Advertisement

Parijatha Flower: ಮನೆಯಂಗಳದ ಅಪ್ಸರೆ ಪಾರಿಜಾತ

10:22 AM Oct 24, 2023 | Team Udayavani |

ಪಾರಿಜಾತ ಹೆಸರಲ್ಲೇ ಏನೋ ವಿಶೇಷ ಸೆಳೆತವಿದೆ. ಮೋಹಕತೆಯಿದೆ. ಇದು ಪುಷ್ಪ ಪ್ರಬೇಧದಲ್ಲೇ ವಿಶೇಷ ಸ್ಥಾನಮಾನ ಪಡೆದಿರುವ ಹೂವು. ದೇವತೆಗಳು ಮತ್ತು ಅಸುರರು ಅಮೃತವನ್ನು ಪಡೆಯಲು ಸಮುದ್ರ ಮಥನ ನಡೆಸಿದ ಸಂದರ್ಭದಲ್ಲಿ ಕ್ಷೀರ ಸಮುದ್ರದಿಂದ 14 ಅಮೂಲ್ಯ ರತ್ನಗಳಲ್ಲದೆ 5 ಕಲ್ಪವೃಕ್ಷಗಳು ಹುಟ್ಟಿದವೆಂದು ನಂಬಿಕೆಯಿದೆ. ಅವುಗಳೆಂದರೆ ಪಾರಿಜಾತ, ಮಂದಾರ, ಸಂತಾನ, ನಾರೀಕೇಳ (ತೆಂಗು) ಮತ್ತು ಹರಿಚಂದನ.

Advertisement

ಭಗವಾನ್‌ ಶ್ರೀಕೃಷ್ಣನು ದೇವಲೋಕದಿಂದ ಪಾರಿಜಾತ ಸಸ್ಯವನ್ನು ತಂದು ಸತ್ಯಭಾಮೆಯ ಮನೆಯ ಅಂಗಳದಲ್ಲಿ ನೆಟ್ಟು, ಅದರ ಹೂವುಗಳು ರುಕ್ಮಿಣಿಯ ಮನೆಯ ಅಂಗಳಕ್ಕೆ ಬೀಳುವಂತೆ ಮಾಡುತ್ತಾನೆ. ಈ ಮೂಲಕ ಸತ್ಯಭಾಮೆಯ ಮನದಲ್ಲಿ ಮನೆ ಮಾಡಿದ್ದ ದುರಹಂಕಾರ ನಿರ್ಮೂಲವಾಯಿತು ಎಂದು ಪುರಾಣದಲ್ಲಿ ಉಲ್ಲೇಖವಿದೆ. ಇನ್ನೊಂದು ಕಥೆಯ ಪ್ರಕಾರ ಸೂರ್ಯದೇವನನ್ನು ಪ್ರೀತಿಸುವ ಪಾರಿಜಾತಕ ಎಂಬ ರಾಜಕುಮಾರಿಯು ಅವನಿಂದ ಉಪೇಕ್ಷೆಗೊಳಗಾಗುತ್ತಾಳೆ. ಇದರಿಂದ ಮನನೊಂದ ರಾಜಕುಮಾರಿ, ಅಗ್ನಿಗೆ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ. ಪಾರಿಜಾತಕಳ ಚಿತಾಭಸ್ಮದಿಂದ ಒಂದು ಸಸ್ಯ ಹುಟ್ಟುತ್ತದೆ. ಅದೇ ಪಾರಿಜಾತ! ಸೂರ್ಯಾಸ್ತದ ನಂತರ ಅರಳುವ ಪಾರಿಜಾತದ ಹೂವು ಸೂರ್ಯೋದಯವಾಗುತ್ತಲೇ ಗಿಡದಿಂದ ಉದುರಿ ಬೀಳುವ ಮೂಲಕ, ತಾನು ಮತ್ತೆಂದೂ ಸೂರ್ಯನನ್ನು ನೋಡಲಾರನೆಂಬ ಪಾರಿಜಾತಳ ಪ್ರತಿಜ್ಞೆಯನ್ನು ಪಾಲಿಸುತ್ತದೆ ಎಂಬುದು ಕಥೆಯ ಸಾರ.

ರಾತ್ರಿ ಅರಳುವ ಹೂ:

ಸೂರ್ಯ ಕಿರಣಗಳ ಶಾಖ ತಡೆಯುವ ಶಕ್ತಿ ಇಲ್ಲದೇ ಉದುರಿ ಬೀಳುವ ಈ ಹೂವಿನ ಗುಣದಿಂದಾಗಿ ಈ ಮರಕ್ಕೆ “ಸೊರಗಿದ ಮರ’ವೆಂದೂ ಕರೆಯಲಾಗುತ್ತದೆ. ಪಾರಿಜಾತದಲ್ಲಿ ಎರಡು ಬಗೆಯಿದ್ದು, ಮೊದಲನೆಯದ್ದು ಆರು ಎಸಳುಗಳು ಪ್ರತ್ಯೇಕ ಪ್ರತ್ಯೇಕವಾಗಿದ್ದು ಮುದುರಿಕೊಂಡಿದ್ದರೆ, ಇನ್ನೊಂದು ಅಗಲ ಅಗಲವಾದ ದಳಗಳಿಂದ ಕೂಡಿದ್ದು ಒಂದಕ್ಕೊಂದು ಸೇರಿಕೊಂಡಿರುತ್ತದೆ. ಸುವಾಸನೆಯಿಂದ ಕೂಡಿರುವ ಈ ಹೂವು  ಬಿಳಿಯ ಎಸಳುಗಳು, ಕೇಸರಿ ತೊಟ್ಟು ಮತ್ತು ಸೂಕ್ಷ್ಮ ದಳಗಳನ್ನು ಹೊಂದಿದೆ. ಬೀಜದಿಂದ ಹಾಗೂ ಮಳೆಗಾಲದಲ್ಲಿ ಗೆಲ್ಲುಗಳನ್ನು ಕಡಿದು ನೆಡುವ ಮೂಲಕವೂ ಈ ಗಿಡದ ವಂಶಾಭಿವೃದ್ಧಿ ಮಾಡಬಹುದಾಗಿದೆ.  ಹತ್ತರಿಂದ ಹದಿನೈದು ಅಡಿ ಎತ್ತರದವರೆಗೂ ಬೆಳೆಯಬಲ್ಲ ಈ ಸಸ್ಯಕ್ಕೆ ಆಂಗ್ಲ ಭಾಷೆಯಲ್ಲಿ “ನೈಟ್‌ ಜಾಸ್ಮಿನ್‌’ ಅಥವಾ “ಕೋರಲ್‌ ಜಾಸ್ಮಿನ್‌’ ಎಂಬ ಹೆಸರಿದೆ.

ಔಷಧೀಯ ಗುಣ: 

Advertisement

ಆಯುರ್ವೇದ ಹಾಗೂ ಸುಶ್ರುತ ವೈದ್ಯಶಾಸ್ತ್ರದ ಪ್ರಕಾರ, ಪಾರಿಜಾತ ಸಸ್ಯದಲ್ಲಿ ಔಷಧೀಯ ಗುಣವಿದ್ದು, ಇದರ ತೊಗಟೆಯಿಂದ ತಯಾರಿಸಲಾದ ಕಷಾಯದಿಂದ ಹುಣ್ಣು ಅಥವಾ ಗಾಯವನ್ನು ತೊಳೆದರೆ ಗಾಯ  ಉಪಶಮನವಾಗುವುದು ಎನ್ನಲಾಗುತ್ತದೆ.

ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಗೆ ಈ ಸಸ್ಯದ ಎಲೆಯ ರಸವನ್ನು ಬಳಸುತ್ತಾರೆ. ಪಾರಿಜಾತ ಗಿಡದ ಎಲೆಯಿಂದ ತೆಗೆಯಲಾದ ರಸ ಸೇವಿಸಿದರೆ ಹೊಟ್ಟೆಯ ಜಂತುಹುಳ ಬಾಧೆ ಶಮನವಾಗುವುದು.

ಪಾರಿಜಾತವನ್ನು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹೂವನ್ನು ಅರೆದು ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ತೊಳೆದರೆ ಮುಖವು ಕಾಂತಿಯುತವಾಗುತ್ತದೆ ಎಂಬ ಮಾತಿದೆ.

ದೇವಲೋಕದ ಪುಷ್ಪ :

ರಾತ್ರಿ ಹೊತ್ತೇ ಅರಳಿ ಸುಗಂಧ ಪಸರಿಸುವುದರಿಂದ ಇದನ್ನು “ಟ್ರೀ ಆಫ್ ಸ್ಯಾಡೆ°ಸ್‌’ ಎಂದೂ ಕರೆಯಲಾಗುತ್ತದೆ. ಮನೆಯಂಗಳದಲ್ಲಿ ಒಂದು ಪಾರಿಜಾತ ಗಿಡವಿದ್ದರೆ ಸಾಕು; ಸುತ್ತಮುತ್ತಲಿನ ಪ್ರದೇಶವನ್ನು ತಂಪಾಗಿಸುತ್ತದೆ. ಸಂಜೆ ಮತ್ತು ರಾತ್ರಿ ವೇಳೆ ಅರಳಿ ಕಂಪನ್ನು ಪಸರಿಸುವ ಈ ಹೂವನ್ನು ನೋಡಿದವರು, ಇದನ್ನು ದೇವಲೋಕದ ಪುಷ್ಪವೆನ್ನದೇ ಇರಲಾರರು.

ಸಂತೋಷ್‌ ರಾವ್‌. ಪೆರ್ಮುಡ

Advertisement

Udayavani is now on Telegram. Click here to join our channel and stay updated with the latest news.

Next