Advertisement

ದೇವದಾಸನ ಪಾರು

06:00 AM Jul 06, 2018 | |

ಅವನ ಹೆಸರೇ ದೇವದಾಸ. ಅಷ್ಟು ಚೆಂದದ ಹೆಸರು ಆ ಹಳ್ಳಿಯಲ್ಲಿ ಯಾರಿಗೂ ಇರಲಿಲ್ಲ. ಅವನು ಆ ಹಳ್ಳಿಯ ಮೂಲನಿವಾಸಿಯೇನೂ ಆಗಿರಲಿಲ್ಲ. ನಗರವಾಸಿಗಳಾಗಿದ್ದ ತಂದೆತಾಯಿಯರ ಮರಣದ ನಂತರ ಹಳ್ಳಿಯಲ್ಲಿರುವ ದೊಡ್ಡಮ್ಮನ ಮನೆಗೆ ಬಂದ ದೇವದಾಸ ತನ್ನೊಂದಿಗೆ ಪೇಟೆಯ ಶೋಕಿಯನ್ನೂ ಹೊತ್ತು ತಂದಿದ್ದ. ಕಣ್ಣಿಗೆ ಧರಿಸಬೇಕಾದ ಕನ್ನಡಕವನ್ನು ತಲೆಯ ಮೇಲೆ ಹಾಕಿಕೊಂಡು, ಅಂಗಿಯ ಮೇಲೊಂದು ದಪ್ಪನಾದ ಕಪ್ಪು ಕೋಟನ್ನು ಧರಿಸಿ, ಕಾಲಿಗೆ ಮಾಮೂಲಿಯಲ್ಲದ ಎತ್ತರದ ಬೂಟನ್ನು ಧರಿಸಿ ಕೆಲಸಕ್ಕೆ ಹೊರಟನೆಂದರೆ ಎದುರು ಸಿಕ್ಕ ಸಾತಜ್ಜಿ, “”ಅಯ್ನಾ, ರಾಜಕುಮಾರನಂಗೆ ಕಾಣಿ¤ಯಲ್ಲೋ. ನನ್ನ ದಿಟ್ಟಿನೆ ತಾಗೀತು, ತಡೆ” ಎಂದು ನಿಲ್ಲಿಸಿ ನೆಟಿಗೆ ಮುರಿಯುತ್ತಿದ್ದಳು. ಅದಕ್ಕವನು ಪಕ್ಕಾ ಸಿನೆಮಾದ ಹೀರೋ ಥರಾ ಪೋಸುಕೊಡುತ್ತಾ, “”ಅಜ್ಜಿ, ಇವತ್ತು ಬರೋವಾಗ ನಿನಗೆ ತನಿಗುಂಡಿ ತಂಬಾಕು ತರ್ತೆ ನೋಡು” ಎಂದು ಹೇಳಿ ಅವಳ ಹಿಗ್ಗು ಹೆಚ್ಚಿಸುತ್ತಿದ್ದ. 

Advertisement

ಹೀಗಿರುವ ದೇವದಾಸ ಊರಿನಲ್ಲೆಲ್ಲ ಪ್ರಸಿದ್ಧನಾಗಲು ಕಾರಣ ಅವನು ಹೇಳುತ್ತಿದ್ದ ಸಿನೆಮಾ ಕಥೆಗಳು. ನಗರದಲ್ಲಿರುವ ಟಾಕೀಸಿನಲ್ಲಿ ಈಗ ಬಂದಿರುವ ಸಿನೆಮಾದ ಹೆಸರು, ಹೀರೋ, ಹೀರೋಯಿನ್‌ಗಳ ವಿವರದೊಂದಿಗೆ ಅದರ ಕಥೆಯನ್ನೂ ರಂಜನೀಯವಾಗಿ ಹೇಳುತ್ತಿದ್ದ. ಸಿನೆಮಾದಲ್ಲಿರುವ ಪೋಲಿ ಹಾಡುಗಳಿಂದ ಹಿಡಿದು, ಕಣ್ಣೀರಿನ ದೃಶ್ಯಗಳವರೆಗೆ ಎಲ್ಲವನ್ನೂ  ಸುಮಾರಾಗಿ ಅಭಿನಯಿಸಿಯೇ ತೊರಿಸುತ್ತಿದ್ದ. ಜೀವನದಲ್ಲಿ ಒಂದೋ, ಎರಡೋ ಸಿನೆಮಾ ನೋಡಿದ ಆ ಊರಿನ ತರುಣ ಪಡೆ ಮತ್ತೆ ಸಿನೆಮಾ ನೋಡುತ್ತಿದ್ದೇವೆಂಬ ಭ್ರಮೆಯಲ್ಲಿ ಸಿಲುಕುವಂತೆ ಮಾಡುವ ಮೋಡಿ ಅವನ ಅಭಿನಯದಲ್ಲಿರುತ್ತಿತ್ತು. ಹಾಗೆ ಒಂದೆರಡು ಸಲ ಭಕ್ತಿಪ್ರಧಾನ ಸಿನೆಮಾಗಳಿಗೆ ಊರಿನ ಹಿರಿಯರ ದಂಡನ್ನೇ ಕರೆದುಕೊಂಡು ಹೋಗಿ ಸಿನೆಮಾದ ಬಗ್ಗೆ ಅವರಲ್ಲಿದ್ದ ಮಡಿವಂತಿಕೆಯನ್ನು ದೂರಮಾಡಿದ್ದ. ಹೀಗಿದ್ದ ದೇವದಾಸ ಆ ಊರಿನ ಹುಡುಗಿಯರ ಕನಸಿನಲ್ಲಿ ಹೀರೋ ಆಗಿ ಬರುತ್ತಿದ್ದುದು ವಿಶೇಷವೇನೂ ಆಗಿರಲಿಲ್ಲ.

ಇಂತಿಪ್ಪ ದೇವದಾಸ ಅದೊಂದು ದಿನ ಪಾರೂ ಎಂಬ ಹುಡುಗಿಯೊಂದಿಗೆ ಊರಿಗೆ ಬಂದಿಳಿದಿದ್ದ. ಅವಳದು ಅದೇ ಹೆಸರೋ ಅಥವಾ ಸಿನೆಮಾದ ಪ್ರಭಾವಕ್ಕೊಳಗಾಗಿ ಇವನೇ ಇಟ್ಟಿಧ್ದೋ ಎಂಬುದಿಲ್ಲಿ ಅಪ್ರಸ್ತುತ. ಊರಿಗೆಲ್ಲ ಇದೊಂದು ಮಾತಾಡುವ ವಿಷಯವಾದ್ದಂತೂ ಸತ್ಯ. ತಾನೇ ಹೆಣ್ಣು ಹುಡುಕಿ ಮದುವೆ ಮಾಡಬೇಕೆಂದಿದ್ದ ದೊಡ್ಡಮ್ಮನಿಗೆ ಮಾತ್ರ ಇದರಿಂದ ಬಹಳ ನಿರಾಸೆಯಾಯಿತು. ಕುಲ, ಗೋತ್ರ ಗೊತ್ತಿಲ್ಲದ ಹೆಣ್ಣೊಬ್ಬಳನ್ನವಳು ತನ್ನ ಮನೆ ತುಂಬಿಸಿಕೊಳ್ಳಲು ಅವಳು ತಯಾರಿರಲಿಲ್ಲ. ಹಾಗೆಂದು ತಬ್ಬಲಿ ಕಂದನನ್ನು ಮನೆಯಿಂದ ಹೊರದಬ್ಬಲೂ ಮನಸ್ಸಿರಲಿಲ್ಲ. ಹಾಗಾಗಿ ತನ್ನ ಮನೆಯ ಮಗ್ಗುಲ ಕೋಣೆಯೊಂದನ್ನು ಅವರ ವಾಸಕ್ಕಾಗಿ ನೀಡಿ ಸುಮ್ಮನಾದಳು. ಹೊಸದಾಗಿ ಶುರುವಾದ ಅವರಿಬ್ಬರ ಸಂಸಾರವನ್ನು ಊರ ಲಲನಾಮಣಿಯರು ಸಿನೆಮಾದಂತೆ ವೀಕ್ಷಿಸುತ್ತಿದ್ದರು. 

ಅದೇನೋ ಗೊತ್ತಿಲ್ಲ. ಮದುವೆಯೆಂಬ ಜವಾಬ್ದಾರಿ ಊರಿನ ಹೀರೋ ದೇವದಾಸನನ್ನೂ ಕೂಡ ಮಾಮೂಲಿ ಗಂಡು ಪಾತ್ರವಾಗಿ ಪರಿವರ್ತಿಸಿಬಿಟ್ಟಿತು. ಸಂಸಾರವೆಂದರೆ ಹಾಗೆ ತಾನೆ? ಅದರಲ್ಲೂ ಹೊಸದಾಗಿ ಸಂಸಾರ ಪ್ರಾರಂಭಿಸುವುದೆಂದರೆ ಜವಾಬ್ದಾರಿಗಳು ಇನ್ನೂ ಹೆಚ್ಚು. ಅಕ್ಕಿ, ಬೇಳೆ, ಮೀನು, ಮೆಣಸು, ಪಾತ್ರೆ, ಪಗಡಿ ಪಾರು ರಾಗವೆಳೆಯುವಾಗಲೆಲ್ಲ ದೇವದಾಸನಿಗೆ ಮುನಿಸು. ಹಾಗೆ ನೇರಾನೇರವಾಗಿ ಮೆಚ್ಚಿ ಬಂದ ಹೆಣ್ಣನ್ನು ಬಯ್ಯಲುಂಟೆ? ಅದಕ್ಕೆ ಅವನು ತನ್ನ ಓರಗೆಯ ಗಂಡಸರೆಲ್ಲರ ಉಪಾಯವನ್ನೇ ಕಂಡುಕೊಂಡ. ಸಂಜೆ ಬರುವಾಗ ಪಾರೂ ಹೇಳಿದ ಸಾಮಾನುಗಳನ್ನು ತರುವ ಬದಲು ಊರ ಗಡಂಗಿನಲ್ಲಿ ಗಂಟೆಗಟ್ಟಲೇ ಕುಳಿತು ತುಸು ಅಮಲೇರಿಸಿಕೊಂಡು ಬರುತ್ತಿದ್ದ. ನಶೆ ತಲೆಗೇರಿದಾಗ ಸಿನೆಮಾದ ಹಾಡುಗಳೆಲ್ಲ ಪುಂಖಾನುಪುಂಖವಾಗಿ ಅವನ ಬಾಯಿಂದ ಹೊರಬರುತ್ತಿದ್ದವು. ಹಾಗಾಗಿ ಹಾಡು ಕೇಳಿತೆಂದರೆ ದೇವದಾಸನ ಆಗಮನವಾಗುತ್ತಿದೆಯೆಂದು ಊರಿನವರೆಲ್ಲರಿಗೂ ಗೊತ್ತಾಗುತ್ತಿತ್ತು.

ಪಾಪದ ಹುಡುಗಿ ಪಾರು. ಇವನೊಂದಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದವಳು. ಜೊತೆಯಲ್ಲಿ ಇವನೊಂದಿಗೆ ಆಗಾಗ ಸಿನೆಮಾಕ್ಕೂ ಹೋಗುತ್ತಿದ್ದವಳು. ಸಿನೆಮಾದ ನಾಯಕ-ನಾಯಕಿಯಂತೆಯೇ ಸುಖವಾಗಿ ಬದುಕುವ ಕನಸು ಕಂಡವಳು. ಇವನಿಗಾಗಿ ಮನೆ, ಮಠ ಎಲ್ಲವನ್ನೂ ತೊರೆದು ಓಡಿಬಂದಿದ್ದಳು. ಈಗವಳ ನೆರವಿಗೆ ಯಾರೂ ಇರಲಿಲ್ಲ. ಹಾಗೆ ಕಂಡವರೊಂದಿಗೆ ಓಡಿಬಂದು ಹೆತ್ತವರ ಹೊಟ್ಟೆ ಉರಿಸಿದ್ದಕ್ಕೆ ಈಗ ಅನುಭವಿಸುತ್ತಿದ್ದಾಳೆ ನೋಡಿ ಎಂದು ದೊಡ್ಡಮ್ಮ ಇವಳಿಗೆ ಕೇಳುವಂತೆ ಎಲ್ಲರಿಗೂ ಹೇಳುತ್ತಿದ್ದರೆ ಅವಳ ಮನಸ್ಸಿನಲ್ಲಿ ಬಿರುಗಾಳಿಯೇಳುತ್ತಿತ್ತು. ಇವೆಲ್ಲಕ್ಕೂ ಒಂದು ಪೂರ್ಣವಿರಾಮವಿಡಲೇಬೇಕೆಂದು ಯೋಚಿಸತೊಡಗಿದಳು.

Advertisement

ಇದ್ದಕ್ಕಿದ್ದಂತೆ ಒಂದು ದಿನ ದೇವದಾಸನ ಹಾಡು ನಿಂತುಹೋಯಿತು. ಹೊತ್ತು ಮುಳುಗುವ ಮೊದಲೇ ಮನೆಸೇರಿ ಚೀಲ ಹಿಡಿದು ವಿಧೇಯ ಪತಿಯಂತೆ ಮೀನು ಪೇಟೆಗೆ ಹೋಗತೊಡಗಿದ ಅವನ ವರ್ತನೆ ಊರಿನವರೆಲ್ಲರ ಹೆಬ್ಬೇರಿಸಿತ್ತು. ಪಾರು ಮೀನು ಕತ್ತರಿಸುತ್ತಿದ್ದರೆ ಅವನು ಪಕ್ಕದಲ್ಲೇ ಕುಳಿತು ನೀರು ಹಾಕುತ್ತಿದ್ದ. ಹುಡುಗಿಯರು ಸಿನೆಮಾದ ಬಗ್ಗೆ ವಿಚಾರಿಸಿದರೂ ಅವನು ಸಿನೆಮಾಕ್ಕೂ ತನಗೂ ಏನೇನೂ ಸಂಬಂಧವಿಲ್ಲವೆಂಬಂತೆ “”ಯಾರಿಗ್ಗೊತ್ತು? ನಾನು ಆ ಬದೀಗ್‌ ಹೋಗ್ದೆ ಎಷ್ಟೋ ದಿನವಾಯ್ತು” ಎಂದು ಮುಖ ತಿರುಗಿಸಿ ಹೋಗಿಬಿಡುತ್ತಿದ್ದ. 

ಆಶ್ಚರ್ಯಚಕಿತರಾದ ಊರ ಹೆಂಗಳೆಯರು ದೇವದಾಸನ ಬಗ್ಗೆ ದೊಡ್ಡಮ್ಮನಲ್ಲಿ ಗುಟ್ಟಾಗಿ ವಿಚಾರಿಸಿದರು. ಅವಳು ಹೊಸದೊಂದು ಕಥೆಯನ್ನು ಹೊಳೆಯ ಸಾಕ್ಷಿಯಾಗಿ ಎಲ್ಲರಿಗೂ ಹೇಳಿದಳು. “”ಬಿಳಿ ಬಣ್ಣ ನೋಡಿ ಕಟ್ಟಿಕೊಂಡು ಬಂದ. ಒಳಗೊಳಗೆ ಭಾರೀ ಜೋರದೆ ಹೆಣ್ಣು. ಅದೇ, ಇವ ಎಲ್ಲ ಗಂಡಸರ ಹಾಗೆ ಏನೋ ತಲೆಬಿಸಿಗೆ ಸ್ವಲ್ಪ ಕುಡಿದು ಬಂದು ಗಂಡಸ್ತನ ತೋರಿಸ್ತಿದ್ನಲ್ಲ. ನಾನೂ ಹೆಣ್ಣಿಗೆ ಸ್ವಲ್ಪ ಗೊತ್ತಾಗ್ಲಿ ಅಂತ ಸುಮ್ನೆ ಇದ್ದೆ. ಆದ್ರೆ ಮೊನ್ನೆಯೊಮ್ಮೆ ಕೂಗಾಡ್ತಾ ಮನೆಯೊಳಗೆ ಹೋದ ಸ್ವಲ್ಪ ಹೊತ್ತಿನಲ್ಲಿಯೇ ಇವನ ಸ್ವರವೇ ಕೇಳಲಿಲ್ಲ. ಏನಪ್ಪಾ, ಇದ್ದಕ್ಕಿದ್ದಂತೆ ಹೀಗಾಯ್ತು. ಅವಳು ಮುಸು-ಮುಸು ಅಳುವ ಸದ್ದಾದರೂ ಕೇಳಬೇಕಿತ್ತಲ್ಲ. ಎಲ್ಲಾದರೂ ಇವನು ಕೊಟ್ಟ ಪೆಟ್ಟಿಗೆ ಜೀವ ಹಾರಿಸಿಬಿಟೊ ಹೇಗೆ? ಅಂತ ಎಣಿಸಿ ಮೆಲ್ಲನೆ ಬಾಗಿಲಿನೊಳಗೆ ಇಣಿಕಿದೆ. ಎಂಥಾ ಹೇಳ್ತಿರಿ! ಇವನ ಕುತ್ತಿಗೆಯನ್ನು ಗೋಡೆಗೆ ಒತ್ತಿ ಹಿಡಿದಿದ್ದಾಳೆ ತಾಟಗಿತ್ತಿ. ಇವನೋ ಬಿಡಿಸಿಕೊಳ್ಳಲಾರದೆ ವಿಲವಿಲನೆ ಒದ್ದಾಡ್ತಾ ಇದ್ದಾನೆ. ಇವನ ಕಣ್ಣುಗುಡ್ಡೆಯೆಲ್ಲ ಹೊರಬರುವಹಾಗೆ ಕಂಡಿತು. ತಕ್ಷಣ ಒಳಗೆ ಹೋಗಿ ಬಿಡೆ ತಾಯೇ ಅಂತ ಬೇಡಿಕೊಂಡೆ. ಇಲ್ಲ ಅಂದರೆ ಕೊಂದೇ ಬಿಡ್ತಿದ್ಲು. ಪಾಪದ ಗಂಡು ಅವನು. ಈಗ ಬಾಯಿ ಮುಚ್ಕೊಂಡು ಹೆಂಡತಿ ಹೇಳಿದಾಗೆ ಕೇಳ್ತಾನೆ. ಪೇಟೆ ಹೆಣ್ಣುಗಳ ಸಂಗ ಮಾಡಿದ್ದಕ್ಕೆ ಅನುಭವಿಸ್ತಿದ್ದಾನೆ ನೋಡಿ” ಎಂದು ಅಸಲು ಕಥೆಯನ್ನು ಬಿಚ್ಚಿಟ್ಟಳು.  ಅವಳ ಕಥೆಗೆ ಬೆರಗಾದ ಹೆಣ್ಣುಗಳಿಗೆ ಯಾಕೋ ಅಂದಿನಿಂದ ಪಾರೂ ಸಿನೆಮಾದ ನಾಯಕಿಯಂತೆ ಕಾಣತೊಡಗಿದಳು. 

ಸುಧಾ ಆಡುಕಳ

Advertisement

Udayavani is now on Telegram. Click here to join our channel and stay updated with the latest news.

Next