ಬೆಂಗಳೂರು: ರಾಜ್ಯ ಬಿಜೆಪಿಯ ವಿಚಾರಗಳೆಲ್ಲವನ್ನೂ ಪಕ್ಷದ ಹೈಕಮಾಂಡ್ ಗಮನಿಸುತ್ತಿದೆ. ಏನೆಲ್ಲಾ ಚರ್ಚೆಯಾಗುತ್ತಿದೆಯೋ ಎಲ್ಲವನ್ನೂ ಹೈಕಮಾಂಡ್ ನೋಡುತ್ತಿದೆ. ಯಾವುದೇ ತೊಂದರೆಯಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಮತ್ತು ಸರ್ಕಾರದ ಮಧ್ಯೆ ಸಮನ್ವಯತೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಕೊಡುತ್ತೇವೆ. ನಮ್ಮ ಕೆಲಸಗಳನ್ನು ಮುಂದಿಟ್ಟುಕೊಂಡು ನಾವು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದರು.
ಹುಬ್ಬಳ್ಳಿಯಲ್ಲಿ ಎರಡು ದಿನಗಳು ಬಿಜೆಪಿ ಸಭೆ ವಿಚಾರಕ್ಕೆ ಮಾತನಾಡಿದ ಸಿಎಂ, ಪ್ರತಿ ಎರಡು ತಿಂಗಳಿಗೆ ಕಾರ್ಯಕಾರಿಣಿ ಸಭೆ ಮಾಡುತ್ತೇವೆ. ನಮ್ಮದೊಂದೇ ಪಕ್ಷ ನಿರಂತರವಾಗಿ ಕಾರ್ಯಕಾರಿಣಿ, ಪಕ್ಷ ಸಂಘಟನೆ ಸಭೆ ಮಾಡುವುದು. ಎರಡು ತಿಂಗಳಿಗೊಮ್ಮೆ ಹಲವು ವಿಚಾರ ಚರ್ಚೆ ಮಾಡಿ ಕೆಲವು ನಿರ್ಣಯ ತಗೆದುಕೊಳ್ಳುತ್ತೇವೆ ಎಂದರು.
ಸಂಪುಟ ಪುನಾರಚನೆ ಎನ್ನವುದು ಮಾಧ್ಯಮ ಸೃಷ್ಟಿ. ಪುನಾರಚನೆ ಆಗುವ ವಿಚಾರ ಗೊತ್ತಿಲ್ಲ. ನಾವು ಪಕ್ಷದಲ್ಲಿ ಏನು ಚರ್ಚೆ ಮಾಡುತ್ತೇವೆ, ಏನು ರಾಜಕಾರಣ ಮಾಡುತ್ತೇವೆಂದು ನಿಮಗೆ ಹೇಳುವ ಅಗತ್ಯ ಇಲ್ಲ. ಯಾವ ಸಂದರ್ಭದಲ್ಲಿ ಏನು ಚರ್ಚೆ ಮಾಡಬೇಕೋ ಅದನ್ನು ಮಾಡುತ್ತೇವೆ. ಅದು ನಮ್ಮ ಪಕ್ಷದ ಆಂತರಿಕ ವಿಚಾರ ಎಂದು ಸಿಎಂ ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್ ನಲ್ಲಿ ಕಿಡಿಹೊತ್ತಿದ ನಾಯಕತ್ವದ ಪ್ರಶ್ನೆ ?
ಇಂದು ಕೋವಿಡ್ ಮೃತರ ಕುಟುಂಬಗಳಿಗೆ ಪರಿಹಾರ ವಿಚಾರದ ಬಗ್ಗೆ ಮಾತನಾಡಿದ ಅವರು, ಯೋಜನೆ ಜಾರಿ ವಿಳಂಬವಾಗಿಲ್ಲ. ಕೋವಿಡ್ ಮೃತರ ಕುರಿತು ದಾಖಲೆಗಳ ಸಂಗ್ರಹ ನಡೆಯುತಿತ್ತು. ಎರಡು ತಿಂಗಳು ನೀತಿ ಸಂಹಿತೆ ಇತ್ತು. ಈಗಾಗಲೇ ಎಲ್ಲ ಕಡೆ ಪರಿಹಾರ ಕೊಡಲಾಗುತ್ತಿದೆ ಎಂದರು.