Advertisement

Paris Paralympics; 84 ಪ್ಯಾರಾ ಆ್ಯತ್ಲೀಟ್‌ಗಳ ಭಾರತೀಯ ತಂಡಕ್ಕೆ 95 ಅಧಿಕಾರಿಗಳು

12:51 AM Aug 26, 2024 | Team Udayavani |

ಹೊಸದಿಲ್ಲಿ: ಬುಧವಾರ ಆರಂಭ ವಾಗಲಿರುವ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ 84 ಕ್ರೀಡಾಪಟುಗಳು, 95 ಅಧಿಕಾರಿಗಳ ಸಹಿತ ಭಾರತೀಯ ತಂಡದಲ್ಲಿ ಒಟ್ಟು 179 ಮಂದಿ ಇರಲಿದ್ದಾರೆ. ಬಹುತೇಕ ಆ್ಯತ್ಲೀಟ್‌ಗಳು ತಮ್ಮೊಂದಿಗೆ ವೈಯಕ್ತಿಕ ಕೋಚ್‌ ಮತ್ತು ಬೆಂಬಲ ಸಿಬಂದಿಯನ್ನು ಕರೆದೊಯ್ಯುತ್ತಿರುವುದರಿಂದ ಈ ಬಾರಿ ಭಾರತೀಯ ತಂಡದ ಸದಸ್ಯರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

Advertisement

9 ಮಂದಿ ವೈದ್ಯಾಧಿಕಾರಿಗಳು
ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದ 179 ಮಂದಿಯಲ್ಲಿ 95 ಅಧಿಕಾರಿ ಗಳಿದ್ದಾರೆ. ಇವರಲ್ಲಿ 77 ಮಂದಿ ಬೇರೆ ಬೇರೆ ತಂಡಗಳ ಅಧಿಕಾರಿಗಳಾಗಿದ್ದಾರೆ. ಹಾಗೆಯೇ 9 ಮಂದಿ ವೈದ್ಯಾಧಿಕಾರಿಗಳಾಗಿದ್ದರೆ, ಉಳಿದ 9 ಮಂದಿ ಭಾರತೀಯ ತಂಡದ ಬೆಂಬಲ ಸಿಬಂದಿಯಾಗಿದ್ದಾರೆ. 32 ಮಹಿಳಾ ಕ್ರೀಡಾಪಟುಗಳು ತಂಡದಲ್ಲಿದ್ದಾರೆ.

ಟೋಕಿಯೋಗಿಂತ ಹೆಚ್ಚು ಸ್ಪರ್ಧಿಗಳು
ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಹೋಲಿಸಿದರೆ ಈ ಬಾರಿ ಭಾರತ ದೊಡ್ಡ ತಂಡವನ್ನೇ ಪ್ಯಾರಿಸ್‌ಗೆ ಕಳುಹಿಸಿದೆ. ಕಳೆದ ಬಾರಿ ಒಟ್ಟು 54 ಆ್ಯತ್ಲೀಟ್‌ಗಳು 9 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಕ್ರೀಡಾಪಟುಗಳ ಸಂಖ್ಯೆ 84ಕ್ಕೆ ಏರಿದೆ. ಕಳೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 5 ಚಿನ್ನ, 8 ಬೆಳ್ಳಿ ಮತ್ತು 6 ಕಂಚು ಸೇರಿ ಒಟ್ಟು 19 ಪದಕಗಳನ್ನು ಗೆದ್ದಿತ್ತು. ಈ ಬಾರಿ ಪದಕಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ.

ಹೊಸದಿಲ್ಲಿಯಿಂದ ಪ್ರಯಾಣ
20ರಷ್ಟು ಕ್ರೀಡಾಪಟುಗಳಿದ್ದ ಭಾರತೀಯ ತಂಡ ರವಿವಾರ ಹೊಸದಿಲ್ಲಿಯಿಂದ ಪ್ಯಾರಿಸ್‌ಗೆ ಪ್ರಯಾಣಿಸಿದೆ. ಪ್ಯಾರಾಲಿಂಪಿಕ್ಸ್‌ ವೇಳಾಪಟ್ಟಿಗೆ ಅನುಗುಣವಾಗಿ ಗುಂಪುಗಳಾಗಿ ಭಾರತೀಯ ಕ್ರೀಡಾಪಟುಗಳು ಪ್ಯಾರಿಸ್‌ ತಲುಪುತ್ತಿದ್ದಾರೆ.

ದೊಡ್ಡ ಆ್ಯತ್ಲೆಟಿಕ್ಸ್‌ ತಂಡ
ಈ ಬಾರಿಯ ಪ್ಯಾರಾಲಿಂಪಿಕ್ಸ್‌ ನಲ್ಲಿ ಪಾಲ್ಗೊಳ್ಳುತ್ತಿರುವ 84 ಮಂದಿ ಕ್ರೀಡಾ ಪಟುಗಳಲ್ಲಿ 38 ಮಂದಿ ಆ್ಯತ್ಲೆಟಿಕ್ಸ್‌ ವಿಭಾಗ ದಿಂದ ಸ್ಪರ್ಧಿಸುತ್ತಿದ್ದಾರೆ ಎನ್ನುವುದು ವಿಶೇಷ. ಹೀಗಾಗಿ ಈ ಬಾರಿ ಆ್ಯತ್ಲೆಟಿಕ್ಸ್‌ನಲ್ಲೇ ಭಾರತಕ್ಕೆ ಹೆಚ್ಚು ಪದಕಗಳು ಬರುವುದನ್ನು ನಿರೀಕ್ಷಿಸಲಾಗಿದೆ.

Advertisement

ಹೆಚ್ಚಿನ ಸಂಖ್ಯೆಯ ಅಧಿಕಾರಿಗಳ ಅಗತ್ಯ
ನೀವು ಯಾವುದೇ ಪ್ಯಾರಾ ಕ್ರೀಡಾ ಸ್ಪರ್ಧೆಗಳನ್ನು ಗಣನೆಗೆ ತೆಗೆದುಕೊಂಡರೆ, ಸಾಮಾನ್ಯ ಕ್ರೀಡಾಪಟುಗಳಿಗಿಂತ ಪ್ಯಾರಾ ಆ್ಯತ್ಲೀಟ್‌ಗಳಿಗೆ ಹೆಚ್ಚಿನ ಸಂಖ್ಯೆಯ ವೈಯಕ್ತಿಕ ಕೋಚ್‌ ಹಾಗೂ ಸಹಾಯಕರ ಅಗತ್ಯವಿರುತ್ತದೆ. ಹೀಗಾಗಿ ಪ್ರಮುಖ ಪ್ಯಾರಾ ಕ್ರೀಡಾಕೂಟಗಳ ವೇಳೆ ಅಧಿಕಾರಿಗಳ ಸಂಖ್ಯೆಯೇ ದೊಡ್ಡದಿರುವುದು ಹೊಸದೇನಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next