ಹೊನ್ನಾವರ: ಪರೇಶ ಮೇಸ್ತ ಸಾವು ಪ್ರಕರಣಕ್ಕೆ ಸಂಬಂಧಿಸಿ ನಗರದ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿರುವ ಬಿ ರಿಪೋರ್ಟ್‌ಗೆ ಬುಧವಾರ ಪರೇಶನ ತಂದೆ ಕಮಲಾಕರ ಮೇಸ್ತ ಆಕ್ಷೇಪಣೆ ಸಲ್ಲಿಸಿದ್ದಾರೆ.
2016ರ ಡಿಸೆಂಬರ್ 6ರಂದು ಪಟ್ಟಣದ ಬಸ್ ನಿಲ್ದಾಣ ಸಮೀಪ ನಡೆದ ಕೋಮುಗಲಭೆ ವೇಳೆ ಪರೇಶ ಮೇಸ್ತ ನಾಪತ್ತೆಯಾಗಿದ್ದರು. ಎರಡು ದಿನದ ಬಳಿಕ ಶೆಟ್ಟಿಕೆರೆಯಲ್ಲಿ ಅವರ ಶವ ಪತ್ತೆಯಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಕುಟುಂಬದವರು ಹಾಗೂ ವಿಪಕ್ಷ ಬಿಜೆಪಿ ಆಗ್ರಹದಂತೆ ಅಂದಿನ ಕಾಂಗ್ರೆಸ್ ಸರಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು.
ಕಳೆದ ಅ. 6ರಂದು ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ಪರೇಶ ಮೇಸ್ತನದ್ದು ಕೊಲೆ ಅಲ್ಲ, ಸಹಜ ಸಾವು ಎಂದು ಬಿ ರಿಪೋರ್ಟ್ ಸಲ್ಲಿಸಿತ್ತು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿತರನ್ನು ದೋಷಮುಕ್ತ ಮಾಡಬಹುದೆಂದು ತಿಳಿಸಿತ್ತು. ಆದರೆ ಸಿಬಿಐನ ಈ ವರದಿಗೆ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಮಲಾಕರ ಮೇಸ್ತ ಪರ ನ್ಯಾಯವಾದಿ ನಾಗರಾಜ ನಾಯಕ ಬುಧವಾರ ನ್ಯಾಯಾಲಯಕ್ಕೆ ಆಕ್ಷೇಪಣೆ ಅರ್ಜಿ ಸಲ್ಲಿಸಿದರು.