Advertisement

ಶ್ರೀಕೃಷ್ಣ ಮಠದ ಪಾರ್ಕಿಂಗ್‌ ಪ್ರದೇಶದ ಅಂಗಡಿ ತೆರವು

11:50 AM Jan 21, 2018 | |

ಉಡುಪಿ: ಶ್ರೀಕೃಷ್ಣ ಮಠದ  ಪಾರ್ಕಿಂಗ್‌ ಪ್ರದೇಶದ ಪಕ್ಕದಲ್ಲಿದ್ದ ಅಂಗಡಿ, ಮಳಿಗೆಯನ್ನು ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಆಣತಿಯಂತೆ ಶುಕ್ರವಾರ  ತೆರವುಗೊಳಿಸಲಾಗಿದೆ.

Advertisement

ಶೀರೂರು ಶ್ರೀಗಳು ಯಾತ್ರಿ ನಿವಾಸದಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿ ವಿವರಗಳನ್ನು ಪಡೆದು ಕೊಂಡರು. ಅನಂತರದಲ್ಲಿ ತಗಡುಶೀಟು ಹಾಕಿ ನಿರ್ಮಿಸಿದ್ದ ಬಟ್ಟೆ ಅಂಗಡಿ, ಕರಕುಶಲ ಮಾರಾಟ ಅಂಗಡಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ಸೊತ್ತುಗಳಿರುವಾಗಲೇ ಜೆಸಿಬಿ ಮೂಲಕ ತೆರವುಗೊಳಿ ಸಲಾಯಿತು. ಪ್ರವಾಸಿಗರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ ಎನ್ನಲಾಗಿದೆ. 

ಶೀರೂರು ಶ್ರೀಗಳು ಮಾತನಾಡಿ, ಅಭಿವೃದ್ಧಿಗಾಗಿ 12 ವರ್ಷಗಳ ಹಿಂದೆಯೇ ಶ್ರೀಕೃಷ್ಣ ಮಠ ಪರಿಸರ ಟ್ರಸ್ಟ್‌ ರಚಿಸಲಾಗಿದೆ. ಟ್ರಸ್ಟ್‌ಗೆ ತಾನು 2.5 ಎಕರೆ ಜಾಗವನ್ನು ದಾನ ನೀಡಿದ್ದೇನೆ. ಆ ಜಾಗದಿಂದ ಕೃಷ್ಣ ಮಠಕ್ಕೆ ಯಾವುದೇ ಲಾಭವಾಗಿಲ್ಲ. ಪೇಜಾವರ ಮಠದ ಹೆಸರು ಹೇಳಿಕೊಂಡು ಅನ್ಯ ವ್ಯಕ್ತಿಗಳು ಅವ್ಯವಹಾರ ಮಾಡಿಕೊಂಡು ಅವರೇ ಲಾಭ ಮಾಡಿಕೊಳ್ಳುತ್ತಿದ್ದರು. ಪೇಜಾವರ ಶ್ರೀಗಳ ಹೆಸರಿನಲ್ಲಿ ಅವರ ನಿಕಟವರ್ತಿಗಳು ಅಷ್ಟ ಮಠದ ಟ್ರಸ್ಟ್‌ ಗೆ ಸೇರಿದ ಜಾಗವನ್ನು ಅಕ್ರಮವಾಗಿ ಅಂಗಡಿ ನಡೆಸಲು ಕೊಟ್ಟಿದ್ದಾರೆ. ಮಠಕ್ಕೆ ಸರಿಯಾದ ಲೆಕ್ಕ ಕೊಡದೆ ಕಳ್ಳ ವ್ಯವಹಾರ ಮಾಡುತ್ತಿದ್ದರು ಎಂದರು.

ಅಕ್ರಮಗಳನ್ನು ನೋಡಿ ಸುಮ್ಮನಿರುವ ಜಾಯಮಾನ ನನ್ನದಲ್ಲ. ಪರ್ಯಾಯ ಪೀಠದಲ್ಲಿ ಪೇಜಾವರ ಶ್ರೀಗಳು ಇರುವವರೆಗೆ ಸುಮ್ಮನಿದ್ದೆ. ಈಗ ಶೇ. 5ರಷ್ಟು ಸರಿ ಮಾಡಿದ್ದೇನೆ. ಮುಂದೆ ಬಾಕಿಯದ್ದನ್ನು ಸರಿ ಮಾಡುತ್ತೇನೆ ಎಂದು ತಿಳಿಸಿದರು. “ಕಟ್ಟಡ ಅನಧಿಕೃತವಲ್ಲ. ಮೆಸ್ಕಾಂ ವಿದ್ಯುತ್‌ ಸಂಪರ್ಕ, ನಗರಸಭೆ ಪರವಾನಿಗೆ ಇದೆ. ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ಅಧಿಕೃತ ಪತ್ರವಿದೆ’ ಎಂದು ವಿಷ್ಣುಮೂರ್ತಿ ಹೇಳಿದ್ದಾರೆ.

ಸಮಸ್ಯೆ ಬಗೆಹರಿದಿದೆ: ಎರಡೂ ಕಡೆಯವರ ನಡುವೆ ಸ್ವಲ್ಪ ಭಿನ್ನಾಭಿಪ್ರಾಯವಿತ್ತು. ಈಗ  ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ ಎಂದು ಟ್ರಸ್ಟ್‌ ಕಾರ್ಯದರ್ಶಿ ರತ್ನಕುಮಾರ್‌ ತಿಳಿಸಿದ್ದಾರೆ.

Advertisement

ಟ್ರಸ್ಟ್‌ಗೆ  ನಷ್ಟವಾಗಿಲ್ಲ: ಪೇಜಾವರ ಶ್ರೀ
ಈ ಕುರಿತು ಪೇಜಾವರ ಶ್ರೀಗಳವರನ್ನು “ಉದಯವಾಣಿ’ ಸಂಪರ್ಕಿಸಿದಾಗ “ಹಿಂದೆಯೇ ಈ ಜಾಗ ಬೇಡವೆಂದು ತಿಳಿಸಿದ್ದೆ. ನೋಡಿಕೊಳ್ಳಲು ಅನುಕೂಲವಾಗುತ್ತದೆಂದು ಇತರ ಟ್ರಸ್ಟಿಗಳೂ ತಿಳಿಸಿದ್ದರಿಂದ ನಮ್ಮ ಆಪ್ತ ಕಾರ್ಯದರ್ಶಿ ವಿಷ್ಣುವಿಗೆ ಸ್ಥಳಬಾಡಿಗೆಗೆಂದು ಸ್ಥಳವನ್ನು ಕೊಟ್ಟೆವು. ನಾವು 15 ವರ್ಷಗಳಿಂದ ಆತನಿಗೆ ಕೊಡಬೇಕಾದ ವೇತನವನ್ನು ಇದಕ್ಕೆ ಹೊಂದಾಣಿಕೆ ಮಾಡುತ್ತಿದ್ದೇವೆ. ಈ ಸಂಬಳದ ಬಾಬ್ತು ತಿಂಗಳಿಗೆ 10,000 ರೂ.ನಂತೆ ಒಟ್ಟು 18 ಲ.ರೂ.ಗಳನ್ನು ಟ್ರಸ್ಟ್‌ಗೆ ಕೊಟ್ಟಿದ್ದೇವೆ. ಇದಲ್ಲದೆ ಟ್ರಸ್ಟ್‌ ಗೆ ಹೆಚ್ಚಿಗೆ ಕೊಟ್ಟಿದ್ದೇವೆ. ಇದರ ಬಾಬ್ತು ಇಷ್ಟು. ಈ ಮೊತ್ತವನ್ನು ಯಾತ್ರಿ ನಿವಾಸದ ಕಟ್ಟ ಡಕ್ಕೆ ಬಳಸಲಾಗುತ್ತಿದೆ. ಆದ್ದರಿಂದ ಟ್ರಸ್ಟ್‌ಗೆ  ನಷ್ಟ ವಾಗಿಲ್ಲ. ಆದರೂ ಅನಾವಶ್ಯಕ ಗಲಾಟೆ, ಘರ್ಷಣೆ ಬೇಡವೆಂದು  ಅಂಗಡಿ ಜಾಗವನ್ನು ಬಿಟ್ಟುಕೊಡಲು ತಿಳಿಸಿದ್ದು, ಆತನೂ ಒಪ್ಪಿದ್ದಾನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next