Advertisement

ಸೆಪ್ಟೆಂಬರಲ್ಲಿ ಉದ್ಯಾನ ಸ್ಪರ್ಧೆ; ಅಕ್ಟೋಬರಲ್ಲಿ ಫಲ-ಪುಷ್ಪ ಮೇಳ

12:36 PM Aug 06, 2017 | |

ಧಾರವಾಡ: ಸೆಪ್ಟೆಂಬರ್‌ನಲ್ಲಿ ಒಂದು ವಾರ ಕಾಲ ಅವಳಿ ನಗರದಲ್ಲಿ ಉದ್ಯಾನವನ ಸ್ಪರ್ಧೆ ಹಾಗೂ ಅಕ್ಟೋಬರ್‌ನಲ್ಲಿ ಫಲ-ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಹೇಳಿದರು. ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಸೆ. 23ರಿಂದ 25ರ ವರೆಗೆ ಹುಬ್ಬಳ್ಳಿಯಲ್ಲಿ ಹಾಗೂ 26ರಿಂದ 28ರ ವರೆಗೆ ಧಾರವಾಡದಲ್ಲಿ ಉದ್ಯಾನ ಸ್ಪರ್ಧೆ ಏರ್ಪಡಿಸಲಾಗುವುದು. ರಾಜ್ಯ, ಕೇಂದ್ರ ಸರಕಾರಿ ಮತ್ತು ಖಾಸಗಿ ಕಚೇರಿಗಳು, ಖಾಸಗಿ  ತೋಟಗಳು, ಮನೆಗಳ ಆವರಣಗಳಲ್ಲಿರುವ ಸಣ್ಣ ಮತ್ತು ದೊಡ್ಡ ಉದ್ಯಾನಗಳ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಸಾರ್ವಜನಿಕರು ತಮ್ಮ ತೋಟಗಳನ್ನು ಈಗಿನಿಂದಲೇ ಸಿದ್ಧಮಾಡಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಳ್ಳಬೇಕು. ಅ. 6ರಿಂದ 8ರ ವರೆಗೆ ಹುಬ್ಬಳ್ಳಿಯ ಇಂದಿರಾ ಗಾಜಿನಮನೆ ಆವರಣದಲ್ಲಿ ಫಲ-ಪುಷ್ಪ ಪ್ರದರ್ಶನ ಹಮ್ಮಿಕೊಂಡು ಅಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು ಎಂದರು. 

ನಮ್ಮ ತೋಟ-ನಮ್ಮ ಊಟ: ತೋಟಗಾರಿಕೆ ಉಪನಿರ್ದೇಶಕ ಎಸ್‌.ಬಿ. ದಿಡ್ಡಿಮನಿ ಮಾತನಾಡಿ, ಈ ಬಾರಿ ನಮ್ಮ ತೋಟ ನಮ್ಮ ಊಟ ಶೀರ್ಷಿಕೆಯಡಿ ಕೇಂದ್ರಬಿಂದು ಮಾದರಿಯನ್ನು ತಯಾರಿಸಿ ಫಲ-ಪುಷ್ಪ ಪ್ರದರ್ಶನ ರೂಪಿಸಲಾಗುವುದು. ಹೈಡ್ರೋಫೋನಿಕ್ಸ್‌ ತಾಂತ್ರಿಕತೆಯಡಿ ಗಿಡಗಳನ್ನು ಬೆಳೆಸುವ ಬೃಹತ್‌ ಮಾದರಿ ಪ್ರದರ್ಶನ ಇದಾಗಿರುತ್ತದೆ.

ಇಂಡೋ-ಇಸ್ರೇಲ್‌ ಯೋಜನೆಯ ನೆರವಿನೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು. ಮನೆಯ ಪಡಸಾಲೆ, ಹೊರಕೋಣೆ ಹಾಗೂ ಕಾಂಪೌಂಡ್‌ನ‌ಲ್ಲಿ ಮಣ್ಣು ಇಲ್ಲದೆ ಕೇವಲ ನೀರಿನಲ್ಲಿ ಬೆಳೆಸಬಹುದಾದ ಸಸ್ಯಗಳ ಕುರಿತು ತೋಟಗಾರಿಕೆ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ನಾಲ್ವರು ತಜ್ಞರಿಂದ ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ಮತ್ತು ಮಾರ್ಗದರ್ಶನ ಕೊಡಿಸಲಾಗುವುದು. 

Advertisement

ಪಶುಸಂಗೋಪನಾ ಇಲಾಖೆಯ ಸಹಯೋಗದಲ್ಲಿ ವಿವಿಧ ತಳಿಗಳ ಶ್ವಾನ ಪ್ರದರ್ಶನ, ಆಯುಷ್‌ ಇಲಾಖೆಯಿಂದ ಮಳಿಗೆಯನ್ನು ಸ್ಥಾಪಿಸಿ ಭಾರತೀಯ ವೈದ್ಯ ಪದ್ಧತಿಗಳ ಕುರಿತು ತಿಳಿವಳಿಕೆ ನೀಡಲಾಗುವುದು. ಪ್ರತಿದಿನ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗೆ ದೂ: 0836-244780 ಸಂಪರ್ಕಿಸಬಹುದು ಎಂದರು. 

ಹಸಿರು ಬೆಳೆಸಲು ಸಲಹೆ: ನಿವೃತ್ತ ತೋಟಗಾರಿಕೆ ಅಧಿಕಾರಿ ಎ.ಜಿ. ದೇಶಪಾಂಡೆ ಮಾತನಾಡಿ, ಅವಳಿ ನಗರ ಮತ್ತು ಸುತ್ತಲಿನ ಹಳ್ಳಿಗಳ ಸರಕಾರಿ ಭೂಮಿಯಲ್ಲಿ ಹಸಿರು ಬೆಳೆಸಿ ಪರಿಸರ ಉಳಿಸಬೇಕು. ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕು. ಅರಣ್ಯ, ಪುರಾತತ್ವ, ಪ್ರವಾಸೋದ್ಯಮ ಇಲಾಖೆಗಳು ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿ ಕಾರಿಗಳು ಮತ್ತು ಆಸಕ್ತ ಸಾರ್ವಜನಿಕರ ಸಭೆ ಕರೆದು ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು. 

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಕೋನರಡ್ಡಿ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಕೆ. ರಂಗಣ್ಣವರ್‌, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಡಾ| ಹೇಮಾವತಿ, ಶ್ರೀದೇವಿ, ತಜ್ಞರಾದ ವಿ.ಎಸ್‌. ಪಾಟೀಲ, ಪ್ರೊ| ವಿಜಯಕುಮಾರ ಗಿಡ್ನವರ್‌, ಡಾ| ರಾಮನಗೌಡರ್‌ ಹೆರಕಲ್‌ ಇತರರಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next