Advertisement

ಪರ್ತಗಾಳಿ ಶ್ರೀಗಳ ದಿಗ್ವಿಜಯೋತ್ಸವ; ಕುಮಟಾದಲ್ಲಿ ಭವ್ಯ ಮೆರವಣಿಗೆ

06:22 PM Oct 17, 2022 | Team Udayavani |

ಕುಮಟಾ: ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್‌ ಸ್ವಾಮೀಜಿಗಳ ಚಾತುರ್ಮಾಸ ವ್ರತಾಚರಣೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ಹಾಗೂ ಹಲವು ವಿಶೇಷತೆಗಳೊಂದಿಗೆ ಪಟ್ಟಣದಾದ್ಯಂತ ದಿಗ್ವಿಜಯೋತ್ಸವ
ಮೆರವಣಿಗೆ ನಡೆಯಿತು.

Advertisement

ಬೆಳಗ್ಗೆ 9ಕ್ಕೆ ಶ್ರೀ ಶಾಂತೇರಿ ಕಾಮಾಕ್ಷಿ ದೇವಾಲಯದಲ್ಲಿ ದೇವಿಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಹೋಮ ಹವನಾದಿಗಳನ್ನು ನಡೆಸಲಾಯಿತು. ಸುಮಾರು ಒಂದು ಘಂಟೆಗಳ ಕಾಲ ನಡೆದ ಹವನದಲ್ಲಿ ಸ್ಥಳದೇವತೆ ಹಾಗೂ ಇತರ ದೈವಿಶಕ್ತಿಗಳಿಗೆ ವಿಶೇಷ ಸೇವೆ ಸಲ್ಲಿಸಿದರು. ಶಾಂತೇರಿ ಕಾಮಾಕ್ಷಿ ದೇವಾಲಯಕ್ಕೆ ಆಗಮಿಸಿದ ಗಜರಾಜನು ವೃಂದಾವನಸ್ಥ ಶ್ರೀಮದ್‌ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರ ಪ್ರತಿಮೆಗೆ ಹಾಗೂ ಶ್ರೀ ವಿದ್ಯಾಧೀಶ ತೀರ್ಥರಿಗೆ ಮಾಲಾರ್ಪಣೆ ಮಾಡಿ ನಮಸ್ಕರಿಸಿತು. ಬಳಿಕ ತುಲಾಭಾರಕ್ಕೆಂದು ತಂದಿದ್ದ ಅಕ್ಕಿ, ಕಾಯಿ, ಗೋಡಂಬಿ, ಕರ್ಜೂರ, ಬಾದಾಮಿ, ಬೇಳೆ ಕಾಳುಗಳು, ಎಣ್ಣೆ, ಜೇನುತುಪ್ಪ, ಸಕ್ಕರೆ, ಬೆಲ್ಲ ವಿವಿಧ ರೀತಿಯ ಹಣ್ಣು ಮುಂತಾದವುಗಳಿಗೆ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ್‌ ಸ್ವಾಮೀಜಿ ಪೂಜೆ ನೆರವೇರಿಸಿದರು.

ದಿಗ್ವಿಜಯೋತ್ಸವ ಕಾರ್ಯಕ್ರಮದ ಸುಮಾರು 50ಕ್ಕೂ ಹೆಚ್ಚು ಸೇವಾದಾರರು, ಶ್ರೀಗಳು ಹಾಗೂ ಶಾಂತೇರಿ ಕಾಮಾಕ್ಷಿ ದೇವಿಯಲ್ಲಿ ಇಷ್ಟಾರ್ಥ ಸಿದ್ಧಿಗಾಗಿ, ಕಷ್ಟ ಸಂಕಷ್ಟಗಳನ್ನು ನಿವಾರಣೆಗಾಗಿ ಸರ್ವರಿಗೂ ಒಳಿತಾಗುವಂತೆ ಸಂಕಲ್ಪಿಸಿದರು.ನಂತರ ತುಲಾಭಾರ ಸೇವೆ ನಡೆಯಿತು.

ಸಭಾ ಕಾರ್ಯಕ್ರಮ: ದಿಗ್ವಿಜಯೋತ್ಸವದ ದಿನದಂದೇ ಶ್ರೀಗಳ ಜನ್ಮದಿನವಾದ್ದರಿಂದ ವಿಶೇಷ ವಾದ್ಯಘೋಷದೊಂದಿಗೆ ಶ್ರೀಗಳಿಗೆ ಸಭಾ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಈ ವೇಳೆ ಅನೇಕ ಭಕ್ತರು ಶ್ರೀಗಳ ಪಾದ ಪೂಜೆ ನೆರವೇರಿಸಿ, ಶ್ರೀಗಳಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಶ್ರೀ ಮಠದ ಭಕ್ತ ವೃಂದವು ಕಾಣಿಕೆಯಾಗಿ ಚೆಕ್‌ ಗಳನ್ನು ಗುರುಗಳ ಕೈಗಿತ್ತು ಸೇವೆಯನ್ನು ಸಮರ್ಪಿಸಿದರು.

ಬಳಿಕ ಚಾತುರ್ಮಾಸ್ಯ ಆರಂಭದಿಂದ ಈವರೆಗೆ ಸಹಕರಿಸಿದ ಎಲ್ಲ ವಿಭಾಗದ ಪ್ರಮುಖರು, ವಿವಿಧ ಸೇವಾದರರಿಗೆ ಮಾನಪತ್ರವನ್ನು ನೀಡಿ ಗೌರವಿಸಲಾಯಿತು. ಯುವವಾಹಿನಿ ವತಿಯಿಂದ ಸ್ಮರಣಿಕೆ ಸಮರ್ಪಿಸಲಾಯಿತು. ಎಲ್ಲ ಸಮಾಜ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡು ಶ್ರೀಗಳ ದಿಗ್ವಿಜಯೋತ್ಸವವನ್ನು ಕಣ್ತುಂಬಿಕೊಂಡು, ಯಶಸ್ವಿಗೊಳಿಸಿದರು. ಕೊನೆಯಲ್ಲಿ ಶ್ರೀ ಶಾಂತೇರಿ ಕಾಮಾಕ್ಷಿ ದೇವಾಲಯದಲ್ಲಿ ರಥೋತ್ಸವವು ಸಮಾವೇಶಗೊಂಡಿತು.

Advertisement

ಸ್ತಬ್ಧ ಚಿತ್ರಗಳ ಮೆರಗು
ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, 54 ಸ್ತಬ್ಧ ಚಿತ್ರಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಆನೆ, ಜೋಡಿ ಅಶ್ವ, ಮಹಾನಂದಿ, ಗರುಡ ವಾಹನ, ಬಸಪ್ಪ ಬ್ಯಾಂಡ್‌ ಬೆಳಗಾಂವ, ರಾಧಾಕೃಷ್ಣ ಲೀಲೇ, ವೀರಗಾಸೆ, ಶಿವಾಜಿ ಮಹಾರಾಜ, ಅಘಾಸುರ ವಧೆ, ನಂದಿ ಧ್ವಜ, ಡೊಳ್ಳು ಕುಣಿತ, ಗಜೇಂದ್ರ ಮೋಕ್ಷ, ಡೈನೋಸಾರ್‌, ಒನಕೆ ಓಬವ್ವ, ಗೋಡೆ ಮೊಡೆ, ಸಮುದ್ರ ಮಂಥನ, ಗೂಳಿ, ಕಿಂಗ್‌ ಕಾಂಗ್‌, ನಾಸಿಕ್‌ ಬ್ಯಾಂಡ್‌, ವೃಂದಾವನಸ್ಥ ಶ್ರೀ ಶ್ರೀಮದ್‌ ವಿದ್ಯಾಧಿರಾಜ ಶ್ರೀಪಾದಂಗಳವರ ಪ್ರತಿಮೆ ಸ್ಥಾಪಿತ ರಥ, ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರ ಪುಷ್ಪಲಂಕಾರ ರಥ ಹೀಗೆ ಹಲವು ಸ್ತಬ್ಧ ಚಿತ್ರಗಳು ದಿಗ್ವಿಜಯೋತ್ಸವದ ರಥಯಾತ್ರೆಗೆ ಹೆಚ್ಚಿನ ಮೆರಗು ನೀಡಿತು.

ಕುಮಟಾದಲ್ಲಿ ದಿಗ್ವಿಜಯೋತ್ಸವ
ವಿಶೇಷವಾದ ಚಂಡೆ, ಮದ್ದಲೆ,ತಾಳ, ಪಂಚವಾದ್ಯಗಳ ವಾದ್ಯಘೋಷದೊಂದಿಗೆ ಆಗಮಿಸಿದ ಶ್ರೀಗಳು ಪುಷ್ಪಲಂಕಾರದಿಂದ ಕೂಡಿರುವ ರಥದಲ್ಲಿ ಆಸೀನರಾದರು. ಶ್ರೀ ಶಾಂತೇರಿ ಕಾಮಾಕ್ಷಿ ದೇವಾಲಯದಿಂದ ದಿಗ್ವಿಜಯೋತ್ಸವ ರಥಯಾತ್ರೆಯು ಮೂರುಕಟ್ಟೆಯ ಬಳಿ ಸಾಗಿಬಂದು ಅಲ್ಲಿರುವ ಸುಮಾರು 54 ಸ್ತಬ್ಧ ಚಿತ್ರ ವೀಕ್ಷಣೆಗೆ ಶ್ರೀಗಳು ಅನುಗ್ರಹಿಸಿದರು.

ನಂತರ ಬಸ್ತಿಪೇಟೇ ಕ್ರಾಸ್‌, ನೆಲ್ಲಿಕೇರಿ ಬಸ್‌ ನಿಲ್ದಾಣ ಸೇರಿದಂತೆ ಪ್ರಮುಖ ಮಾರ್ಗವಾಗಿ ಸುಮಾರು 5 ಕಿ.ಮೀ ಸಾಗಿತು. ಈ ಮದ್ಯೆ ಮೆರವಣಿಗೆ ಸಾಗುವ ದಾರಿಯಲ್ಲಿ ದಣಿವಾರಲೆಂದು ಬಸ್ತಿಪೇಟೆ, ಮಾಸ್ತಿಕಟ್ಟೆ, ಮಹಾಲಕ್ಷಿ ¾ ಕಂಪರ್ಟ್‌, ಬೆಣ್ಣೆ ಕಾಂಪ್ಲೆಕ್ಸ್‌ ಬಳಿ 4 ತಂಪು ಪಾನೀಯ ಹಾಗೂ ಲಘು ಉಪಾಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು.ದಾರಿಯುದ್ದಕ್ಕೂ ಸಾಗುವ ಭಕ್ತರು ದಣಿವಾರಿಸಿಕೊಳ್ಳಲು ಇದರ ಪ್ರಯೋಜನ ಪಡೆದುಕೊಂಡರು. ಮಣಕಿ ಮೈದಾನದ ಬಳಿ ಸುಮಾರು 30 ನಿಮಿಷಗಳ ಕಾಲ ಬೃಹತ್‌ ಸಿಡಿಮದ್ದುಗಳ ಹಾಗೂ ಲೇಸರ್‌ ಶೋ ನಡೆಯಿತು.

ಶ್ರೀಗಳ ಆಶೀರ್ವಚನ
ಯಾವುದೇ ದೈವ ಶಕ್ತಿಗೆ ನಾವು ಕೊಡುವ ವಸ್ತು ಪ್ರಧಾನವಲ್ಲ. ಬದಲಾಗಿ ನಮ್ಮ ಮನಸ್ಸಿನಿಂದ ದೇವರನ್ನು ಆರಾಧಿಸುವ ಭಕ್ತಿ ಪ್ರಧಾನವಾದದ್ದು. ಶ್ರೀ ಕೃಷ್ಣ ತುಲಾಭಾರಕ್ಕೆ ವಜ್ರ ವೈಡೂರ್ಯ, ಬಂಗಾರ, ಹಣ ಎಲ್ಲ ಸಂಪತ್ತನ್ನು ತಕ್ಕಡಿಯಲ್ಲಿ ಹಾಕಿ ತೂಗಿದಾಗಲೂ ಕೃಷ್ಣನ ಸರಿಸಮನಾಗಿ ತೂಕವು ತೂಗಿಲ್ಲ. ಬದಲಿಗೆ ರುಕ್ಮಿಣಿಯು ಭಕ್ತಿಯಿಂದ ಒಂದೇ ಒಂದು ತುಳಸಿ ದಳವನ್ನು ತಕ್ಕಡಿಲ್ಲಿಟ್ಟಾಗ ಅದು ಶ್ರೀಕೃಷ್ಣ ನ ಸಮನಾಗಿ ತೂಗಿತ್ತು ಎಂದು ಶ್ರೀಮದ್‌ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್‌ ಸ್ವಾಮೀಜಿ ನುಡಿದರು.

ದಿಗ್ವಿಜಯೋತ್ಸವ ರಥಯಾತ್ರೆ ಪೂರ್ವ ಆಶೀವರ್ಚನ ಕಾರ್ಯಕ್ರಮದಲ್ಲಿ ಭಕ್ತರನ ಅನುಗ್ರಹಿಸಿ ಅವರು ಮಾತನಾಡಿ, ನಿಷ್ಕಳಂಕ ಭಕ್ತಿಗೆ ಶ್ರೀ ಕೃಷ್ಣ ಸೋತಂತೆ, ನಿಮ್ಮ ಅಭೂತಪೂರ್ವ ಭಕ್ತಿಗೆ ನಾನೂ ಸೋತಿದ್ದೇನೆ ಎಂದರು.ನೀವು ನನಗೆ ತುಲಾಭಾರ ಸೇವೆಯಲ್ಲಿ ನನಗೆ ನೀಡಿರುವ ಎಲ್ಲ ವಸ್ತುಗಳಿಗಿಂತಲೂ ನಿಮ್ಮ ಪರಿಶುದ್ಧ ಮನಸ್ಸಿನಿಂದ ಮಾಡಿರುವ ಗುರುಭಕುತಿ ಅಪಾರವಾದದ್ದು. ಆದರೆ ಇದೆಲ್ಲವನ್ನು ನಾನು ನಿರೀಕ್ಷೆಯೂ ಮಾಡಿರಲಿಲ್ಲ.

ಸನ್ಯಾಸ ದೀಕ್ಷೆ ಪಡೆದಾಗ ಇಂತಹ ಒಂದು ಪವಿತ್ರ ಸ್ಥಾನ ಸಿಗಲಿದೆ ಎಂಬುದರ ಕಲ್ಪನೆ ಕೂಡ ಇಲ್ಲದಿರುವ ನನಗೆ ಈ ಪೀಠ ದೊರಕಿರುವುದು ದೈವೆಚ್ಚೆಯೇ ಹೊರತು ಬೇರೆನಿಲ್ಲ. ದೇವರು ಜನ್ಮ ನೀಡಿದ್ದಾನೆ, ಶ್ರೀಮದ್‌ ವಿದ್ಯಾಧಿರಾಜ ಶ್ರೀಪಾದ ವಡೇರ್‌ ಸ್ವಾಮೀಜಿಗಳು ಜೀವನವನ್ನು ನೀಡಿದ್ದಾರೆ. ಅದೇ ರೀತಿ ದೇವರು ಬುದ್ಧಿಯನ್ನು ಕರುಣಿಸಿದರೆ, ಸ್ವಾಮಿಯವರು ನನಗೆ ಜ್ಞಾನವನ್ನು ನೀಡುವುದರ ಜೊತೆಗೆ ಅಪಾರ ಶಿಷ್ಯವೃಂದವನ್ನೂ ನೀಡಿದ್ದಾರೆ. ಇಂದು ನನ್ನ ಜನ್ಮದಿನ, ದಿಗ್ವಿಜಯೋತ್ಸವಕ್ಕಿಂತಲೂ ಹೆಚ್ಚಾಗಿ ನೀವು ತೋರಿದ ಭಕ್ತಿಗೆ ಪರವಶನಾಗಿದ್ದೇನೆ ಎಂದರು. ವೇದಿಕೆ ಕಾರ್ಯಕ್ರಮದ ನಂತರ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಹವನದ ಪೂರ್ಣಾಹುತಿ ನಡೆಯಿತು.

ಬಳಿಕ ಶ್ರೀಗಳಿಂದ ದೇವರಿಗೆ ಪೂಜಾ ವಿಧಿ ವಿಧಾನಗಳು ನಡೆದು, ಎರಡು ಗಂಟೆಗೆ ಮಹಾ ಮಂಗಳಾರತಿ ನೆರವೇರಿಸಿದರು. ಬಳಿಕ ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡರು. ಶ್ರೀಗಳು, ಪರ ಊರಿನಿಂದ ಬಂದ ಭಕ್ತರಿಗೆ, ಸೇವಾದಾರರಿಗೆ ಫಲ ಮಂತ್ರಾಕ್ಷತೆ ನೀಡಿ, ಭಕ್ತರಿಗೆ ಧನಸಂಪತ್ತು ಪ್ರಾಪ್ತಿಯಾಗಲೆಂದು ಆಶೀರ್ವದಿಸಿ ಪ್ರಸಾದ ರೂಪದಲ್ಲಿ ನಾಣ್ಯಗಳನ್ನು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next