ನವದೆಹಲಿ: ʼಸೆಂಗೋಲ್ʼ ಅಂದರೆ ರಾಜದಂಡ ಇದು ರಾಜ ಪ್ರಭುತ್ವದ ಸಂಕೇತ, ಪ್ರಜಾಪ್ರಭುತ್ವದ ಆಡಳಿತದಲ್ಲಿ ಇದರ ಉಪಸ್ಥಿತಿ ಸರಿಯಲ್ಲ ಹಾಗಾಗಿ ಲೋಕಸಭೆಯಲ್ಲಿ ಸ್ಪೀಕರ್ ಪೀಠದ ಬಳಿ ಇರುವ ಜಾಗದಿಂದ ಸೆಂಗೋಲ್ ತೆರವುಗೊಳಿಸಿ ಸಂವಿಧಾನದ ಪ್ರತಿ ಇಡಬೇಕು ಎಂದು ಸಮಾಜವಾದಿ ಪಕ್ಷದ ಸಂಸದ ಆರ್.ಕೆ. ಚೌಧರಿ ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶದ ಮೋಹನ್ ಲಾಲ್ ಗಂಜ್ ಕ್ಷೇತ್ರದ ಸಂಸದ ಮಾತನಾಡಿ ಹೊಸ ಸಂಸತ್ ಭವನದಲ್ಲಿ ಸಂಗೋಲ್ ಸ್ಥಾಪಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಪ್ರಭುತ್ವವನ್ನು ಸ್ಥಾಪಿಸಿದೆ. ದೇಶದಲ್ಲಿ ರಾಜದಂಡದ ಮೂಲಕ ಆಳ್ಳಿಕೆ ನಡೆಸಲಾಗುತ್ತಿದೆಯೋ ಅಥವಾ ಸಂವಿಧಾನದ ಮೂಲಕವೋ ಎಂದು ಪ್ರಶ್ನಿಸಿದ್ಧಾರೆ.
“ ನರೇಂದ್ರ ಮೋದಿ ನೇತೃತ್ವದ ಹಿಂದಿನ ಸರ್ಕಾರವು ಲೋಕಸಭೆಯಲ್ಲಿ ಸೆಂಗೋಲ್ ಸ್ಥಾಪಿಸಿದೆ. ಸೆಂಗೋಲ್ ಎಂದರೆ ರಾಜದಂಡ ಅದು ರಾಜಪ್ರಭುತ್ವದ ಸಂಕೇತವಾಗಿದೆ. ಸಂವಿಧಾನವು ಪ್ರಜಾಪ್ರಭುತ್ವದ ಸಂಕೇತ. ರಾಜಪ್ರಭುತ್ವ ಅಂತ್ಯಗೊಳಿಸಿ ಈಗ ಪ್ರಜಾಪ್ರಭುತ್ವ ಸರ್ಕಾರ ರಚನೆಯಾಗಿದೆ. ಸಂವಿಧಾನದ ಉಳಿವಿಗಾಗಿ ಸಂಸತ್ತಿನಿಂದ ಸಂಗೋಲ್ ತೆಗೆಯಬೇಕು ಎಂದು ಚೌಧರಿ ಹೇಳಿದ್ದಾರೆ.
ಎಸ್‌ಪಿ ಸಂಸದನ ಹೇಳಿಕೆಗೆ ಬಿಜೆಪಿ ತೀವ್ರ ವಾಗ್ದಾಳಿ:
ಎಸ್‌ಪಿ ಸಂಸದ ಚೌಧರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾಜವಾದಿ ಪಕ್ಷ ಹಾಗೂ ವಿಪಕ್ಷ ಇಂಡಿಯಾ ಕೂಟವು ಸೆಂಗೋಲ್ ಬಗ್ಗೆ ಮಾತನಾಡಿ ದೇಶದ ಇತಿಹಾಸ ಹಾಗೂ ತಮಿಳು ಸಂಸ್ಕೃತಿಗೆ ಅಗೌರವ ತೋರಿಸಿದ್ದಾರೆ. ಸೆಂಗೋಲ್ ಭಾರತದ ಹೆಮ್ಮೆ ಅದಕ್ಕಾಗಿ ಸಂಸತ್ತಿನಲ್ಲಿ ಉನ್ನತ ಗೌರವ ಸಿಕ್ಕುವಂತೆ ಪ್ರಧಾನಿ ನರೇಂದ್ರ ಮೋದಿಜಿಯವರು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಚೌಧರಿಗೆ ತಮಿಳು ಸಂಸ್ಕೃತಿ ಬಗ್ಗೆ ಗೊತ್ತಿಲ್ಲ: ಕೇಂದ್ರ ಸಚಿವ ಮುರುಗನ್
ಕೇಂದ್ರ ಸಚಿವ ಎಲ್.ಮುರುಗನ್ ಮಾತನಾಡಿ ʼ ಸಮಾಜವಾದಿ ಪಕ್ಷದ ಸಂಸದ ಆರ್.ಕೆ. ಚೌಧರಿಯವರಿಗೆ ತಮಿಳು ಸಂಸ್ಕೃತಿ, ಸಂಪ್ರದಾಯ ಬಗ್ಗೆ ತಿಳಿದಿಲ್ಲ, ತಮಿಳು ಸೆಂಗೋಲ್‌ನ ಮೌಲ್ಯವೂ ಗೊತ್ತಿಲ್ಲ. ಎಲ್ಲರಿಗೂ ನ್ಯಾಯ, ಸಮಾನ ಸರ್ಕಾರ, ನ್ಯಾಯೋಚಿತ ಸರ್ಕಾರ ಎಂಬುದನ್ನು ಸೆಂಗೋಲ್ ಪ್ರತಿನಿಧಿಸುತ್ತದೆ. ಪ್ರಧಾನಿ ಮೋದಿಯವರು ಸೆಂಗೋಲ್‌ನ್ನು ಗುರುತಿಸಿ ಆ ಬಗ್ಗೆ ಸಂಶೋಧನೆ ನಡೆಸಿ ಹೊಸ ಸಂಸತ್ತಿನಲ್ಲಿ ಅಳವಡಿಸಿದ್ದಾರೆ. ಸಂಸದ ಚೌಧರಿಯವರ ಇಂತಹ ಹೇಳಿಕೆಗಳು ಖಂಡನಾರ್ಹ ಎಂದು ಹೇಳಿದರು.