Advertisement

ಪರೇಶ್‌ ಮೇಸ್ತ ಪ್ರಕರಣ ಖಂಡಿಸಿ ಪ್ರತಿಭಟನೆ

09:35 AM Dec 21, 2017 | Team Udayavani |

ಸ್ಟೇಟ್‌ಬ್ಯಾಂಕ್‌ : ಪರೇಶ್‌ ಮೇಸ್ತ ಸಾವು ಸಹಜ ಸಾವು ಅಲ್ಲ; ಆತನನ್ನು ಜೆಹಾದಿ ಮನೋಭಾವದ ಕೆಲವರು ಕ್ರೂರವಾಗಿ ಕೊಲೆ ಮಾಡಿದ್ದಾರೆ. ಅಪಘಾತ ಪ್ರಕರಣವೊಂದು ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ ಎಂದು ಆರೋಪಿಸಿದ ವಿಶ್ವಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ಜಗದೀಶ್‌ ಶೇಣವ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

Advertisement

ಹೊನ್ನಾವರದಲ್ಲಿ ಡಿ. 6ರಂದು ನಡೆದ ಪರೇಶ್‌ ಮೇಸ್ತ ನಿಗೂಢ ಸಾವು ಪ್ರಕರಣದ ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ಮಂಗಳೂರು ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಿಯಾಂಕಾ ಪತ್ತೆಗೆ ವಾರದ ಗಡುವು
ಮೂಡಬಿದಿರೆ ದರೆಗುಡ್ಡೆಯಲ್ಲಿ ಲವ್‌ ಜಿಹಾದ್‌ಗೆ ಬಲಿಯಾಗಿದ್ದಾಳೆ ಎನ್ನಲಾದ ಯುವತಿ ಪ್ರಿಯಾಂಕಾಳನ್ನು ಪೊಲೀಸರು ವಾರದೊಳಗೆ ಪತ್ತೆ ಹಚ್ಚಬೇಕು. ತಪ್ಪಿದಲ್ಲಿ ಮೂಡಬಿದಿರೆಯಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು. ಬಳಿಕ ಇಡೀ ಜಿಲ್ಲೆಗೆ ಪ್ರತಿಭಟನೆಯನ್ನು ವಿಸ್ತರಿಸಲಾಗುವುದು ಎಂದು ಜಗದೀಶ್‌ ಶೇಣವ ಹೇಳಿದರು.

ಮುಸ್ಲಿಂ ಸಮಾಜದಲ್ಲಿ ಇಂತಹ ಪ್ರಕರಣವೇನಾದರೂ ನಡೆದರೆ ಪೊಲೀಸರು 24 ಗಂಟೆಯೊಳಗೆ ಆರೋಪಿಗಳನ್ನು ಹುಡುಕಿ ತರುತ್ತಾರೆ. ಹಿಂದೂ ಸಮಾಜಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾತ್ರ ಬೇಗನೆ ಪತ್ತೆಯಾಗುವುದಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಜಿಲ್ಲೆಯಲ್ಲಿ ಶಾಂತಿ, ಸಾಮರಸ್ಯ ನೆಲೆಸಬೇಕಿದ್ದರೆ ಐಸಿಸ್‌/ ಜೆಹಾದಿ ಮನೋಭಾವದ ವ್ಯಕ್ತಿಗಳನ್ನು ಮುಸ್ಲಿಮರೇ ಬಹಿಷ್ಕರಿಸಬೇಕು ಎಂದರು.

ಸರಕಾರ ರಾಜಧರ್ಮ ಪಾಲಿಸಲಿ: ಡಾ| ವಾಮನ ಶೆಣೈ
ಸರಕಾರ ರಾಜ ಧರ್ಮ ಪಾಲಿಸಿ ಸಮಾಜದ ಎಲ್ಲ ವರ್ಗಗಳ ಜನರನ್ನು ಸಮಾನವಾಗಿ ಕಾಣಬೇಕು. ಪರೇಶ್‌ ಮೇಸ್ತ ಸಾವು ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎಂದು ಆರೆಸ್ಸೆಸ್‌ ಪ್ರಾಂತ ಸಹ ಸಂಘ ಚಾಲಕ ಡಾ| ವಾಮನ ಶೆಣೈ ಆಗ್ರಹಿಸಿದರು. ಎಲ್ಲರೂ ಕಾನೂನನ್ನು ಪಾಲಿಸಬೇಕು ಎಂದು ಹೇಳುವ ಸರಕಾರವೂ ಕಾನೂನಿನ ಪ್ರಕಾರ ನಡೆದುಕೊಳ್ಳುವುದು ಅಗತ್ಯ. ಒಂದು ಧರ್ಮದವರನ್ನು ಓಲೈಸುತ್ತಾ ಇನ್ನೊಂದು ಧರ್ಮದವರನ್ನು ತುಳಿಯುವ ಕೆಲಸ ಮಾಡಬಾರದು ಎಂದರು.

Advertisement

ಷಂಡ ಸರಕಾರ: ಕಸ್ತೂರಿ ಪಂಜ
 ರಾಜ್ಯದಲ್ಲಿ ‘ಷಂಡ’ ಸರಕಾರ ಅಧಿಕಾರದಲ್ಲಿದ್ದು, ಗೃಹ ಸಚಿವರು ದುರ್ಬಲರಾಗಿದ್ದಾರೆ. ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯಲು ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸರ ಕೈ ಕಟ್ಟಿ ಹಾಕಿದ್ದು, ಸರಕಾರದ ಆಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ, ಹಿಂದೂ ದಮನ ನೀತಿ ಮುಂದುವರಿದರೆ ಹಿಂದೂ ಮಹಿಳೆಯರೇ ಪ್ರತಿಭಟನೆಗೆ ಸಜ್ಜಾಗಲಿದ್ದಾರೆ ಎಂದರು.

‘ಕಣ್ಣಿಗೆ ಮಣ್ಣೆರಚುವ ಯತ್ನ’
ಸರಕಾರ ಪರೇಶ್‌ ಮೇಸ್ತ ಸಾವು ಪ್ರಕರಣವನ್ನು ಸಿಬಿಐಗೆ ವಹಿಸುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದೆ. ಸಿಬಿಐಗೆ ವಹಿಸಿ ವಾರ ಕಳೆದರೂ ತನಿಖಾ ಪ್ರಕ್ರಿಯೆ ಆರಂಭವಾಗಿಲ್ಲ. ಆದ್ದರಿಂದ ತನಿಖೆಯನ್ನು ಎನ್‌ .ಐ.ಎ. ಗೆ ವಹಿಸಬೇಕೆಂದು ವಿಧಾನ ಪರಿಷತ್‌ ನ ಮಾಜಿ ಅಧ್ಯಕ್ಷ ಕೆ. ಮೋನಪ್ಪ ಭಂಡಾರಿ ಆಗ್ರಹಿಸಿದರು.

 ಶೀಘ್ರ ಪತ್ತೆ ಹಚ್ಚಿ: ಸತ್ಯಜಿತ್‌
ಪರೇಶ್‌ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಸಮಿತಿ ಕಾರ್ಯದರ್ಶಿ ಸತ್ಯಜಿತ್‌ ಸುರತ್ಕಲ್‌ ಆಗ್ರಹಿಸಿದರು. ಈ ಪ್ರಕರಣದಲ್ಲಿ ವೈದ್ಯಕೀಯ ವ್ಯವಸ್ಥೆಯನ್ನು ದುರುಪಯೋಗಿಸಿ ತನಿಖೆಯ ಹಾದಿ ತಪ್ಪಿಸಲು ಯತ್ನಿಸಲಾಗಿದೆ ಎಂದು ಆರೋಪಿಸಿದರು.

ಬಜರಂಗ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ, ಆರೆಸ್ಸೆಸ್‌ ಮಂಗಳೂರು ಮಹಾನಗರ ಸಹ ಸಂಘ ಚಾಲಕ ಸುನೀಲ್‌ ಆಚಾರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next