ಬೆಂಗಳೂರು: ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಅವಿವಾಹಿತ ವೃದ್ಧರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕತ್ರಿಗುಪ್ಪೆಯಲ್ಲಿ ನಡೆದಿದೆ. ಪುಣೆ ಮೂಲದ ರಾಜಾರಾವ್ ಶರ್ಮಾ (72) ಆತ್ಮಹತ್ಯೆಗೆ
ಶರಣಾದವರು.
ಆತ್ಮಹತ್ಯೆಗೆ ಮುನ್ನ ರಾಜಾರಾವ್ ಶರ್ಮಾ, ಪಾರ್ಕಿನ್ಸನ್ ಕಾಯಿಲೆಯಿಂದ ಎದುರಿಸುತ್ತಿರುವ ಸಂಕಷ್ಟ, ಹಾಗೂ ತಮ್ಮನ್ನು ಆರೈಕೆ ಮಾಡಲು ಯಾರು ಇಲ್ಲದಿರುವುದು, ಸಹೋದರನಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಾರೆ. ಡೆತ್‌ನೋಟ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವಿವಾಹಿತ ಸಹೋದರ ಜಯರಾಮ್ ಶರ್ಮಾ (74) ಜತೆ ಸಪ್ತಗಿರಿ ಅಪಾರ್ಟ್‌ಮೆಂಟ್‌ನಲ್ಲಿ ರಾಜಾರಾವ್ ಶರ್ಮಾ ವಾಸಿಸುತ್ತಿದ್ದರು.ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಜಯರಾಮ್ ಹೊರಗಡೆ ಹೋಗಿದ್ದಾಗ ಒಳಗಡೆಯಿಂದ ಡೋರ್‌ಲಾಕ್ ಮಾಡಿಕೊಂಡಿರುವ ರಾಜಾರಾವ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲಸಮಯದ ಬಳಿಕ ಮನೆಯ ಬಳಿ ಸಹೋದರ ಜಯರಾಮ್, ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕರೆ ಮಾಡಿದರೂ ಸ್ವೀಕರಿಸಿಲ್ಲ. ಹೀಗಾಗಿ ಆತಂಕಗೊಂಡ ಅವರನ್ನು ನೋಡಿಕೊಳ್ಳುತ್ತಿದ್ದ ವಿಶ್ವನಾಥ್‌ರನ್ನು ಕರೆಯಿಸಿ ಬಾಗಿಲು ತೆರೆದು ಒಳಪ್ರವೇಶಿಸಿದಾಗ ರಾಜಾರಾವ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ವಿವರಿಸಿದರು.
ಒಬ್ಬರಿಗಾಗಿ ಒಬ್ಬರು ತ್ಯಾಗ: ಪುಣೆ ಮೂಲದ ಸಹೋದರರಾದ ಜಯರಾಮ್ ಹಾಗೂ ರಾಜಾರಾವ್ ಉನ್ನತ ವಿದ್ಯಾಭ್ಯಾಸ ಪಡೆದಿದ್ದು, ಹಲವು ವರ್ಷ ಚಾರ್ಟೆಡ್ ಅಕೌಂಟೆಂಟ್‌ಗಳಾಗಿ ಜತೆಯಲ್ಲಿಯೇ ಕೆಲಸ ಮಾಡಿದ್ದಾರೆ. ಅಣ್ಣ ವಿವಾಹವಾಗಲಿಲ್ಲ ಎಂದು ತಮ್ಮ ರಾಜಾರಾವ್ ಕೂಡ ಮದುವೆಯಾಗದೇ ಹಾಗೇ ಉಳಿದುಕೊಂಡಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಕೆಲಸ ಬಿಟ್ಟು ಬೆಂಗಳೂರಿಗೆ ಆಗಮಿಸಿ ಒಟ್ಟಿಗೆ ವಾಸಿಸುತ್ತಿದ್ದರು. ಇಬ್ಬರನ್ನೂ ವಿಶ್ವನಾಥ್ ಎಂಬಾತ ಕೇರ್ ಟೇಕರ್ ಆಗಿ ನೋಡಿಕೊಳ್ಳುತ್ತಿದ್ದ.
9ವರ್ಷಗಳಿಂದ ರಾಜಾರಾವ್ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರಿಬ್ಬರ ಉಳಿತಾಯದ ಹಣದಲ್ಲಿಯೇ ಆಸ್ಪತ್ರೆ, ಮೆಡಿಸಿನ್ ಖರ್ಚುವೆಚ್ಚ ಭರಿಸುತ್ತಿದ್ದರು. ಸಂಬಂಧಿಕರು ಯಾರು ಇಲ್ಲ ಎಂದು ಜಯರಾಮ್ ತಿಳಿಸುತ್ತಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈ ಕುರಿತು ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.