ಬೆಳಗಾವಿ: ನಮ್ಮ ವರ್ತನೆ, ತಪ್ಪುಗಳು ಭಾಷೆ ಹಾಗೂ ಏಕಪಕ್ಷೀಯ ನಿರ್ಧಾರದಿಂದ ಪಕ್ಷಕ್ಕೆ ಸೋಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪಕ್ಷದಲ್ಲಿ ಕೆಲ ಬದಲಾವಣೆ ತರುವ ಬಗ್ಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನಾಯಕರು ಸಲಹೆ ನೀಡಿದ್ದಾರೆ. ಇದನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಪುನರ್ ಕಟ್ಟುವ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಭವಿಷ್ಯದಲ್ಲಿ ಬದಲಾವಣೆ ಮಾಡಿದರೆ ಮಾತ್ರ ಪಕ್ಷಕ್ಕೆ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ:ನಾನು ಕಾಂಗ್ರೆಸ್ ಸೇರಲು ರಾಜ್ಯದ ಯಾವ ಕಾಂಗ್ರೆಸ್ ನಾಯಕರು ಕಾರಣರಲ್ಲ: ಸಿದ್ದರಾಮಯ್ಯ
ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಮುನ್ನಡೆಸಲು ಆತ್ಮಾವಲೋಕನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಎಲ್ಲ ನಾಯಕರು ಮುಕ್ತವಾಗಿ ಚರ್ಚೆ ಮಾಡಿದ್ದಾರೆ. ನಿಗಮಗಳ ಸ್ಥಾಪನೆ, ಮೀಸಲಾತಿ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವೇನು ಎಂಬುದರ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಿದರು.
ಪಕ್ಷದಲ್ಲಿ ಸೂಕ್ತ ಬದಲಾವಣೆ ತರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಒಪ್ಪಿಕೊಂಡಿದ್ದಾರೆ. ಒಬ್ಬ ನಾಯಕನಿಗೆ ಬೈಯುವುದರಿಂದ ಅವರ ಸಮುದಾಯಕ್ಕೆ ನೋವಾಗುತ್ತದೆ ಎನ್ನುವ ಸೂಕ್ಷ್ಮ ವಿಚಾರಗಳ ಕುರಿತು ಚರ್ಚೆ ನಡೆದಿದೆ ಎಂದರು.