ಪ್ಯಾರಿಸ್: ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಗೂ ಮುನ್ನ ಅಧಿಕ ತೂಕ ಹೊಂದಿರುವ ಕಾರಣದಿಂದ ಅನರ್ಹಗೊಂಡಿರುವ ವಿನೀಶ್ ಫೋಗಟ್ ಅವರಿಗೆ ಅರ್ಹ ಬೆಳ್ಳಿ ಪದಕ ನೀಡಬೇಕು ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಒತ್ತಾಯಿಸಿದ್ದಾರೆ.
ಅಂತಿಮ ಸುತ್ತಿನಲ್ಲಿ ಅನರ್ಹಗೊಂಡ ಫೋಗಟ್ ಅವರು ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದಾರೆ. ಇದೇ ವೇಳೆ ಕೋರ್ಟ್ ಆಫ್ ಆರ್ಬಿಟ್ರೇಶನ್ ಆಫ್ ಸ್ಪೋರ್ಟ್ (CAS) ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಆಗಸ್ಟ್ 8 ರಂದು ಅರ್ಜಿಯ ಪ್ರಕ್ರಿಯೆಯನ್ನು ಅಂಗೀಕರಿಸಲಾಗಿದ್ದು, ಫೋಗಟ್ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಲಿದ್ದಾರೆ.
ಸಚಿನ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. ವಿನೀಶ್ ಅವರು ಫೈನಲ್ ಗೆ ನ್ಯಾಯಯುತವಾಗಿ ಅರ್ಹತೆ ಪಡೆದಿದ್ದಾರೆ, ಆದರೆ ಅರ್ಹ ಪದಕವನ್ನು ಕಸಿದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
“ಪ್ರತಿಯೊಂದು ಕ್ರೀಡೆಗೂ ನಿಯಮಗಳಿವೆ. ಆ ನಿಯಮಗಳನ್ನು ಸನ್ನಿವೇಶದ ಚೌಕಟ್ಟಿನಲ್ಲಿ ನೋಡಬೇಕು, ಕೆಲವೊಮ್ಮೆ ಮರುಪರಿಶೀಲಿಸಬೇಕು. ವಿನೀಶ್ ಫೋಗಟ್ ಫೈನಲ್ ಗೆ ನ್ಯಾಯೋಚಿತವಾಗಿ ಅರ್ಹತೆ ಪಡೆದರು. ಆಕೆಯ ತೂಕದ ಅನರ್ಹತೆಯು ಫೈನಲ್ ಗೆ ಮೊದಲಷ್ಟೇ ಆಯಿತು. ಆಕೆಗೆ ಅರ್ಹವಾದ ಬೆಳ್ಳಿ ಪದಕವನ್ನು ಕಸಿದುಕೊಳ್ಳುವುದು ತರ್ಕ ಮತ್ತು ಕ್ರೀಡಾ ಪ್ರಜ್ಞೆಗೆ ವಿರೋಧವಾಗುತ್ತದೆ.”
“ಕಾರ್ಯಕ್ಷಮತೆ ಹೆಚ್ಚಿಸುವ ಔಷಧಿಗಳ ಬಳಕೆಯಂತಹ ನೈತಿಕ ಉಲ್ಲಂಘನೆಗಳಿಗಾಗಿ ಕ್ರೀಡಾಪಟುವನ್ನು ಅನರ್ಹಗೊಳಿಸಿದರೆ ಅದು ಸರಿ. ಆ ಸಂದರ್ಭದಲ್ಲಿ, ಯಾವುದೇ ಪದಕವನ್ನು ನೀಡದಿರುವುದು ಮತ್ತು ಕೊನೆಯ ಸ್ಥಾನವನ್ನು ನೀಡುವುದು ಸಮರ್ಥನೀಯ. ಆದರೆ, ವಿನೀಶ್ ತನ್ನ ಎದುರಾಳಿಗಳನ್ನು ಸೋಲಿಸಿದರು. ನ್ಯಾಯಯುತವಾಗಿ ಫೈನಲ್ ಗೆ ತಲುಪಿದ ಅವಳು ಖಂಡಿತವಾಗಿಯೂ ಬೆಳ್ಳಿ ಪದಕಕ್ಕೆ ಅರ್ಹಳು” ಎಂದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಮಹಿಳೆಯರ 50 ಕೆಜಿ ವಿಭಾಗದ ಫೈನಲ್ ನಿಂದ ವಿನೀಶ್ ಫೋಗಟ್ ಅವರು ಅನರ್ಹಗೊಳಿಸಿರುವ ಕುರಿತು ಮಾಡಿದ ಮನವಿಯ ನಿರ್ಧಾರವು ಪ್ಯಾರಿಸ್ ಒಲಿಂಪಿಕ್ಸ್ 2024 ರ ಅಂತ್ಯವಾಗುವ ಮೊದಲು ಹೊರಬರಲಿದೆ ಎಂದು ಆಗಸ್ಟ್ 9, ಶುಕ್ರವಾರದಂದು ಸಿಎಎಸ್ ಹೇಳಿದೆ.