Advertisement

ಕಲಾಪ ಸುಗಮವಾಗಿ ನಡೆಯುವಂತಾಗಲಿ

11:44 PM Mar 19, 2023 | Team Udayavani |

ಸಂಸತ್‌ನ ಬಜೆಟ್‌ ಅಧಿವೇಶನದ ದ್ವಿತೀಯಾರ್ಧ ಆರಂಭವಾಗಿ ಒಂದು ವಾರ ಕಳೆದಿದ್ದು ಆಡಳಿತ ಮತ್ತು ವಿಪಕ್ಷಗಳ ರಾಜಕೀಯ ವಾಕ್ಸಮರ, ನಾಯಕರ ಒಣಪ್ರತಿಷ್ಠೆಯಿಂದಾಗಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಯಾವೊಂದೂ ಕಲಾಪ ಸುಸೂತ್ರವಾಗಿ ನಡೆದಿಲ್ಲ. ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷವಷ್ಟೇ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ತಮ್ಮ ಕೆಸರೆರಚಾಟವನ್ನು ತೀವ್ರಗೊಳಿಸಿದ್ದು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ನಿರತವಾಗಿವೆ. ಈ ವಾಗ್ಯುದ್ಧ, ರಾಜಕೀಯ ಗುದ್ದಾಟದ ನಡುವೆ ಸಂಸತ್‌ ಅಧಿವೇಶನದ ಅಮೂಲ್ಯ ಸಮಯ ವ್ಯರ್ಥವಾಗುತ್ತಿದ್ದರೆ ಜನರ ತೆರಿಗೆ ಹಣ ವೃಥಾ ಪೋಲಾಗುತ್ತಿದೆ.

Advertisement

ಅಧಿವೇಶನದ ಆರಂಭದಿಂದಲೂ ವಿಪಕ್ಷ ಕಾಂಗ್ರೆಸ್‌ ಅದಾನಿ ಪ್ರಕರಣದ ತನಿಖೆಗಾಗಿ ಸಂಸತ್‌ನ ಜಂಟಿ ಸದನ ಸಮಿತಿ ರಚನೆಗೆ ಪಟ್ಟು ಹಿಡಿದು ಸಂಸತ್‌ನ ಒಳಗೂ ಹೊರಗೂ ಹೋರಾಟ ವನ್ನು ನಡೆಸುತ್ತಲೇ ಬಂದಿದೆ. ಆದರೆ ಆಡಳಿತಾರೂಢ ಬಿಜೆಪಿ ವಿಪಕ್ಷಗಳ ಬೇಡಿಕೆಯನ್ನು ತಳ್ಳಿ ಹಾಕಿದೆ. ಇದರ ಬೆನ್ನಲ್ಲೇ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಲಂಡನ್‌ನಲ್ಲಿ ನೀಡಿದ ಹೇಳಿಕೆಯಿಂದ ದೇಶ ಮತ್ತು ದೇಶದ ಜನತೆಗೆ ಅವಮಾನವಾಗಿದ್ದು ಅವರು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂಬ ಆಗ್ರಹವನ್ನು ಮುಂದಿಟ್ಟು ಕಾಂಗ್ರೆಸ್‌ ವಿರುದ್ಧ ಬಿಜೆಪಿ ಪ್ರತಿದಾಳಿ ನಡೆಸುತ್ತಿದೆ.

ಸಂಸತ್‌ನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವಣ ತಿಕ್ಕಾಟದಿಂದ ಉಭಯ ಸದನಗಳ ಕಲಾಪ ವ್ಯರ್ಥವಾಗುತ್ತಿದೆ. ರಾಹುಲ್‌ ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲ ಮತ್ತು ಅದಾನಿ ಪ್ರಕರಣವನ್ನು ಜೆಪಿಸಿ ತನಿಖೆಗೆ ಒಪ್ಪಿಸಬೇಕೆಂಬ ಬೇಡಿಕೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಕಾಂಗ್ರೆಸ್‌ ತನ್ನ ನಿಲುವಿಗೆ ಅಂಟಿಕೊಂಡಿದೆ. ಈಗ ಬಿಜೆಪಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಹುಲ್‌ ಗಾಂಧಿ ಅವರನ್ನು ಲೋಕಸಭೆಯಿಂದ ಉಚ್ಚಾಟಿಸುವ ಸಂಬಂಧ ಪ್ರಕ್ರಿಯೆ ಕೈಗೆತ್ತಿಕೊಳ್ಳುವಂತೆ ಪಕ್ಷದ ಸಂಸದರು ಲೋಕಸಭೆ ಸ್ಪೀಕರ್‌ ಅವರಿಗೆ ಲಿಖೀತವಾಗಿ ಮನವಿ ಮಾಡಿಕೊಂಡಿದ್ದಾರೆ. ಒಟ್ಟಾರೆ ಈವರೆಗಿನ ಬೆಳವಣಿಗೆಗಳನ್ನು ಅವಲೋಕಿಸಿದಾಗ ಈ ವಾರ ಕೂಡ ಸಂಸತ್‌ನ ಉಭಯ ಸದನಗಳ ಅಧಿವೇಶನ ಸುಗಮವಾಗಿ ನಡೆಯುವುದು ಅನುಮಾನವೇ.

ಆಡಳಿತ ಮತ್ತು ವಿಪಕ್ಷಗಳು ತಮ್ಮ ರಾಜಕೀಯ ಪ್ರತಿಷ್ಠೆಗಳನ್ನು ಮುಂದಿಟ್ಟು ಸಂಸತ್‌ನ ಉಭಯ ಸದನಗಳಲ್ಲಿ ನಡೆಸುತ್ತಿರುವ ಗದ್ದಲದಿಂದಾಗಿ ಜನರು ರೋಸಿ ಹೋಗುವಂತಾಗಿದೆ. ರಾಜಕೀಯ ವೈಷಮ್ಯದ ಭರಾಟೆಯ ನಡುವೆ ನಾಯಕರು ನೀಡುತ್ತಿರುವ ಹೇಳಿಕೆಗಳು, ಪ್ರತಿಹೇಳಿಕೆಗಳೆಲ್ಲವನ್ನು ಕಂಡಾಗ ಇಂತಹ ಅಧಿವೇಶನ, ಕಲಾಪಗಳನ್ನು ನಡೆಸುವುದು ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡತೊಡಗಿದೆ. ಅದರ ನಡುವೆ ಆಯಾಯ ಪಕ್ಷಗಳ ಕಾರ್ಯಕರ್ತರು ತಮ್ಮ ನಾಯಕರ ಪರ ಬ್ಯಾಟ್‌ ಬೀಸಲೇಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ರಾಜಕೀಯ ವೈರತ್ವ, ಟೀಕೆ, ಆರೋಪ-ಪ್ರತ್ಯಾರೋಪಗಳು ಸಹಜ. ಇವೆಲ್ಲವೂ ಇಲ್ಲವಾದಲ್ಲಿ ಆ ಪ್ರಜಾಪ್ರಭುತ್ವ ಕಳಾಹೀನವಾದೀತು. ಆದರೆ ಇವೆಲ್ಲವುಗಳಿಗೆ ಇತಿಮಿತಿ, ಘನತೆ, ಗಾಂಭೀರ್ಯತೆಗಳಿವೆ ಎಂಬುದನ್ನು ಜನಪ್ರತಿನಿಧಿಯಾದವ ತಿಳಿಯದೇ ಹೋದಲ್ಲಿ ಇಂಥ ಗೊಂದಲಗಳು ಸೃಷ್ಟಿಯಾಗುತ್ತವೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಡಳಿತಾರೂಢರು ಎಲ್ಲರನ್ನೂ ತಮ್ಮ ಜತೆಯಲ್ಲಿ ಕೊಂಡೊಯ್ಯಬೇಕು. ಹಾಗೆಯೇ ವಿಪಕ್ಷಗಳೂ ಕೂಡ ಟೀಕೆ, ಆರೋಪಗಳಿಗೆ ಸೀಮಿತವಾಗದೆ ಸರಕಾರ ಜನತೆ ಮತ್ತು ದೇಶದ ಹಿತದೃಷ್ಟಿಯಿಂದ ಜಾರಿಗೊಳಿಸುವ ಯೋಜನೆಗಳನ್ನು ಬೆಂಬಲಿಸಬೇಕು ಮತ್ತು ಅವುಗಳಲ್ಲಿ ಏನಾದರೂ ಲೋಪಗಳಿದ್ದಲ್ಲಿ ಅವುಗಳನ್ನು ಬೆಟ್ಟು ಮಾಡಿ ತೋರಬೇಕೇ ವಿನಾ ಎಲ್ಲೆಲ್ಲೋ ನಿಂತು ಬೇಕಾಬಿಟ್ಟಿ ನಾಲಗೆ ಹರಿಯಬಿಡುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಆಡಳಿತ ಮತ್ತು ವಿಪಕ್ಷ ಜೋಡೆತ್ತುಗಳಿದ್ದಂತೆ. ಇವೆರಡೂ ಹೊಣೆಯರಿತು ಕರ್ತವ್ಯ ನಿರ್ವಹಿಸಿದಾಗಲಷ್ಟೇ ಈ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯ. ಅದು ಬಿಟ್ಟು ಒಣಪ್ರತಿಷ್ಠೆಗೆ ಜೋತುಬಿದ್ದರೆ “ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು’ ಎಂಬಂತಾಗುತ್ತದೆ. ಇಲ್ಲಿ ಮೇಲು-ಕೀಳು, ಸೋಲು-ಗೆಲುವು, ಪ್ರತಿಷ್ಠೆ ಎಲ್ಲವೂ ನಗಣ್ಯ. ದೇಶ, ಜನಹಿತದ ಪ್ರಶ್ನೆ ಬಂದಾಗ ಅಲ್ಲಿ ಭಿನ್ನರಾಗ, ಅಪಸ್ವರವಿರಬಾರದು. ಬಹುಮತದ ಜತೆಜತೆಯಲ್ಲಿ ಸಹಮತವೂ ಅಗತ್ಯ. ಈ ನಿಟ್ಟಿನಲ್ಲಿ ಆಡಳಿತ ಮತ್ತು ವಿಪಕ್ಷಗಳೆರಡೂ ಕೈಜೋಡಿಸಬೇಕು. ಹೀಗಾದಲ್ಲಿ ಬಜೆಟ್‌ ಅಧಿವೇಶನದ ದ್ವಿತೀಯಾರ್ಧದ ಇನ್ನುಳಿದ ಅವಧಿಯಲ್ಲಿ ಸಂಸತ್‌ ಕಲಾಪಗಳು ಸುಗಮವಾಗಿ ನಡೆಯಲು ಸಾಧ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next