ಮಹಾನಗರ: ಕೆಲವು ಸಮಯಗಳಿಂದ ನಗರದ ಹಲವು ಕಡೆಗಳಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿತ್ತು.
ಇದೀಗ ಮಂಗಳೂರು ಸಂಚಾರ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ವಿವಿಧ ಕಡೆಗಳಲ್ಲಿ ಬ್ಯಾನರ್ ಅಳವಡಿಸುವ ಮೂಲಕ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ವೆನ್ಲಾಕ್ ಆಸ್ಪತ್ರೆ ಮುಂಭಾಗ, ಹಂಪನಕಟ್ಟೆಯ ಸಿಗ್ನಲ್, ಬೆಸೆಂಟ್ ಬಳಿ, ಕೆ.ಎಸ್. ರಾವ್ ರಸ್ತೆ ಸೇರಿ ಹಲವು ಪ್ರಯಾಣಿಕರು ಬಸ್‌ಗಾಗಿ ಕಾಯಬಾರದು ಮತ್ತು ಪ್ರಯಾಣಿಕರನ್ನು ಬಸ್‌ಗೆ ಹತ್ತಿಸಬಾರದು ಎಂದು ಸಂಚಾರಿ ಪೊಲೀಸರು ಈಗಾಗಲೇ ಸೂಚನೆ ನೀಡಿದ್ದರೂ ಅದು ಸಮರ್ಪಕವಾಗಿ ಪಾಲನೆಯಾಗುತ್ತಿರಲಿಲ್ಲ. ಈ ಹಿಂದೆ ಈ ಭಾಗದಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ಮತ್ತು ಟೇಪ್‌ಗ್ಳನ್ನು ಹೆಚ್ಚಿನ ಕಡೆ ತೆಗೆಯಲಾಗಿತ್ತು. ಪರಿಣಾಮ, ಬಸ್‌ಗಳು ಇದೇ ಭಾಗದಲ್ಲಿ ನಿಲ್ಲುತ್ತಿದ್ದು, ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿತ್ತು.
ಈ ಕುರಿತು ಉದಯವಾಣಿ ಸುದಿನ ಕೆಲವು ದಿನಗಳ ಹಿಂದೆ “ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕಿಂಗ್’ ಎಂಬ ತಲೆಬರಹದಡಿ ವರದಿ ಪ್ರಕಟಿಸಿತ್ತು. ಇದೀಗ ನಗರದ ಹಲವು ಕಡೆಗಳಲ್ಲಿ ಪೊಲೀಸರು ಜಾಗೃತಿ ಬ್ಯಾನರ್ ಅಳವಡಿಸಿ, ಈ ರೀತಿ ನಿಯಮ ಪಾಲನೆ ಮಾಡದೇ ಇರುವ ವಾಹನಗಳ ಮೇಲೆ ನಿಗಾ ವಹಿಸುತ್ತಿದ್ದಾರೆ.