Advertisement

ಪಾರ್ಕಿಂಗ್‌ ಅವ್ಯವಸ್ಥೆ, ಸಂಚಾರ ನಿಯಮ ಉಲ್ಲಂಘನೆ: ಕ್ರಮಕ್ಕೆ ಆಗ್ರಹ

03:15 PM Jun 04, 2023 | Team Udayavani |

ಮಹಾನಗರ: ಮಂಗಳೂರು ನಗರದಲ್ಲಿ ವಾಹನ ಪಾರ್ಕಿಂಗ್‌ ಅವ್ಯವಸ್ಥೆ, ಸಂಚಾರ ನಿಯಮ ಉಲ್ಲಂಘನೆ ಸಹಿತ ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಪೊಲೀಸ್‌ ಪೋನ್‌-ಇನ್‌ ಕಾರ್ಯಕ್ರಮದಲ್ಲಿ ಪೊಲೀಸ್‌ ಆಯುಕ್ತರ ಗಮನ ಸೆಳೆದಿದ್ದಾರೆ.

Advertisement

ಸುಮಾರು ಮೂರೂವರೆ ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ “ಪೊಲೀಸ್‌ ಪೋನ್‌-ಇನ್‌’ ಕಾರ್ಯಕ್ರಮವನ್ನು ಶನಿವಾರ ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ಅವರು ಪುನರಾರಂಭಗೊಳಿಸಿದರು. ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಆಯುಕ್ತರ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 26 ಮಂದಿ ಸಾರ್ವಜನಿಕರು ಕರೆ ಮಾಡಿ ತಮ್ಮ ಅಹವಾಲುಗಳನ್ನು ತಿಳಿಸಿದರು.

ಹಂಪನಕಟ್ಟೆ ಜಂಕ್ಷನ್‌ನಲ್ಲಿ ಸಿಗ್ನಲ್‌ ಸಮೀಪ ಬಸ್‌ಗಳನ್ನು ನಿಲುಗಡೆ ಮಾಡುತ್ತಿ ರುವುದರಿಂದ ಆಗಾಗ್ಗೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಓರ್ವರು ದೂರಿದರು. ಸೆಂಟ್ರಲ್‌ ಮಾರ್ಕೆಟ್‌ ಬಳಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿರುವುದರಿಂದ ತೊಂದರೆಯಾಗಿದೆ ಎಂಬುದಾಗಿ ಇನ್ನೋರ್ವರು ದೂರಿದರು. ನಗರದ ಹಲವೆಡೆ ಕಟ್ಟಡಗಳ ಎದುರು ರಸ್ತೆಯಲ್ಲಿಯೇ ವಾಹನಗಳನ್ನು ಪಾರ್ಕಿಂಗ್‌ ಮಾಡುತ್ತಿರುವ ಬಗ್ಗೆ ಕೆಲವರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್‌ ಆಯುಕ್ತರು, ಕಟ್ಟಡಗಳಿಗೆ ಪರವಾನಿಗೆ ಪಡೆಯುವಾಗ ಅದರಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕೂಡ ಇರುತ್ತದೆ. ಆದರೆ ಅನಂತರ ವಿನ್ಯಾಸ ಬದಲಿಸಿ ಪಾರ್ಕಿಂಗ್‌ಗೆ ಮೀಸಲಿಟ್ಟ ಸ್ಥಳವನ್ನು ಕೂಡ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿ ನಿಯಮ ಉಲ್ಲಂ ಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರ ಪಾಲಿಕೆಗೆ ಇದೆ. ಸದ್ಯ ಸಂಚಾರಿ ಪೊಲೀಸರು ಪ್ರಮುಖ ಸ್ಥಳಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಕರ್ತವ್ಯ ಆರಂಭಿಸುತ್ತಿದ್ದಾರೆ. ಶಾಲೆಗಳು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಹೇಳಿದರು.

ಅಕ್ರಮ, ಅನೈತಿಕ ಚಟುವಟಿಕೆ
ನೆಹರೂ ಮೈದಾನ ಪರಿಸರದಲ್ಲಿ ಅನಾಥರು, ನಿರ್ಗತಿಕರು, ಕುಡುಕರು ನೂರಕ್ಕೂ ಅಧಿಕ ಮಂದಿ ದಿನನಿತ್ಯ ಉಳಿದು ಕೊಂಡಿದ್ದು ನಗರದ ಸ್ವತ್ಛತೆ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಅಡ್ಡಿಯಾಗಿದೆ. ಇವರಲ್ಲಿ ಕೆಲವರು ಅಕ್ರಮ, ಅನೈತಿಕ ಚಟುವಟಿಕೆಗಳನ್ನು ಕೂಡ ನಡೆಸುತ್ತಿದ್ದಾರೆ. ಇತ್ತೀಚೆಗೆ ಇಲ್ಲಿ ಒಂದು ಹತ್ಯೆಯೂ ನಡೆದಿತ್ತು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಓರ್ವರು ಹೇಳಿದರು. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ, ಮಂಗಳೂರು ಮಹಾನಗರ ಪಾಲಿಕೆಗೆ ಪತ್ರ ಬರೆದು ಮಾತುಕತೆ ನಡೆಸಲಾಗಿದೆ. ಪೊಲೀಸ್‌ ಇಲಾಖೆ ದಿನನಿತ್ಯ ಗಸ್ತು ನಡೆಸುತ್ತಿದೆ. ಮತ್ತೂಮ್ಮೆ ಸಂಬಂಧಿಸಿದ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು ಎಂದು ಪೊಲೀಸ್‌ ಆಯುಕ್ತರು ಪ್ರತಿಕ್ರಿಯಿಸಿದರು.

ಅನಧಿಕೃತ ಏಜೆಂಟ್‌ಗಳ ಹಾವಳಿ
ನಗರದ ಆರ್‌ಟಿಒ ಕಚೇರಿ ಆವರಣದಲ್ಲಿ ಅನಧಿಕೃತ ಏಜೆಂಟ್‌ಗಳಿಂದಾಗಿ ತೊಂದರೆ ಯಾಗಿದೆ ಎಂದು ಓರ್ವರು ದೂರಿದರು. ಕೆಲವು ಕಡೆ ಆಟೋರಿಕ್ಷಾಗಳಲ್ಲಿ ಮೀಟರ್‌ ಅಳವಡಿಸದೆ ಅತಿಯಾದ ಬಾಡಿಗೆ ದರ ವಸೂಲಿ ಮಾಡಲಾಗುತ್ತಿದೆ. ಆಟೋರಿಕ್ಷಾಗಳ ಬಾಡಿಗೆ ದರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಬೇಕು ಎಂದು ಮೂಡುಬಿದಿರೆಯ ಓರ್ವರು ಸಲಹೆ ನೀಡಿದರು. ಇದನ್ನು ಆರ್‌ಟಿಒ ಅವರ ಗಮನಕ್ಕೆ ತರಲಾಗುವುದು. ಆಟೋರಿಕ್ಷಾ ಚಾಲಕರಿಗೆ ತಿಳಿವಳಿಕೆ ನೀಡುವ ಕೆಲಸ ಈಗಾಗಲೇ ನಡೆಯುತ್ತಿದೆ ಎಂದು ಆಯುಕ್ತರು ತಿಳಿಸಿದರು.

Advertisement

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶು ಕುಮಾರ್‌, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್‌ ಕುಮಾರ್‌, ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ, ಎಸಿಪಿ ರವೀಶ್‌ ನಾಯ್ಕ ಮೊದಲಾದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಇತರ ದೂರುಗಳು
ಮೂಡುಬಿದಿರೆಯಲ್ಲಿ ಅಕ್ರಮ ಮದ್ಯ ಮಾರಾಟ, ಬೈಕಂಪಾಡಿಯಲ್ಲಿ ಜುಗಾರಿ, ಉರ್ವದಲ್ಲಿ ಮಹಿಳೆಯೋರ್ವರಿಗೆ ಲೈಂಗಿಕ ಕಿರುಕುಳ, ಕೂಳೂರಿನಲ್ಲಿ ರಸ್ತೆ ಬದಿ ಇರುವ ವೆಲ್ಡಿಂಗ್‌ ಶಾಪ್‌ನಿಂದ ತೊಂದರೆ, ಸುರತ್ಕಲ್‌ ಜಂಕ್ಷನ್‌ ಬಳಿ ರಸ್ತೆಯಲ್ಲೇ ವಾಹನಗಳ ಪಾರ್ಕಿಂಗ್‌, ಉಳ್ಳಾಲ ಪೊಲೀಸ್‌ ಠಾಣೆ ಬಳಿ ವಶಪಡಿಸಿಕೊಂಡಿರುವ ವಾಹನಗಳ ನಿಲುಗಡೆಯಿಂದ ಸಮಸ್ಯೆ ಮೊದಲಾದವುಗಳ ಬಗ್ಗೆ ಸಾರ್ವಜನಿಕರು ಪೋನ್‌-ಇನ್‌ನಲ್ಲಿ ಪ್ರಸ್ತಾಪಿಸಿದರು. ಫ್ಲ್ಯಾಟ್‌ನಲ್ಲಿ ಒಂದು ತಿಂಗಳ ಹಿಂದೆ ನಡೆದಿದ್ದ ಚಿನ್ನಾಭರಣ ಕಳ್ಳತನ ಪ್ರಕರಣದ ತನಿಖೆ ಏನಾಯಿತು ಎಂದು ಓರ್ವರು ಮಾಹಿತಿ ಕೋರಿದರು. ಮೊಬೈಲ್‌ ಐ ಫೋನ್‌ ಕಳೆದುಕೊಂಡ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಪೋನ್‌ ಸಿಕ್ಕಿಲ್ಲ ಎಂದು ಇನ್ನೋರ್ವರು ಅಹವಾಲು ತೋಡಿಕೊಂಡರು. ಸಂಚಾರ ನಿಯಮ ಉಲ್ಲಂಘನೆ ಮಾಡದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮೈಕ್‌ ಅನೌನ್ಸ್‌ಮೆಂಟ್‌ ಮಾಡುವಂತೆ ಮತ್ತೋರ್ವರು ಸಲಹೆ ನೀಡಿದರು. ಪೋನ್‌-ಇನ್‌ ಕಾರ್ಯಕ್ರಮ ಪುನರಾರಂಭಿಸಿರುವುದಕ್ಕೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದರು.

ಚಾಲಕರಲ್ಲಿ ಸ್ವಯಂ ಶಿಸ್ತು ಕೂಡ ಅಗತ್ಯ
ಕೆಲವು ಖಾಸಗಿ ಬಸ್‌ಗಳು ಅತೀವೇಗವಾಗಿ ಸಂಚರಿಸುತ್ತಿವೆ. ವಿರುದ್ಧ ದಿಕ್ಕಿನಲ್ಲಿ ಸಂಚಾರ, ಟ್ರಿಪಲ್‌ ರೈಡ್‌, ಹೆಲ್ಮೆಟ್‌ ರಹಿತವಾಗಿ ಸಂಚರಿಸುವುದು, ಅಧಿಕ ಪ್ರಖರದ ಹೆಡ್‌ಲೈಟ್‌ ಬಳಕೆ ಮೊದಲಾದ ಸಂಚಾರ ನಿಯಮ ಉಲ್ಲಂಘನೆ ನಡೆಯುತ್ತಿದೆ. ಕಾನೂನಿನ ಭಯ ಇಲ್ಲದಂತಾಗಿದೆ. ರಸ್ತೆಗಳು ಅಗಲಗೊಂಡರೂ ಸೂಕ್ತ ಮಾರ್ಗಸೂಚಿ ಫ‌ಲಕಗಳನ್ನು ಅಳವಡಿಸಿಲ್ಲ. ಪುಟ್‌ಪಾತ್‌ಗಳನ್ನು ಅಂಗಡಿಗಳು, ವಾಹನಗಳು ಆಕ್ರಮಿಸಿಕೊಂಡಿವೆ ಎಂದು ಸಾರ್ವಜನಿಕರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್‌ ಆಯುಕ್ತರು, ಎಲ್ಲ ಕಡೆಯಲ್ಲಿಯೂ ಪೊಲೀಸರನ್ನು ನಿಯೋಜಿಸುವುದು ಸಾಧ್ಯವಿಲ್ಲ. ಪೊಲೀಸರು ಇರುವಲ್ಲಿ ಮಾತ್ರ ನಿಯಮ ಪಾಲಿಸುವುದು ಸರಿಯಲ್ಲ. ವಾಹನ ಚಾಲಕರಲ್ಲಿಯೂ ಸ್ವಯಂ ಶಿಸ್ತು ಅಗತ್ಯ. ನಗರದಲ್ಲಿ ಇನ್ನಷ್ಟು ಕಡೆ ಸಿಸಿ ಕೆಮರಾಗಳನ್ನು ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next