Advertisement

“ಪಾರ್ತಿಸುಬ್ಬನ ಕಾವ್ಯ : ಕನ್ನಡ ಸಾಹಿತ್ಯ ವಲಯದ ನಿರ್ಲಕ್ಷ್ಯ ಸಲ್ಲದು’

02:50 AM Jul 15, 2017 | |

ಕಾಸರಗೋಡು: ಕನ್ನಡ ಕಾವ್ಯಪರಂಪರೆಗೆ ಬತ್ತೀಸ ರಾಗತಾಳಗಳನ್ನು ಮತ್ತು ಕೇಕಯ ವೃತ್ತದ ಚೆಲುವನ್ನಿತ್ತು ಯಕ್ಷಗಾನವನ್ನು ಸಮೃದ್ಧಗೊಳಿಸಿದ ಮಹಾಕವಿ ಪಾರ್ತಿಸುಬ್ಬನ ಪಾಲಿಗೆ ಕನ್ನಡ ಸಾಹಿತ್ಯ ವಲಯ ದಿವ್ಯ ನಿರ್ಲಕ್ಷ್ಯವನ್ನು ತಾಳಿದೆ. ತೆಂಕಣ ಯಕ್ಷಗಾನಕ್ಕೆ ಪರಿಷ್ಕಾರಗಳ ಹೊಸ ಆಯಾಮಗಳನ್ನಿತ್ತು, ಪೂರ್ವರಂಗ ಸಹಿತ ದೃಶ್ಯ-ಕಾವ್ಯಗಳಲ್ಲಿ ಸಮಗ್ರ ರಂಗದೃಷ್ಟಿಯ ಪರಿಷ್ಕೃತ ಚೆಲುವನ್ನು ತುಂಬಿ ಕಲೆಯನ್ನು ಎತ್ತರಕ್ಕೇರಿಸಿದ ಪಾರ್ತಿಸುಬ್ಬನ ಕಾವ್ಯದ ಕಾಣಿಕೆಗಳನ್ನು ಕನ್ನಡ ಸಾಹಿತ್ಯ ವಲಯ ಮತ್ತು ರಂಗಭೂಮಿ ಸಮರ್ಪಕವಾಗಿ, ಗಂಭೀರವಾಗಿ ಅಧ್ಯಯನ ಮಾಡಬೇಕು. ಯಕ್ಷಗಾನ ಎಂದರೆ ಕೇವಲ ಒಂದು ರಂಗಪ್ರದರ್ಶನವಷ್ಟೇ ಅಲ್ಲ. ಅದು ಕವಿ ದೃಷ್ಟಿಯ ಸಮಗ್ರ ಕಾವ್ಯ ಆಧಾರಿತ ರಂಗಭೂಮಿ. 

Advertisement

ಯಕ್ಷಗಾನವನ್ನು ಪ್ರೀತಿಸು ವವರು ಈ ದಿಶೆಯಲ್ಲೂ ಗಮನ ಹರಿಸಬೇಕು ಎಂದು ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್‌ ಹೇಳಿದರು.

ಮೈಸೂರಿನ ಮಹಾರಾಜ ಕಾಲೇಜಿನ ಜ್ಯೂನಿಯರ್‌ ಬಿಎ ಸಭಾಂಗಣದಲ್ಲಿ ಕಾಲೇಜಿನ ಜಾನಪದ ವಿಭಾಗದ ಸಹಯೋಗದಿಂದ “ಇನ್ನೋವೇಟಿವ್‌ ಮೈಸೂರು’ ಆಯೋಜಿಸಿದ “ಪಾರ್ತಿಸುಬ್ಬ ನಮನ’ ಎಂಬ ಕಾರ್ಯಕ್ರಮದಲ್ಲಿ “ಯಕ್ಷಗಾನದ ವಾಲ್ಮೀಕಿ ಪಾರ್ತಿಸುಬ್ಬ’ ಎಂಬ ವಿಷಯದಲ್ಲಿ ಅವರು ಉಪನ್ಯಾಸ ವಿತ್ತು ಮಾತನಾಡಿದರು.  ಪಾರ್ತಿಸುಬ್ಬನ ಕಾವ್ಯಗಳ ಕೊಡುಗೆ ಮತ್ತು ಅದರ ಸೌಂದರ್ಯವನ್ನು ಸಮಗ್ರವಾಗಿ ಅರಿಯುವಲ್ಲಿ ಕನ್ನಡದ ಸಾಂಸ್ಕೃತಿಕ ವಲಯ ವಿಫಲವಾಗಿದೆ. 

ಪಾರ್ತಿಸುಬ್ಬನು ವಳ್ಳತ್ತೋಳ್‌, ಪಂಪ, ರನ್ನ, ಪೊನ್ನರ ಜಾಗದಲ್ಲಿ ನಿಲ್ಲುವ ಕವಿ ಮಾತ್ರವಲ್ಲ ಭಾರತದ ಶ್ರೇಷ್ಠ ರಂಗಕರ್ಮಿಗಳ ಸಾಲಿನಲ್ಲಿ ನಿಲ್ಲುವ ರಂಗಭೂಮಿಯ ದ್ರಾಷ್ಟಾರ ಕೂಡಾ ಹೌದು. ಆದರೆ ಕನ್ನಡದ ಮಣ್ಣಿನಲ್ಲಿ ಪಾರ್ತಿಸುಬ್ಬ ಮಹಾಕವಿಗೆ ಅರ್ಹ ಮನ್ನಣೆಯ ಶೋಧನೆಗಳು ನಡೆದದ್ದು ಕಡಿಮೆಯೇ ಹೌದು. ಕನಿಷ್ಠ ಪಕ್ಷ ಕವಿಯ ಹುಟ್ಟೂರು ಕುಂಬಳೆ ಸೀಮೆಯಲ್ಲಿ ಕೂಡ ಕವಿಗೆ ಅರ್ಹ ಮನ್ನಣೆಯ ಅಂಗೀಕಾರ ಇನ್ನೂ ಸಿಗದಿರುವುದು ನಮ್ಮ ಸಾಂಸ್ಕೃತಿಕ ಮನಃಸ್ಥಿತಿಯ ಸಂಕೇತ ಎಂದರು.

ಪಾರ್ತಿಸುಬ್ಬ ನಮನ ಕಾರ್ಯಕ್ರಮ ವನ್ನು ಕಾಲೇಜು ಪ್ರಾಂಸುಪಾಲೆ ಪ್ರೊ| ಸಿ.ಪಿ. ಸುನೀತ ಉದ್ಘಾಟಿಸಿದರು. ಸಾಮಾಜಿಕ ಧುರೀಣ ರಘುರಾಂ ವಾಜಪೇಯಿ ಅಧ್ಯಕ್ಷತೆ ವಹಿಸಿದರು. ಜಾನಪದ ಚಿಂತಕ ಪ್ರಕಾಶ್‌, ಹಿರಿಯ ವಿದ್ವಾಂಸ ಜಿ.ಎಸ್‌.ಭಟ್‌, ಪ್ರೊ|ವಿಜಯಲಕ್ಷಿ$¾ ಉಪಸ್ಥಿತರಿದ್ದರು. ಪಾರ್ತಿಸುಬ್ಬನ ಕಾವ್ಯಭಾಷೆ ಎಂಬ ವಿಷಯದಲ್ಲಿ ವಿದ್ವಾಂಸ, ಪ್ರಸಂಗಕರ್ತ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಉಪನ್ಯಾಸವಿತ್ತರು. ಮಹಾರಾಜ ಕಾಲೇಜಿನ ಜಾನಪದ ವಿಭಾಗ ಮುಖ್ಯಸ್ಥೆ ಡಾ.ಎಚ್‌.ಆರ್‌ ಚೇತನಾ ಸ್ವಾಗತಿಸಿ, ವಂದಿಸಿದರು. ವಿದ್ವಾನ್‌ ಹೇರಂಭ ಭಟ್‌ ನಿರೂಪಿಸಿದರು.

Advertisement

ಇದೇ ಸಂದರ್ಭದಲ್ಲಿ ಯಕ್ಷಗಾನಕ್ಕೆ ಕ್ರಿಯಾಶೀಲ ಪತ್ರಿಕೆಯನ್ನೊದಗಿಸಿದ ಕಾಸರಗೋಡು ಮೂಲದ ಹಿರಿಯ ಪತ್ರಕರ್ತ, ಕಣಿಪುರ ಸಂಪಾದಕ ಎಂ.ನಾ.ಚಂಬಲ್ತಿಮಾರ್‌ ಅವರನ್ನು ಮಹಾರಾಜ ಕಾಲೇಜಿನ ಜಾನಪದ ವಿಭಾಗದ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಬಳಿಕ ಪಾರ್ತಿಸುಬ್ಬ ವಿರಚಿತ “ಪಟ್ಟಾಭಿಷೇಕ ಭಂಗ’ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಸುಬ್ರಾಯ ಹೆಬ್ಟಾರ್‌, ಪರಮೇಶ್ವರ ಹೆಗಡೆ ತಾರೇಸರ, ಮುಮ್ಮೇಳದಲ್ಲಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ, ಸಂಕದಗುಂಡಿ ಗಣಪತಿ ಭಟ್‌, ವಿದ್ವಾನ್‌ ಕೃಷ್ಣ ಕುಮಾರಾಚಾರ್ಯ ಪಾಲ್ಗೊಂಡರು. ತೆಂಕಣ ಕರಾವಳಿ ಕುಂಬಳೆಯ ಕವಿ ಪಾರ್ತಿಸುಬ್ಬನಿಗೆ ಕನ್ನಡದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ನಮನ ಸಮಾರಂಭದಲ್ಲಿ ಮೈಸೂರಿನ ಪ್ರಮುಖ ಕಲಾಚಿಂತಕರು, ಜಾನಪದ-ಸಾಹಿತ್ಯ ವಿದ್ವಾಂಸರು ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next