Advertisement

Paris Paralympics: ಆ್ಯತ್ಲೆಟಿಕ್ಸ್‌ನಲ್ಲಿ ಡಜನ್‌ ಪದಕಗಳ ಗುರಿ

10:20 AM Aug 22, 2024 | Team Udayavani |

ಹೊಸದಿಲ್ಲಿ: ಪ್ಯಾರಿಸ್‌ ಪ್ಯಾರಾ ಲಿಂಪಿಕ್ಸ್‌ಗೆ ದಾಖಲೆ 84 ಕ್ರೀಡಾಪಟುಗಳನ್ನು ಕಳುಹಿಸಲಿರುವ ಭಾರತ, ಕೇವಲ ಆ್ಯತ್ಲೆಟಿಕ್ಸ್‌ ಒಂದರಲ್ಲೇ ಡಜನ್‌ ಪದಕಗಳನ್ನು ಗೆಲ್ಲುವ ಗುರಿ ಇರಿಸಿಕೊಂಡಿದೆ. ಜಾವೆಲಿನ್‌ ಎಸೆತಗಾರ ಸುಮಿತ್‌ ಅಂಟಿಲ್‌ ಇವರಲ್ಲಿ ಪ್ರಮುಖರು. ಇವರನ್ನೊಳಗೊಂಡ 16 ಆ್ಯತ್ಲೀಟ್‌ಗಳ ಮೊದಲ ತಂಡ ಬುಧವಾರ ಪ್ಯಾರಿಸ್‌ಗೆ ಪಯಣಿಸಿತು.

Advertisement

ಈ ಕ್ರೀಡಾಪಟುಗಳು ಕೆಲವು ದಿನಗಳ ಕಾಲ ಪ್ಯಾರಿಸ್‌ ಹೊಟೇಲ್‌ನಲ್ಲಿ ತಂಗಿದ ಬಳಿಕ ಆ. 25ರಂದು ಒಲಿಂಪಿಕ್ಸ್‌ ಗ್ರಾಮಕ್ಕೆ ತೆರಳಲಿದ್ದಾರೆ. ಆ. 28ರಂದು ಪ್ಯಾರಾಲಿಂಪಿಕ್ಸ್‌ ಉದ್ಘಾಟನೆಯಾಗಲಿದೆ.

ಸುಮಿತ್‌ ಮುಂದೆ ಉತ್ತಮ ಅವಕಾಶ
ಆ್ಯತ್ಲೆಟಿಕ್ಸ್‌ ಸ್ಪರ್ಧೆಗಳು ಆ. 30ರಂದು ಆರಂಭವಾಗಲಿವೆ. ಉದ್ಘಾಟನ ಸಮಾರಂಭದ ಧ್ವಜಧಾರಿಯಾಗಿರುವ ಸುಮಿತ್‌ ಅಂಟಿಲ್‌ ಜಾವೆಲಿನ್‌ ಚಿನ್ನವನ್ನು ಉಳಿಸಿಕೊಳ್ಳುವ ಎಲ್ಲ ಸಾಧ್ಯತೆಯನ್ನು ಹೊಂದಿದ್ದಾರೆ. ಸುಮಿತ್‌ ಹಾಗೂ ಇತರ ಕೆಲವು ಕ್ರೀಡಾಪಟುಗಳು, ಸ್ಟೇಡ್‌ ಡೆ ಫ್ರಾನ್ಸ್‌ ಸ್ಟೇಡಿಯಂನಿಂದ 5 ಕಿ.ಮೀ. ದೂರದಲ್ಲಿರುವ “ನೆಲ್ಸನ್‌ ಮಂಡೇಲ ನ್ಪೋರ್ಟ್ಸ್ ಕಾಂಪ್ಲೆಕ್ಸ್‌’ನಲ್ಲಿ ಅಭ್ಯಾಸ ನಡೆಸಲಿದ್ದಾರೆ ಎಂದು ಪ್ಯಾರಾ ಆ್ಯತ್ಲೆಟಿಕ್ಸ್‌ನ ಪ್ರಧಾನ ಕೋಚ್‌ ಸತ್ಯನಾರಾಯಣ ಅವರು ತಿಳಿಸಿದರು.

5 ಚಿನ್ನ ಗೆಲ್ಲಬೇಕು…
“ಆ್ಯತ್ಲೆಟಿಕ್ಸ್‌ನಲ್ಲಿ 5 ಚಿನ್ನ ಸೇರಿದಂತೆ 12 ಪದಕ ಗೆಲ್ಲುವುದು ನಮ್ಮ ಗುರಿ. ಆಗ ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ಶ್ರೇಷ್ಠ ನಿರ್ವಹಣೆ ಆಗಲಿದೆ’ ಎಂದು ಸತ್ಯನಾರಾಯಣ ಹೇಳಿದರು. ಇದೇ ವರ್ಷ ಜಪಾನ್‌ನಲ್ಲಿ ನಡೆದ ವಿಶ್ವ ಪ್ಯಾರಾ ಆ್ಯತ್ಲೆಟಿಕ್ಸ್‌ನಲ್ಲಿ ಭಾರತ 6 ಚಿನ್ನ, 5 ಬೆಳ್ಳಿ ಹಾಗೂ 6 ಕಂಚಿನ ಪದಕ ಗೆದ್ದು 6ನೇ ಸ್ಥಾನಿಯಾಗಿತ್ತು. ಈ ಸಾಧನೆ ಪ್ಯಾರಾಲಿಂಪಿಕ್ಸ್‌ಗೆ ಸ್ಫೂರ್ತಿ’ ಎಂದರು.

ಜಪಾನ್‌ ಕೂಟದಲ್ಲಿ ಸುಮಿತ್‌ ಅಂಟಿಲ್‌ (ಜಾವೆಲಿನ್‌ ಎಫ್64), ದೀಪ್ತಿ ಜೀವಾಂಜಿ (ವನಿತೆಯರ 400 ಮೀ. ಟಿ20), ಸಚಿನ್‌ ಖೀಲಾರಿ (ಪುರುಷರ ಶಾಟ್‌ಪುಟ್‌ ಎಫ್46), ಏಕ್ತಾ ಭ್ಯಾನ್‌ (ವನಿತಾ ಕ್ಲಬ್‌ ತ್ರೊ ಎಫ್51) ಸಿಮ್ರಾನ್‌ ಶರ್ಮ (ವನಿತೆಯರ 200 ಮೀ. ಟಿ12) ಮತ್ತು ಮರಿಯಪ್ಪನ್‌ ತಂಗವೇಲು (ಪುರುಷರ ಹೈಜಂಪ್‌ ಟಿ42) ಚಿನ್ನದ ಪದಕ ಜಯಿಸಿದ್ದರು.

Advertisement

ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 19 ಪದಕ ಜಯಿಸಿತ್ತು (5 ಚಿನ್ನ, 8 ಬೆಳ್ಳಿ, 6 ಕಂಚು). ಇದು ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲೇ ಭಾರತದ ಅತ್ಯುತ್ತಮ ಸಾಧನೆ ಆಗಿತ್ತು.

84 ಸದಸ್ಯರ ದೊಡ್ಡ ತಂಡ
ಈ ಬಾರಿ ಭಾರತದ ದೊಡ್ಡ ತಂಡ ಪ್ಯಾರಿಸ್‌ ಕೂಟದಲ್ಲಿ ಭಾಗವಹಿಸಲಿದೆ. ಈ 84 ಕ್ರೀಡಾಳುಗಳಲ್ಲಿ 38 ಮಂದಿ ಆ್ಯತ್ಲೆಟಿಕ್ಸ್‌ ವಿಭಾಗದವರಾಗಿದ್ದಾರೆ. ಒಟ್ಟಾರೆ, ಕನಿಷ್ಠ 25 ಪದಕಗಳನ್ನು ಗೆಲ್ಲುವುದು ನಮ್ಮ ಗುರಿ ಎಂಬುದಾಗಿ ಭಾರತೀಯ ಪ್ಯಾರಾಲಿಂಪಿಕ್‌ ಕಮಿಟಿಯ ಅಧ್ಯಕ್ಷ ದೇವೇಂದ್ರ ಜಜಾರಿಯ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next