Advertisement
ಸುಮಾರು ಮೂರೂವರೆ ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ “ಪೊಲೀಸ್ ಪೋನ್-ಇನ್’ ಕಾರ್ಯಕ್ರಮವನ್ನು ಶನಿವಾರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಅವರು ಪುನರಾರಂಭಗೊಳಿಸಿದರು. ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಆಯುಕ್ತರ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 26 ಮಂದಿ ಸಾರ್ವಜನಿಕರು ಕರೆ ಮಾಡಿ ತಮ್ಮ ಅಹವಾಲುಗಳನ್ನು ತಿಳಿಸಿದರು.
ನೆಹರೂ ಮೈದಾನ ಪರಿಸರದಲ್ಲಿ ಅನಾಥರು, ನಿರ್ಗತಿಕರು, ಕುಡುಕರು ನೂರಕ್ಕೂ ಅಧಿಕ ಮಂದಿ ದಿನನಿತ್ಯ ಉಳಿದು ಕೊಂಡಿದ್ದು ನಗರದ ಸ್ವತ್ಛತೆ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಅಡ್ಡಿಯಾಗಿದೆ. ಇವರಲ್ಲಿ ಕೆಲವರು ಅಕ್ರಮ, ಅನೈತಿಕ ಚಟುವಟಿಕೆಗಳನ್ನು ಕೂಡ ನಡೆಸುತ್ತಿದ್ದಾರೆ. ಇತ್ತೀಚೆಗೆ ಇಲ್ಲಿ ಒಂದು ಹತ್ಯೆಯೂ ನಡೆದಿತ್ತು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಓರ್ವರು ಹೇಳಿದರು. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ, ಮಂಗಳೂರು ಮಹಾನಗರ ಪಾಲಿಕೆಗೆ ಪತ್ರ ಬರೆದು ಮಾತುಕತೆ ನಡೆಸಲಾಗಿದೆ. ಪೊಲೀಸ್ ಇಲಾಖೆ ದಿನನಿತ್ಯ ಗಸ್ತು ನಡೆಸುತ್ತಿದೆ. ಮತ್ತೂಮ್ಮೆ ಸಂಬಂಧಿಸಿದ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತರು ಪ್ರತಿಕ್ರಿಯಿಸಿದರು.
Related Articles
ನಗರದ ಆರ್‌ಟಿಒ ಕಚೇರಿ ಆವರಣದಲ್ಲಿ ಅನಧಿಕೃತ ಏಜೆಂಟ್‌ಗಳಿಂದಾಗಿ ತೊಂದರೆ ಯಾಗಿದೆ ಎಂದು ಓರ್ವರು ದೂರಿದರು. ಕೆಲವು ಕಡೆ ಆಟೋರಿಕ್ಷಾಗಳಲ್ಲಿ ಮೀಟರ್ ಅಳವಡಿಸದೆ ಅತಿಯಾದ ಬಾಡಿಗೆ ದರ ವಸೂಲಿ ಮಾಡಲಾಗುತ್ತಿದೆ. ಆಟೋರಿಕ್ಷಾಗಳ ಬಾಡಿಗೆ ದರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಬೇಕು ಎಂದು ಮೂಡುಬಿದಿರೆಯ ಓರ್ವರು ಸಲಹೆ ನೀಡಿದರು. ಇದನ್ನು ಆರ್‌ಟಿಒ ಅವರ ಗಮನಕ್ಕೆ ತರಲಾಗುವುದು. ಆಟೋರಿಕ್ಷಾ ಚಾಲಕರಿಗೆ ತಿಳಿವಳಿಕೆ ನೀಡುವ ಕೆಲಸ ಈಗಾಗಲೇ ನಡೆಯುತ್ತಿದೆ ಎಂದು ಆಯುಕ್ತರು ತಿಳಿಸಿದರು.
Advertisement
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶು ಕುಮಾರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ, ಎಸಿಪಿ ರವೀಶ್ ನಾಯ್ಕ ಮೊದಲಾದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಇತರ ದೂರುಗಳುಮೂಡುಬಿದಿರೆಯಲ್ಲಿ ಅಕ್ರಮ ಮದ್ಯ ಮಾರಾಟ, ಬೈಕಂಪಾಡಿಯಲ್ಲಿ ಜುಗಾರಿ, ಉರ್ವದಲ್ಲಿ ಮಹಿಳೆಯೋರ್ವರಿಗೆ ಲೈಂಗಿಕ ಕಿರುಕುಳ, ಕೂಳೂರಿನಲ್ಲಿ ರಸ್ತೆ ಬದಿ ಇರುವ ವೆಲ್ಡಿಂಗ್ ಶಾಪ್‌ನಿಂದ ತೊಂದರೆ, ಸುರತ್ಕಲ್ ಜಂಕ್ಷನ್ ಬಳಿ ರಸ್ತೆಯಲ್ಲೇ ವಾಹನಗಳ ಪಾರ್ಕಿಂಗ್, ಉಳ್ಳಾಲ ಪೊಲೀಸ್ ಠಾಣೆ ಬಳಿ ವಶಪಡಿಸಿಕೊಂಡಿರುವ ವಾಹನಗಳ ನಿಲುಗಡೆಯಿಂದ ಸಮಸ್ಯೆ ಮೊದಲಾದವುಗಳ ಬಗ್ಗೆ ಸಾರ್ವಜನಿಕರು ಪೋನ್-ಇನ್‌ನಲ್ಲಿ ಪ್ರಸ್ತಾಪಿಸಿದರು. ಫ್ಲ್ಯಾಟ್‌ನಲ್ಲಿ ಒಂದು ತಿಂಗಳ ಹಿಂದೆ ನಡೆದಿದ್ದ ಚಿನ್ನಾಭರಣ ಕಳ್ಳತನ ಪ್ರಕರಣದ ತನಿಖೆ ಏನಾಯಿತು ಎಂದು ಓರ್ವರು ಮಾಹಿತಿ ಕೋರಿದರು. ಮೊಬೈಲ್ ಐ ಫೋನ್ ಕಳೆದುಕೊಂಡ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಪೋನ್ ಸಿಕ್ಕಿಲ್ಲ ಎಂದು ಇನ್ನೋರ್ವರು ಅಹವಾಲು ತೋಡಿಕೊಂಡರು. ಸಂಚಾರ ನಿಯಮ ಉಲ್ಲಂಘನೆ ಮಾಡದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮೈಕ್ ಅನೌನ್ಸ್‌ಮೆಂಟ್ ಮಾಡುವಂತೆ ಮತ್ತೋರ್ವರು ಸಲಹೆ ನೀಡಿದರು. ಪೋನ್-ಇನ್ ಕಾರ್ಯಕ್ರಮ ಪುನರಾರಂಭಿಸಿರುವುದಕ್ಕೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದರು. ಚಾಲಕರಲ್ಲಿ ಸ್ವಯಂ ಶಿಸ್ತು ಕೂಡ ಅಗತ್ಯ
ಕೆಲವು ಖಾಸಗಿ ಬಸ್‌ಗಳು ಅತೀವೇಗವಾಗಿ ಸಂಚರಿಸುತ್ತಿವೆ. ವಿರುದ್ಧ ದಿಕ್ಕಿನಲ್ಲಿ ಸಂಚಾರ, ಟ್ರಿಪಲ್ ರೈಡ್, ಹೆಲ್ಮೆಟ್ ರಹಿತವಾಗಿ ಸಂಚರಿಸುವುದು, ಅಧಿಕ ಪ್ರಖರದ ಹೆಡ್‌ಲೈಟ್ ಬಳಕೆ ಮೊದಲಾದ ಸಂಚಾರ ನಿಯಮ ಉಲ್ಲಂಘನೆ ನಡೆಯುತ್ತಿದೆ. ಕಾನೂನಿನ ಭಯ ಇಲ್ಲದಂತಾಗಿದೆ. ರಸ್ತೆಗಳು ಅಗಲಗೊಂಡರೂ ಸೂಕ್ತ ಮಾರ್ಗಸೂಚಿ ಫಲಕಗಳನ್ನು ಅಳವಡಿಸಿಲ್ಲ. ಪುಟ್‌ಪಾತ್‌ಗಳನ್ನು ಅಂಗಡಿಗಳು, ವಾಹನಗಳು ಆಕ್ರಮಿಸಿಕೊಂಡಿವೆ ಎಂದು ಸಾರ್ವಜನಿಕರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಎಲ್ಲ ಕಡೆಯಲ್ಲಿಯೂ ಪೊಲೀಸರನ್ನು ನಿಯೋಜಿಸುವುದು ಸಾಧ್ಯವಿಲ್ಲ. ಪೊಲೀಸರು ಇರುವಲ್ಲಿ ಮಾತ್ರ ನಿಯಮ ಪಾಲಿಸುವುದು ಸರಿಯಲ್ಲ. ವಾಹನ ಚಾಲಕರಲ್ಲಿಯೂ ಸ್ವಯಂ ಶಿಸ್ತು ಅಗತ್ಯ. ನಗರದಲ್ಲಿ ಇನ್ನಷ್ಟು ಕಡೆ ಸಿಸಿ ಕೆಮರಾಗಳನ್ನು ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.