ರ ಮಾಡುವುದು ಅಂದರೆ ಸುಲಭವಲ್ಲ.

Advertisement

ಸುಮಲತಾ ಅಂಬರೀಶ್‌ ಅವರು ಮಾತಿಗೆ ಸಿಗುವುದು ಅಪರೂಪ. ಅದರಲ್ಲೂ ಲೋಕಸಭೆ ಚುನಾವಣೆ ಮುಗಿದ ಬಳಿಕವಂತೂ ಎಲ್ಲೂ ಮಾತಿಗೆ ಸಿಕ್ಕೇ ಇರಲಿಲ್ಲ. ಅವರು ಅಭಿನಯಿಸಿರುವ “ಡಾಟರ್‌ ಆಫ್ ಪಾರ್ವತಮ್ಮ’ ಚಿತ್ರದ ಪತ್ರಿಕಾಗೋಷ್ಠಿಗೆ ಆಗಮಿಸಿದ್ದ ಸಂದರ್ಭದಲ್ಲಿ ಹಾಗೊಮ್ಮೆ ಮಾತಿಗೆ ಕುಳಿತರು. ತಾವು ನಿರ್ವಹಿಸಿದ ಪಾತ್ರ, ಚಿತ್ರದಲ್ಲಾದ ಅನುಭವ, ಹೊಸಬರ ಜೊತೆಗಿನ ಕೆಲಸದ ಬಗ್ಗೆ ಹೇಳುತ್ತಾ ಹೋದರು….

“ಈ ಸಿನಿಮಾ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್‌ ಅವರ ರಿಯಲ್‌ ಲೈಫ್ಗೆ ಏನಾದರೂ ಸಂಬಂಧ ಇದೆಯಾ ಅಂತ ಅಂಬರೀಶ್‌ ಕೂಡ ಪ್ರಶ್ನಿಸಿದ್ದರು..’

-ಅಂಬರೀಶ್‌ ಅವರು ಹೀಗೆ ಪ್ರಶ್ನೆ ಮಾಡೋಕೆ ಕಾರಣ, “ಡಾಟರ್‌ ಆಫ್ ಪಾರ್ವತಮ್ಮ’ ಸಿನಿಮಾ. ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ, ಸ್ವತಃ ಅಂಬರೀಶ್‌ ಅವರೇ, “ಪಾರ್ವತಮ್ಮ ಅವರಿಗೇನಾದರೂ ಈ ಚಿತ್ರ ಸಂಬಂಧ ಇದೆಯೇನಪ್ಪಾ’ ಅಂತ ನಿರ್ದೇಶಕ, ನಿರ್ಮಾಪಕರನ್ನು ಪ್ರಶ್ನಿಸಿದ್ದರಂತೆ. ಆ ನೆನಪನ್ನು ಮೆಲುಕು ಹಾಕಿದ ಸುಮಲತಾ ಅಂಬರೀಶ್‌, “ಡಾಟರ್‌ ಆಫ್ ಪಾರ್ವತಮ್ಮ’ ಕುರಿತು ಹೇಳಿದ್ದಿಷ್ಟು. “ನಾನು ಕಥೆ ಮತ್ತು ಪಾತ್ರ ಕೇಳಿದಾಗ ಚಿತ್ರಕ್ಕಿನ್ನೂ ಟೈಟಲ್‌ ಫಿಕ್ಸ್‌ ಆಗಿರಲಿಲ್ಲ. ಕಥೆಯ ಎಳೆ ಚೆನ್ನಾಗಿತ್ತು. ಪಾತ್ರದಲ್ಲೂ ವಿಶೇಷತೆ ಇತ್ತು. ಒಪ್ಪಿಕೊಂಡೆ. ಹೊಸತಂಡವಾದರೂ ತುಂಬಾ ಚೆನ್ನಾಗಿ ಕೆಲಸ ಮಾಡಿದೆ. ಶೀರ್ಷಿಕೆಗೊಂದು ಫೋರ್ಸ್‌ ಇದೆ. ಅದೇ ಚಿತ್ರದ ಹೆಚ್ಚುಗಾರಿಕೆ. ಅಂಬರೀಶ್‌ ಅವರು ನನ್ನ ಅಭಿನಯದ ಕೊನೆಯ ಚಿತ್ರ ನೋಡಿದ್ದು. “ತಾಯಿಗೆ ತಕ್ಕ ಮಗ’. ಆ ಚಿತ್ರದ ಪ್ರೀಮಿಯರ್‌ ಶೋ ವೇಳೆ ನಾನು ಸ್ವಿಜರ್‌ಲೆಂಡ್‌ನ‌ಲ್ಲಿದ್ದೆ. ಅಂಬರೀಶ್‌ ಅವರು ಆ ಚಿತ್ರ ನೋಡಿ, ವಿಶ್‌ ಮಾಡಿದ್ದರು. ನಾನು ಅಜೇಯ್‌ರಾವ್‌ಗೆ “ತಾಯಿಗೆ ತಕ್ಕ ಮಗ’ ಚಿತ್ರದಲ್ಲಿ ತಾಯಿಯಾಗಿ ನಟಿಸಿದ್ದೇನೆ. “ಜೆಸ್ಸಿ’ ಸಿನಿಮಾದಲ್ಲೂ ಧನಂಜಯ್‌ಗೆ ಅಮ್ಮನಾಗಿ ನಟಿಸಿದ್ದೇನೆ. ಮೊದಲ ಸಲ ಹರಿಪ್ರಿಯಾಗೆ ಅಮ್ಮನಾಗಿ ನಟಿಸಿದ್ದೇನೆ. ಅಮ್ಮನಿಗೆ ಹೆಣ್ಮಕ್ಳು ಅಂದರೆ ಅತಿಯಾದ ಪ್ರೀತಿ ಇದ್ದೇ ಇರುತ್ತೆ. ಆ ಪ್ರೀತಿ ಹೇಗಿರುತ್ತೆ ಎಂಬುದಕ್ಕೆ “ಡಾಟರ್‌ ಆಫ್ ಪಾರ್ವತಮ್ಮ’ ಸಾಕ್ಷಿ. ಇಲ್ಲೊಂದು ತಾಯಿ-ಮಗಳ ನಡುವಿನ ಕಥೆ ಇದೆ. ಇಬ್ಬರ ಸ್ಪೆಷಲ್‌ ಬಾಂಡಿಂಗ್‌ ಚಿತ್ರದ ಹೈಲೈಟ್‌. ನಿಜ ಹೇಳುವುದಾದರೆ, ನಾನು ನಟಿಸುವ ಮುನ್ನ ಟೈಟಲ್‌ ಇದು ಅಂತ ಗೊತ್ತೇ ಇರಲಿಲ್ಲ. “ಡಾಟರ್‌ ಆಫ್ ಪಾರ್ವತಮ್ಮ’ ಶೀರ್ಷಿಕೆ ಫಿಕ್ಸ್‌ ಆದಾಗ ಬಹಳಷ್ಟು ಜನರಿಗೆ ಒಂದು ಪ್ರಶ್ನೆ ಇತ್ತು. ಇದು ಪಾರ್ವತಮ್ಮ ಅವರ ರಿಯಲ್‌ ಲೈಫ್ ಚಿತ್ರ ಇರಬಹುದಾ ಅಂತ. ಆದರೆ, ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಕಥೆಗೆ ಪೂರಕವಾಗಿದೆ. ಅದರಲ್ಲೂ ಟೈಟಲ್‌ ಕ್ಯಾಚಿ ಆಗಿದೆ ಎಂಬ ಕಾರಣಕ್ಕೆ ಶೀರ್ಷಿಕೆ ಇಡಲಾಗಿದೆಯಷ್ಟೇ.

“ಡಾಟರ್‌ ಆಫ್ ಪಾರ್ವತಮ್ಮ’ ಶೀರ್ಷಿಕೆ ಎಷ್ಟು ಫೋರ್ಸ್‌ ಇದೆಯೋ, ಅಷ್ಟೇ ಫೋರ್ಸ್‌ ಕಥೆಯಲ್ಲೂ ಇದೆ. ಇನ್ನು, ಇದು ಸಂಪೂರ್ಣ ಹರಿಪ್ರಿಯಾ ಅವರ ಸಿನಿಮಾ. ಇಡೀ ಸಿನಿಮಾವನ್ನು ಅವರೇ ಕ್ಯಾರಿ ಮಾಡಿದ್ದಾರೆ. ನನ್ನದು ಸ್ಮಾಲ್‌ ರೋಲ್‌. ಆದರೂ, ಅದೊಂದು ಪ್ರಮುಖ ಪಾತ್ರ. ನನಗಿಂತ ಜವಾಬ್ದಾರಿ ಹರಿಪ್ರಿಯಾ ಅವರ ಮೇಲಿದೆ’ ಎಂದರು ಸುಮಲತಾ ಅಂಬರೀಶ್‌.

Advertisement

ಸುಮಲತಾ ಅವರ ಸಿನಿ ಕೆರಿಯರ್‌ನಲ್ಲಿ ತುಂಬಾ ಖುಷಿಕೊಟ್ಟ ಸಿನಿಮಾಗಳಲ್ಲಿ “ಡಾಟರ್‌ ಆಫ್ ಪಾರ್ವತಮ್ಮ’ ಕೂಡಾ ಒಂದಂತೆ. “ನಾನು ಐದು ಭಾಷೆಗಳಲ್ಲಿ 200 ಪ್ಲಸ್‌ ಚಿತ್ರಗಳಲ್ಲಿ ನಟಿಸಿದ್ದೇನೆ. ಇಷ್ಟೂ ಚಿತ್ರಗಳ ಪೈಕಿ ಮೊದಲ ಸಲ ಥ್ರಿಲ್ಲರ್‌ ಜಾನರ್‌ ಸಿನಿಮಾ­ದಲ್ಲಿ ಕಾಣಿಸಿಕೊಂಡಿದ್ದೇನೆ. ಹಾಗಂತ, ಥ್ರಿಲ್ಲರ್‌ ಟ್ರ್ಯಾಕ್‌ ಜನರಿಗೆ ಹೊಸದಲ್ಲದಿದ್ದರೂ, ಇಲ್ಲಿ ಹೊಸತನವಿದೆ. ನಾನಿಲ್ಲಿ ಮಿಡ್ಲ್ಕ್ಲಾಸ್‌ ಮದರ್‌ ಪಾತ್ರ ಮಾಡಿದ್ದೇನೆ. ನನ್ನ ಹಾಗೂ ಹರಿಪ್ರಿಯಾ ಅವರ ಕಾಂಬಿನೇಷನ್‌ ತುಂಬ ಸಹಜವಾಗಿ ಮೂಡಿಬಂದಿದೆ. ಇಲ್ಲಿ ತಾಯಿ, ಮಗಳ ಬಾಂಧವ್ಯ ಇದೆ. ಪ್ರೀತಿಯ ಆಳವಿದೆ. ಯಾವುದೇ ತಾಯಿ ಇರಲಿ, ತನ್ನ ಮಗಳು ಲೈಫ‌ಲ್ಲಿ ಚೆನ್ನಾಗಿರಬೇಕು, ಆಕೆ ಬದುಕಲ್ಲಿ ನೆಲೆ ಕಂಡುಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತೆ. ಇಲ್ಲೂ ಅಂಥದ್ದೊಂದು ಆಸೆ ಆ ಅಮ್ಮನದು. ಪ್ರತಿ ಫ್ರೆàಮ್‌ನಲ್ಲೂ ಹರಿಪ್ರಿಯಾ ಮತ್ತು ನನ್ನ ಕಾಂಬಿನೇಷನ್‌ ಸೀನ್‌ ನಟನೆ ಎನಿಸಲ್ಲ. ಅದು ನ್ಯಾಚ್ಯುರಲ್‌ ಆಗಿಯೇ ಮೂಡಿಬಂದಿದೆ. ಹೊಸ ತಂಡ, ಅನುಭವ ಪಡೆದು ಹೊಸ ಪ್ರಯೋಗ ಮಾಡಿದೆ. ಇಂತಹ ಚಿತ್ರಗಳನ್ನು ಮಾಡಲು ನಿರ್ಮಾಪಕರಿಗೆ ಪ್ಯಾಷನ್‌ ಇರಬೇಕು. ಅವರಿಗೆ ಒಳ್ಳೆಯದಾಗಬೇಕು. ಚಿತ್ರ ಚೆನ್ನಾಗಿ ಪ್ರದರ್ಶನ ಕಾಣ ಬೇಕೆಂಬುದು ನನ್ನಾಸೆ’ ಎಂದರು.

ನಾಯಕಿ ಪ್ರಧಾನ ಚಿತ್ರಗಳ ಬಗ್ಗೆ ಮಾತನಾಡುವ ಸುಮಲತಾ ಅಂಬರೀಶ್‌, “ಚಿತ್ರರಂಗದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ, ನಾಯಕಿ ಪ್ರಧಾನ ಚಿತ್ರಗಳ ಸಂಖ್ಯೆ ಕಡಿಮೆ. ಅದರಲ್ಲೂ ನಾಯಕಿ ಪ್ರಧಾನ ಚಿತ್ರಗಳಿಗೆ ಪ್ರೋತ್ಸಾಹವೂ ಕಡಿಮೆ. ಅಂತಹ ಅವಕಾಶ ಸಿಗುವುದು ಸಹ ಕಡಿಮೆ. ಆದರೆ, ಹರಿಪ್ರಿಯಾ ಅವರಿಗೆ ಒಳ್ಳೆಯ ಅವಕಾಶ ಸಿಕ್ಕಿದೆ. ವೃತ್ತಿರಂಗದಲ್ಲಿ 25 ನೇ ಚಿತ್ರ ಮಾಡುವುದು ಅಂದರೆ ಸುಲಭವಲ್ಲ. ನಮ್ಮ ಕಾಲದಲ್ಲಿ ಬೇಕಾದಷ್ಟು ಸಿನಿಮಾ ಬಂದರೂ, ನಾಯಕಿಯರಿಗೆ ಅಂತಹ ಸ್ಪೇಸ್‌ ಇರುತ್ತಿರಲಿಲ್ಲ. ಈಗಿನ ಕಾಲದಲ್ಲಿ ತುಂಬಾನೇ ಸ್ಪೇಸ್‌ ಸಿಗುತ್ತಿದೆ. ನಾಯಕಿಗೆ 25 ನೇ ಸಿನಿಮಾ ಅನ್ನೋದು ಮೈಲಿಗಲ್ಲು. ಹರಿಪ್ರಿಯಾಗೆ ಇನ್ನೂ ಒಂದಷ್ಟು ಚಿತ್ರಗಳಾಗಲಿ’ ಎಂದು ಆಶಿಸಿದರು.

ಅಂಬರೀಶ್‌ ಇಲ್ಲದ ಮೊದಲ ಬರ್ತ್‌ಡೇ ಬರುತ್ತಿದೆ. ಅವರಿಲ್ಲದೆ ಅಭಿಷೇಕ್‌ ಅಭಿನಯದ “ಅಮರ್‌’ ಹಾಗು ಸುಮಲತಾ ಅಂಬರೀಶ್‌ ನಟಿಸಿರುವ “ಡಾಟರ್‌ ಆಫ್ ಪಾರ್ವತಮ್ಮ’ ಚಿತ್ರ ಬಿಡುಗಡೆಯಾಗುತ್ತಿದೆ. ಈ ಕುರಿತು ಹೇಳುವ ಸುಮಲತಾ ಅವರು, “ಅಂಬರೀಶ್‌ ಅವರ ಆಶೀರ್ವಾದ ಇದ್ದೇ ಇರುತ್ತೆ. ಅವರ ಹುಟ್ಟುಹಬ್ಬಕ್ಕೆ ಇನ್ನೂ ಏನೂ ಪ್ಲಾನ್‌ ಮಾಡಿಲ್ಲ. ಮೇ.23 ರ ಬಳಿಕ ಒಂದು ಕ್ಲಿಯರ್‌ ಪಿಕ್ಚರ್‌ ಸಿಗುತ್ತೆ. ಫ‌ಲಿತಾಂಶ ನಂತರ ಬರ್ತ್‌ಡೇ ಪ್ಲಾನ್‌ ಮಾಡ್ತೀವಿ. ಇದುವರೆಗೂ ಚಿತ್ರರಂಗದಿಂದ ಒಳ್ಳೆಯ ಸಹಕಾರ ಸಿಕ್ಕಿದೆ. ಪಾಸಿಟಿವ್‌ ಟಾಕ್‌ ಬಂದಿದೆ. ಗೊತ್ತಿರುವ ಅನೇಕರು ಬಹಿರಂಗವಾಗಿ ಬೆಂಬಲಿಸದಿದ್ದರೂ, ಹಿಂದೆ ನಿಂತು ಬೆಂಬಲಿಸಿದ್ದಾರೆ. ಇನ್ನು, ಮೇ.31 ರಂದು “ಅಮರ್‌’ ಚಿತ್ರ ತೆರೆಗೆ ಬರುತ್ತಿದೆ. ಅಂಬರೀಶ್‌ ಅವರು, ಆರಂಭದಲ್ಲೇ ಅವರು ಅನ್‌ಫಿನಿಶ್‌ ಸಿನಿಮಾದ ಅರ್ಧ ಭಾಗ ನೋಡಿದ್ದರು. ಕೆಲ ಕರೆಕ್ಷನ್ಸ್‌, ಚೇಂಜಸ್‌ ಹೇಳಿದ್ದರು. ಅಭಿಷೇಕ್‌ನನ್ನು ಮೊದಲ ಸಲ ಸ್ಕ್ರೀನ್‌ ಮೇಲೆ ನೋಡಿದ ಅನುಭವ ಹಂಚಿಕೊಂಡಿದ್ದರು’ ಎಂದು ನೆನಪು ಮೆಲುಕು ಹಾಕಿದರು ಸುಮಲತಾ ಅಂಬರೀಶ್‌.

ಹಾಗಾದರೆ, ಸುಮಲತಾ ಅವರು ಮುಂದಿನ ದಿನಗಳಲ್ಲೂ ಅಭಿನಯದಲ್ಲಿ ಬಿಜಿಯಾಗುತ್ತಾರಾ? ಇದಕ್ಕೆ ಉತ್ತರಿಸಿದ ಅವರು, “ಸದ್ಯಕ್ಕೆ ಆ ಬಗ್ಗೆ ಯೋಚಿಸಿಲ್ಲ. ಅಭಿಷೇಕ್‌ ಜೊತೆ ನಟಿಸುವ ಯೋಚನೆಯೂ ಇಲ್ಲ. “ಅಮರ್‌’ ವೇಳೆಯೇ ಅವಕಾಶ ಇತ್ತು. ಬೇಡ ಅಂತ ಹೇಳಿದ್ದೆ. ಸದ್ಯಕ್ಕೆ ಅಭಿ ಜೊತೆ ನಟಿಸಲ್ಲ. ಆ ಬಗ್ಗೆ ಇಬ್ಬರೂ ಚರ್ಚೆ ಮಾಡಿ ಬೇಡ ಅಂದುಕೊಂಡಿದ್ದೇವೆ. “ಅಮರ್‌’ ರಿಲೀಸ್‌ ಆಗುವುದನ್ನು ನಾನೂ ಕಾಯುತ್ತಿದ್ದೇನೆ’ ಎಂದಷ್ಟೇ ಹೇಳಿ ಸುಮ್ಮನಾದರು ಸುಮಲತಾ ಅಂಬರೀಶ್‌.

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next