ಪ್ಯಾರಿಸ್: ಎರಡು ಕಂಚಿನ ಪದಕ ಗೆದ್ದುಕೊಂಡಿದ್ದ ಭಾರತದ ಯುವ ಶೂಟರ್ ಮನು ಭಾಕರ್ ಅವರ ಹ್ಯಾಟ್ರಿಕ್ ಆಸೆ ಈಡೆರಲಿಲ್ಲ. ಶನಿವಾರ (ಆ 03) ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನಡೆದ 25 ಮೀ ಪಿಸ್ತೂಲ್ ಫೈನಲ್ ನಲ್ಲಿ ಮನು ಭಾಕರ್ ನಾಲ್ಕನೇ ಸ್ಥಾನಿಯಾಗಿ ಪಂದ್ಯ ಮುಗಿಸಿದರು.
ತೀವ್ರ ಪೈಪೋಟಿಯಿಂದ ಕೂಡಿದ ಫೈನಲ್ ನಲ್ಲಿ, ಮನು ಭಾಕರ್ ಅಗ್ರ 5 ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು, ಆದರೆ ಕಂಚಿನ ಪದಕಕ್ಕಾಗಿ ನಡೆದ ಸುತ್ತಿನಲ್ಲಿ ಹಂಗೇರಿಯ ವೆರೋನಿಕಾ ಮೇಜರ್ ವಿರುದ್ಧ ಶೂಟ್-ಆಫ್ ನಲ್ಲಿ ಸೋತರು.
ಮನು ಭಾಕರ್ ಒಂದೇ ಒಲಿಂಪಿಕ್ಸ್ ಅಭಿಯಾನದಲ್ಲಿ ಎರಡು ಶೂಟಿಂಗ್ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಎಂಬ ಇತಿಹಾಸವನ್ನು ಬರೆದಿದ್ದಾರೆ. ಅವರು 10 ಮೀಟರ್ ಏರ್ ಪಿಸ್ತೂಲ್ ಕೂಟದಲ್ಲಿ ಕಂಚು ಗೆದ್ದಿದ್ದರು. ನಂತರ ಮಿಶ್ರ ತಂಡ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಕಂಚು ಗೆದ್ದರು. 25 ಮೀ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಹಂತದಲ್ಲಿ 2ನೇ ಸ್ಥಾನ ಪಡೆದು ಫೈನಲ್ ತಲುಪಿದ್ದ ಮನು ಹ್ಯಾಟ್ರಿಕ್ ಪದಕದ ಆಸೆ ಮೂಡಿಸಿದ್ದರು.
ಫೈನಲ್‌ನಲ್ಲಿ, ಮನು ಪ್ರಬಲವಾದ ಶೂಟ್ ಮೂಲಕ ಪ್ರಾರಂಭಿಸಿದರು. ಫೈನಲ್ ನಲ್ಲಿ ಯುವ ಶೂಟರ್‌ಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಪ್ರತಿ ಶೂಟರ್ ಹಂತ 1 ರಲ್ಲಿ 5 ಹೊಡೆತಗಳ 3 ಸರಣಿಗಳನ್ನು ಹೊಂದಿದ್ದರು. ಶೂಟರ್ 10.2 ಕ್ಕಿಂತ ಹೆಚ್ಚು ಶೂಟ್ ಮಾಡಿದರೆ ಮಾತ್ರ ಅಂಕವನ್ನು ಪಡೆಯುತ್ತಾರೆ.
ಮನು ಭಾಕರ್ ಅವರು ಎರಡು ಪದಕಗಳೊಂದಿಗೆ ಪ್ಯಾರಿಸ್ ನಿಂದ ಮರಳಲಿದ್ದಾರೆ. 2 ಒಲಿಂಪಿಕ್ ಪದಕಗಳೊಂದಿಗೆ ಭಾರತೀಯ ಅಥ್ಲೀಟ್‌ಗಳ ಎಲೈಟ್ ಕ್ಲಬ್ ನಲ್ಲಿ ಪಿವಿ ಸಿಂಧು ಮತ್ತು ಸುಶೀಲ್ ಕುಮಾರ್ ಅವರೊಂದಿಗೆ ಕಾಣಿಸಿಕೊಳ್ಳುತ್ತಾರೆ.
ಮನು ಭಾಕರ್ ಅವರ 10 ಮೀಟರ್ ಏರ್ ಪಿಸ್ತೂಲ್ ಕಂಚು ಇಡೀ ಭಾರತೀಯ ತಂಡವನ್ನು ಪ್ರೇರೇಪಿಸಿತು. ಸ್ವಪ್ನಿಲ್ ಕುಸಾಲೆ ಅವರು 50 ಮೀಟರ್ ರೈಫಲ್ 3 ಪೊಸಿಷನ್ಸ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯರಾದರು. ಭಾರತವು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಇದುವರೆಗೆ 3 ಪದಕಗಳನ್ನು ಗೆದ್ದಿದೆ. ಅವೆಲ್ಲವೂ ಶೂಟಿಂಗ್‌ನಿಂದ ಬಂದವು.