Advertisement

ಸುರತ್ಕಲ್‌: ಪಾರ್ಕಿಂಗ್‌ ಸಂಕಷ್ಟ, ಪರದಾಟ

11:57 AM Apr 30, 2022 | Team Udayavani |

ಸುರತ್ಕಲ್‌: ರಸ್ತೆಯಲ್ಲಿ ಎಲ್ಲಿ ನೋಡಿದರೂ ಬೆಳ್ಳಂಬೆಳಗ್ಗೆ ಸಾಲಾಗಿ ನಿಂತ ವಾಹನಗಳು, ಇದು ರಸ್ತೆಯೋ ಅಥವಾ ಪಾರ್ಕಿಂಗ್‌ ಸ್ಥಳವೋ ಎಂದು ಜನರಲ್ಲಿ ಗೊಂದಲ ಸೃಷ್ಟಿಸುವಂತಿದೆ.

Advertisement

ಒಂದು ರಸ್ತೆಯಿಂದ ಇನ್ನೊಂದು ರಸ್ತೆ ಬದಿ ಅಂಗಡಿಗೆ ಹೋಗಲು ಜನರು ನಿತ್ಯ ಸರ್ಕಸ್‌ ಮಾಡಬೇಕು. ಹಿಂದಿನ ಕಟ್ಟಡ ಗಳಲ್ಲಿ ಪಾರ್ಕಿಂಗ್‌ ಕನಿಷ್ಠ ಜಾಗವಿದ್ದು, ಅಭಿವೃದ್ಧಿಯ ನಡುವೆಯೂ ಇದು ಮುಂದುವರಿದಿರುವುದು ವಾಹನ ರಸ್ತೆ ಅತಿಕ್ರಮಿಸಿಕೊಳ್ಳಲು ಮುಖ್ಯ ಕಾರಣ.

ಬೃಹತ್‌ ಕಟ್ಟಡಗಳಿಗೆ ಪಾರ್ಕಿಂಗ್‌ ಇಲ್ಲದಿದ್ದರಿಂದ ರಸ್ತೆಯಲ್ಲೇ ವಾಹನ ನಿಲ್ಲಿಸಲಾಗುತ್ತಿದ್ದು, ಇದರಿಂದ ಜನರು ಸಂಚರಿಸಲು ನರಕಯಾತನೆ ಅನುಭವಿಸ ಬೇಕಾಗಿದೆ. ಇದು ಯಾವುದೋ ಮಹಾ ನಗರದ ಸಮಸ್ಯೆ ಅಲ್ಲ. ಇದು ಸುರತ್ಕಲ್‌ ಜಂಕ್ಷನ್‌ ಸುತ್ತಮುತ್ತ ಪಾರ್ಕಿಂಗ್‌ ಸಮಸ್ಯೆ ಚಿತ್ರಣ.

ಮಂಗಳೂರು ಬಳಿಕ ಕೈಗಾರಿಕೆ ನಗರ ಎಂದು ಕರೆಸಿಕೊಂಡಿರುವ ಸುರತ್ಕಲ್‌ನಲ್ಲಿ ವಾಹನಗಳ ಸಂಖ್ಯೆ ಇತ್ತೀಚೆಗೆ ದ್ವಿಗುಣಗೊಂಡಿದ್ದು, ಸಾರ್ವಜನಿಕರಿಗೆ ವಾಹನ ಪಾರ್ಕಿಂಗ್‌ಗೆ ಸ್ಥಳ ಸಿಗದೆ ಸಮಸ್ಯೆಯಾಗಿದೆ. ಕೆಲವು ವಸತಿ ಗೃಹಗಳಿಗೆ ರಸ್ತೆ ಬದಿಯೇ ಪಾರ್ಕಿಂಗ್‌ ಜಾಗ.

ಇನ್ನು ಕಟ್ಲ ಬಳಿಯಿರುವ ಹೊಸ ಮಾಲ್‌ ಪ್ರವೇಶಿಸುವವರು ರಸ್ತೆಯ ಕಾಂಕ್ರೀಟ್‌ ಭಾಗವನ್ನು ಅತಿಕ್ರಮಿಸಿ ಶಾಪಿಂಗ್‌ಗೆ ತೆರಳುತ್ತಾರೆ.

Advertisement

ಶಾಶ್ವತ ಪಾರ್ಕಿಂಗ್‌ ಯೋಜನೆ ಜಾರಿಯಾಗಿಲ್ಲ!

ಬೃಹತ್‌ ಕಟ್ಟಡ ಹಾಗೂ ವ್ಯಾಪಾರ ಸಂಕೀರ್ಣ ನಿರ್ಮಿಸುವಾಗ ವಾಹನ ನಿಲುಗಡೆಗೆ ಸ್ಥಳವಕಾಶ ಬಿಡಬೇಕು ಎಂಬ ನಿಯಮವಿದೆ. ಬಹುತೇಕ ಕಟ್ಟಡಗಳು ವಾಹನ ನಿಲುಗಡೆ ನಕಾಶೆಯಲ್ಲಿ ಮಾತ್ರ ಇದ್ದು ಕಟ್ಟಡದಲ್ಲಿ ಕಂಡು ಬರುತ್ತಿಲ್ಲ. ಸುರತ್ಕಲ್‌ ಎಕ್ಸ್‌ಪ್ರೆಸ್‌ ಬಸ್‌ ನಿಲ್ದಾಣವನ್ನೂ ಬಿಡದೆ ಪಾರ್ಕಿಂಗ್‌ ಮಾಡಿ ಹೋಗುವ ಆತಂಕದ ಸ್ಥಿತಿ ಎದುರಾಗಿದೆ.

ಪಾಲಿಕೆಯ ವಿಭಾಗೀಯ ವ್ಯಾಪ್ತಿಯ ಕಚೇರಿ ಎದುರೇ ಇಂತಹ ರಾದ್ಧಾಂತಗಳಾದರೂ ಇದುವರೆಗೂ ಶಾಶ್ವತ ಪಾರ್ಕಿಂಗ್‌ ಯೋಜನೆ ಜಾರಿಯಾಗಿಲ್ಲ. ರಸ್ತೆ ವಿಸ್ತರಣೆ ಆದ ಬಳಿಕ ರಸ್ತೆಯಂಚಿನ ಉದ್ದಕ್ಕೂ ಪಾರ್ಕಿಂಗ್‌ ಜಾಗ ಎಂಬಂತಾಗಿದೆ. ಮದ್ಯದಂಗಡಿಗಳು, ಇತರ ಅಂಗಡಿಗಳು ಸರಕಾರಿ ಜಾಗವನ್ನೇ ನಮ್ಮ ಪಾರ್ಕಿಂಗ್‌ ಎಂದು ಬೋರ್ಡ್‌ ಅಳವಡಿಸಿ ಇತರ ವಾಹನಗಳಿಗೆ ನಿರಾಕರಿಸುತ್ತಿವೆ.

ದೂರದ ನಗರಗಳಿಗೆ ಕೆಲಸಕ್ಕಾಗಿ ಹೋಗುವ ನೌಕರರ, ಜನರ ವಾಹನ ನಿಲುಗಡೆ ಇದೀಗ ಜಂಕ್ಷನ್‌ ಮಧ್ಯ ಬಾಗದಲ್ಲೇ ಮಾಡುತ್ತಿದ್ದು, ಇದರಿಂದ ಪಾರ್ಕಿಂಗ್‌ ಸಮಸ್ಯೆ ಉಲ್ಬಣಿಸುತ್ತಿದೆ. ಸಂಜೆಯ ವೇಳೆ ವಾಹನ ದಟ್ಟಣೆ ದುಪ್ಪಟ್ಟು ಆಗುತ್ತಿದೆ. ಅಲ್ಲಲ್ಲಿ ವಾಹನ ನಿಲ್ಲಿಸುವುದರಿಂದ ಜನರ ಓಡಾಟಕ್ಕೆ ತೀವ್ರ ತೊಂದರೆಯಾಗಿ ಪರಿಣಮಿಸಿದೆ. ಆಗಾಗ್ಗೆ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡರೂ ಫಲ ಮಾತ್ರ ಶೂನ್ಯ.

ಪಾರ್ಕಿಂಗ್‌ ಸಮಸ್ಯೆಯಿಂದ ಸುರತ್ಕಲ್‌ ನಗರವನ್ನು ಮುಕ್ತಗೊಳಿಸಿ, ಸುಗಮ ನಿಲುಗಡೆ, ಬಳಿಕ ಸುಗಮ ಸಂಚಾರಕ್ಕಾಗಿ ಅನುಕೂಲ ಕಲ್ಪಿಸಲು ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳು ಕೂಡಲೇ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಸದ್ಯ ನಗರದಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವದರಿಂದ ನಿತ್ಯ ಸಾರ್ವಜನಿಕರಿಗೆ ಓಡಾಟಕ್ಕೂ ತೀವ್ರ ತೊಂದರೆಯಾಗಿದೆ. ಆದೆಷ್ಟು ಬೇಗನೇ ಸಂಚಾರ ಪೊಲೀಸ್‌ರು ವಾಹನ ಪಾರ್ಕಿಂಗ್‌ ಸಮಸ್ಯೆಗೆ ಕ್ರಮ ಕೈಗೊಳ್ಳಬೇಕಿದೆ.

ಅಧಿಕಾರಿಗಳಿಂದ ಪೂರಕ ಕ್ರಮ

ಮುಂದಿನ ದಿನಗಳಲ್ಲಿ ಸುರತ್ಕಲ್‌ ಜಂಕ್ಷನ್‌ನಲ್ಲಿ ವ್ಯವಸ್ಥಿತವಾದ ಸರ್ಕಲ್‌ ಸಹಿತ ಪಾರ್ಕಿಂಗ್‌ ವ್ಯವಸ್ಥೆ ಕೈಗೊಳ್ಳುವ ಬಗ್ಗೆ ಯೋಜನೆ ರೂಪಿಸಲಾಗುವುದು. ಈಗಾಗಲೇ ನಮ್ಮ ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಬೇಕಾದ ಪೂರಕ ಕ್ರಮ ಕೈಗೊಂಡಿದ್ದಾರೆ. -ಅಕ್ಷಯ್‌ ಶ್ರೀಧರ್‌, ಆಯುಕ್ತರು, ಮನಪಾ

ಲಕ್ಷ್ಮೀ ನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next