ಪ್ಯಾರಿಸ್: ವಿಶ್ವದ ಬಹುದೊಡ್ಡ ಕ್ರೀಡಾಕೂಟ ಒಲಿಂಪಿಕ್ಸ್ ಗೆ ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ಭಾರತೀಯ ಕಾಲಮಾನ ರಾತ್ರಿ 11.30ಕ್ಕೆ ಅದ್ದೂರಿಯಾಗಿ ಚಾಲನೆ ದೊರೆಯಲಿದೆ. 1924ರಲ್ಲಿಯೂ ಈ ಕ್ರೀಡಾಕೂಟವನ್ನು ಪ್ಯಾರಿಸ್ ಆಯೋಜಿಸಿದ್ದು, ಈ ಬಾರಿ ಅದರ ಶತಮಾನದ ಸಂಭ್ರಮೋತ್ಸವದಲ್ಲಿದೆ. ಹಾಗಾಗಿ ಇಡೀ ಪ್ರಪಂಚದ ಚಿತ್ತ ಪ್ಯಾರಿಸ್‌ನ ಕಡೆಗಿದೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಡವು ನದಿಯ ಮೇಲೆ ಆರಂಭ ಕಾಣಲಿದೆ.! ಸಾಮಾನ್ಯವಾಗಿ ದೊಡ್ಡ ಸ್ಟೇಡಿಯಂನಲ್ಲಿ ಉದ್ಘಾಟನೆ ದೊರೆಯುತ್ತಿದ್ದ ಕ್ರೀಡಾಕೂಟಕ್ಕೆ ಈ ಬಾರಿ ಪ್ಯಾರಿಸ್‌ನ ಸೆನ್ ನದಿಯ ಮೇಲೆ ಆಕರ್ಷಕ ಆರಂಭ ಸಿಗಲಿದೆ. ಈ ಐತಿಹಾಸಿಕ ಕ್ಷಣವನ್ನು ವಿಶ್ವದ ಪ್ರಸಿದ್ಧ ಸರ್ಚ್ ಎಂಜಿನ್ ಗೂಗಲ್ ಸಹಿತ ತನ್ನ ವಿಶಿಷ್ಟ ಡೂಡಲ್ ಮೂಲಕ ಸಂಭ್ರಮಿಸುತ್ತಿದೆ. ಗೂಗಲ್ ನದಿಯ ಮೇಲೆ ವಿವಿಧ ಪ್ರಾಣಿ-ಪಕ್ಷಿಗಳು ರಾಕೆಟ್, ಬಾಲ್, ಸ್ಕೇಟಿಂಗ್ ಸಲಕರಣೆಗಳನ್ನು ಹಿಡಿದಿರುವ ಅನಿಮೇಟೆಡ್ ಚಿತ್ರಣದ ಡೂಡಲ್‌ನ್ನು ರೂಪಿಸಿದೆ.
“ಡೂಡಲ್ 2024ನೇ ಬೇಸಗೆ ಒಲಿಂಪಿಕ್ಸ್ ಕ್ರೀಡಾಕೂಟದ ಆಚರಣೆಯನ್ನು ಸಂಭ್ರಮಿಸುತ್ತದೆ. ಇಲ್ಲಿ ಹಳೆಯ ದಾಖಲೆಗಳು ಮುರಿದು, ಹೊಸ ಇತಿಹಾಸವು ಸೃಷ್ಟಿಯಾಗಲಿದೆ. ಬೆಳಕಿನ ನಗರವು ಮೊದಲ ಬಾರಿಗೆ ಕ್ರೀಡಾಂಗಣದಲ್ಲಿ ಅಲ್ಲದೇ, ಸೇನ್ ನದಿಯಲ್ಲಿ ಕ್ರೀಡಾಪಟುಗಳು ಹೆಜ್ಜೆ ಹಾಕುವ ಮೂಲಕ ಚಾಲನೆ ನೀಡುತ್ತಿದೆ’ ಎಂದು ಗೂಗಲ್ ಹೇಳಿಕೊಂಡಿದೆ.
ಇಂದಿನಿಂದ ಆರಂಭವಾಗಲಿರುವ 33ನೇ ಒಲಿಂಪಿಕ್ಸ್ ಕ್ರೀಡಾಕೂಟವು ಒಟ್ಟಾರೆ 17 ದಿನಗಳ ಕಾಲ ನಡೆಯಲಿದೆ. ಫ್ರಾನ್ಸ್ ಮೂರನೇ ಬಾರಿಗೆ ಆತಿಥ್ಯವನ್ನು ವಹಿಸಿಕೊಂಡಿದ್ದು ವಿಜೃಂಭಣೆಯ ಐತಿಹಾಸಿಕ ಚಾಲನೆಯನ್ನು ನೀಡಲು ಸಜ್ಜಾಗಿದೆ.