Advertisement

ನಿರ್ವಹಣೆ ಸಮಸ್ಯೆಯಿಂದ ಜನರಿಂದ ದೂರ ಸರಿಯುತ್ತಿರುವ ಹುಡ್ಕೋ ಕಾಲನಿ ಪಾರ್ಕ್‌

11:17 PM Feb 05, 2020 | Sriram |

ಉಡುಪಿ: ಮಣಿಪಾಲದ ಅನಂತ ನಗರದ ಹುಡ್ಕೋ ಕಾಲನಿಯ ಬಳಿ ಸುಮಾರು ಒಂದು ಎಕ್ರೆ ಜಾಗದಲ್ಲಿ ರುವ ಹುಡ್ಕೊ ಸಾರ್ವಜನಿಕ ಉದ್ಯಾನವನ ಮೂಲ ಸೌಕರ್ಯಗಳಿಲ್ಲದೆ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದಂತಾಗಿದೆ.

Advertisement

ಹುಡ್ಕೋ ಕಾಲನಿಯಲ್ಲಿ ಸುಮಾರು 300 ಮನೆಗಳಿದ್ದು ಸಾವಿರಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಇಲ್ಲಿನ ಸ್ಥಳೀಯ ನಿವಾಸಿಗಳು ಈ ಪಾರ್ಕ್‌ ಅನ್ನು ಬಳಸುತ್ತಿದ್ದಾರೆ. ಆದರೆ ಪಾರ್ಕ್‌ನ ಸುತ್ತ ಪೊದೆ ಗಿಡ ಮರಗಳು ಬೆಳೆದು ನಿತ್ಯ ಭೇಟಿ ನೀಡುವ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ. ಮಕ್ಕಳ ಆಟಿಕೆ ವಸ್ತುಗಳು ಸಂಪೂರ್ಣ ಹಾಳಾಗಿ ಗಿಡಬಳ್ಳಿಗಳ ಒಳಗೆ ಹುದುಗಿಹೋಗಿದೆ.

ಮಕ್ಕಳ ಆಟಿಕೆ ವಸ್ತುಗಳಿಗೆ ಹಾನಿ
ಮಕ್ಕಳ ಆಟಿಕೆಗಳು ಕೆಲವು ತುಂಡಾಗಿ ನೆಲಕ್ಕೆ ಬಿದ್ದರೆ ಇನ್ನು ಕೆಲವು ಅರ್ಧ ಹಾನಿಗೆ ಒಳಗಾಗಿ ತುಕ್ಕು ಹಿಡಿದ ಸ್ಥಿತಿಯಲ್ಲಿದೆ. ಬೆಂಜ್‌ ಪ್ರಸ್‌ ಉಯ್ನಾಲೆಗಳ ಸುತ್ತ ಗಿಡಗಳು ಬೆಳೆದು ಮಕ್ಕಳಿಗೆ ಬಳಕೆಗೆ ಬಾರದಂತಾಗಿದೆ. ಸಲಕರಣೆಗಳ ಸುತ್ತ ಮುಳ್ಳಿನ ಗಿಡಗಳು ಬೆಳೆದಿದ್ದು ಇದರಲ್ಲಿ ಆಟವಾಡಲು ತೊಡಗಿದ ಮಕ್ಕಳಿಗೆ ಪರಚಿದ ಗಾಯಗಳಾಗುವುದು ಸಾಮಾನ್ಯ ಎಂಬುದು ಸ್ಥಳೀಯರ ಅಭಿಪ್ರಾಯ. ಇಲ್ಲಿ ವಾಕಿಂಗ್‌ ಟ್ರ್ಯಾಕ್‌ ಇಲ್ಲದಿರುವುದು ಸಾರ್ವಜನಿಕರಿಗೆ ಅನಾನುಕೂಲವಾಗಿದೆ.

ಪಾರ್ಕ್‌ ಆವರಣದ ಬಹುಭಾಗ ಗಿಡಗಳ ರಾಶಿಯೆ ಬೆಳೆದಿರುವುದರಿಂದ ಪಾರ್ಕ್‌ನ್ನು ಸದ್ಭಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಮುಳ್ಳಿನ ಗಿಡಗಳು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟು ಮಾಡಿದೆ. ಕೂರಲು ನಾಲ್ಕೈದು ಬೆಂಚ್‌ಗಳು ಇದ್ದು ಇವು ಹಾನಿಗೊಳಗಾದ ಸ್ಥಿತಿಯಲ್ಲಿದೆ.

ಶುಚಿತ್ವ ಇಲ್ಲ
ಹೊಸ ಶೌಚಾಲಯ ಕಟ್ಟಡವನ್ನು ಈ ಪಾರ್ಕಿನಲ್ಲಿ ನಿರ್ಮಿಸಿದರೂ ಶುಚಿತ್ವ ಇಲ್ಲದೆ ಬಳಸುವಂತಿಲ್ಲ. ಪಾರ್ಕ್‌ನಲ್ಲಿ ಕಸದ ಬುಟ್ಟಿ ಇಲ್ಲದಿರುವುದರಿಂದ ಪಾರ್ಕ್‌ ಗೆ ಭೇಟಿ ನೀಡುವ ಜನರು ತಾವು ತಂದ ತಿನಿಸುಗಳ ಪೊಟ್ಟಣಗಳನ್ನು ಪಾರ್ಕ್‌ನಲ್ಲೆ ಚೆಲ್ಲಿ ಹೋಗುತ್ತಿದ್ದು ಪಾರ್ಕ್‌ನ ಶುಚಿತ್ವಕ್ಕೆ ಹೊಡೆತ ಬಿದ್ದಿದೆ.

Advertisement

ಹೊಸ ರೂಪ
ಸಂಬಂಧ ಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ತಿಳಿಸಿದ್ದು ಹೊಸ ರೂಪ ನೀಡುವ ಚಿಂತನೆ ಇದೆ. ನಗರ ಸಭೆಯಿಂದ ವಾರ್ಡ್‌ಗಳ ಶುಚಿತ್ವಕ್ಕಾಗಿ ನೇಮಿಸಿರುವ ಕಾರ್ಮಿಕರು ಆರಂಭದಲ್ಲಿ ವಾರದಲ್ಲಿ ಎರಡು ದಿನ ಏಳೆಂಟು ಮಂದಿ ಬರುತ್ತಿದ್ದರು. ಈಗ ವಾರದಲ್ಲಿ ಒಂದೇ ದಿನ ಇಬ್ಬರು ಮೂವರು ಬರುತ್ತಿದ್ದಾರೆ. ಇದರಿಂದ ವಾರ್ಡ್‌ನ ಇತರಡೆಗಳ ಶುಚಿತ್ವಕ್ಕೆ ಮಾತ್ರ ಗಮನ ಕೊಡಲಾಗುತ್ತಿದೆ. ಹೀಗಾಗಿ ಪಾರ್ಕ್‌ ಸ್ವತ್ಛತೆ ಮಾಡಲು ಸಾಧ್ಯವಾಗುತ್ತಿಲ್ಲ.
-ಕಲ್ಪನಾ ಸುಧಾಮ,
ನಗರಸಭಾ ಸದಸ್ಯೆ, ಮಣಿಪಾಲ

ಅಭಿವೃದ್ಧಿ ಕಾಣಬೇಕಿದೆ
ಸುಮಾರು ವರ್ಷಗಳಿಂದ ಇಲ್ಲಿನ ಪಾರ್ಕ್‌ ಸಮರ್ಪಕ ವ್ಯವಸ್ಥೆ ಇಲ್ಲದೆ ಜನರನ್ನು ಆಕರ್ಷಿಸುವಲ್ಲಿ ಹಿಂದೆ ಬಿದ್ದಿದೆ. ಜನರು ಯಾವುದೇ ಸೌಲಭ್ಯ ಇಲ್ಲದಿರುವುದರಿಂದ ಪಾರ್ಕ್‌ ಗೆ ಭೇಟಿ ನೀಡುತ್ತಿಲ್ಲ. ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಈ ಪಾರ್ಕ್‌ ನಲ್ಲಾದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
-ಆಕಾಶ್‌, ಸ್ಥಳೀಯರು

- ಕಾರ್ತಿಕ್‌ ಚಿತ್ರಾಪುರ

Advertisement

Udayavani is now on Telegram. Click here to join our channel and stay updated with the latest news.

Next