ಸೋಮವಾರಪೇಟೆ: ಇಲ್ಲಿನ ಶಾಂತಳ್ಳಿ ಹೋಬಳಿಗೆ ಒಳಪಡುವ ಶಾಂತಳ್ಳಿ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ಉದ್ಯಮಿ ಹರಪಳ್ಳಿ ರವೀಂದ್ರ ಅವರು ಉಚಿತವಾಗಿ ಪುಸ್ತಕಗಳನ್ನು ವಿತರಿಸಿದರು.ಶ್ರೀಕುಮಾರಲಿಂಗೇಶ್ವರ ಪ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುಸ್ತಕ ವಿತರಿಸಿಮಾತನಾಡಿದ ರವೀಂದ್ರ ಅವರು, ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಪೋಷಕರು ಗಮನಹರಿಸಬೇಕು. ಆಗಾಗ್ಗೆ ಶಾಲೆಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಬೇಕು ಎಂದರು.
ಬೆಟ್ಟದಳ್ಳಿಯಲ್ಲಿ ಈಗಾಗಲೇ ಶ್ರೀàಕುಮಾರಲಿಂಗೇಶ್ವರ ಆಂಗ್ಲಮಾಧ್ಯಮ ಶಾಲೆಯನ್ನು ಸರ್ವರ ಸಹಕಾರದಿಂದ ಪ್ರಾರಂಭಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಸೌಕರ್ಯಗಳನ್ನು ಒಳಗೊಂಡಂತೆ ವಸತಿ ಶಾಲೆ ಸ್ಥಾಪಿಸಲು ಪ್ರಯತ್ನಿಸಲಾಗುವದು ಎಂದರು.
ಕುಮಾರಲಿಂಗೇಶ್ವರ ಶಾಲೆಯಲ್ಲಿ ಓದಿದ ಅನೇಕರು ಇಂದು ಸಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಉತ್ತಮ ಭವಿಷ್ಯ ಕಟ್ಟಿಕೊಂಡಿದ್ದಾರೆ ಎಂದ ಅವರು, ಶಾಂತಳ್ಳಿ ವ್ಯಾಪ್ತಿಯ ಪೋಷಕರು ತಮ್ಮ ಮಕ್ಕಳನ್ನು ದೂರದ ಊರುಗಳಿಗೆ ವಿದ್ಯಾಭ್ಯಾಸಕ್ಕೆ ಕಳುಹಿಸಬೇಕಾದ ಪರಿಸ್ಥಿತಿಯನ್ನು ಮನಗಂಡು ಬೆಟ್ಟದಳ್ಳಿಯಲ್ಲಿಯೇ ಆಂಗ್ಲಮಾಧ್ಯಮ ಶಾಲೆ ಪ್ರಾರಂಭಿಸಲಾಗಿದ್ದು, ಗ್ರಾಮೀಣ ಭಾಗದ ಮಕ್ಕಳಿಗೂ ಆಂಗ್ಲಮಾಧ್ಯಮದ ಶಿಕ್ಷಣ ಒದಗಿಸಲಾಗುತ್ತಿದೆ. ಶಾಲೆಗಳ ಉಳಿವಿಗೆ ಪೋಷಕರೂ ಸಹ ಕೈಜೋಡಿಸಬೇಕು ಎಂದರು.
ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮೆಡಿಕಲ್, ನರ್ಸಿಂಗ್, ಎಂಜಿನಿಯ ಎರಿಂಗ್ ಕೇಂದ್ರ ಸ್ಥಾಪನೆಯ ಅಗತ್ಯವಿದೆ. ಇದರೊಂದಿಗೆ ಎಲ್ಲಾ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತ ಆಸ್ಪತ್ರೆಯ ಅವಶ್ಯಕತೆಯೂ ಹೆಚ್ಚಿದೆ ಎಂದ ರವೀಂದ್ರ ಅವರು, ಗ್ರಾಮೀಣ ಭಾಗದ ಶಾಲೆಗಳು ಉಳಿದರೆ ಮಾತ್ರ ಗ್ರಾಮಗಳು ಉದ್ದಾರವಾಗುತ್ತವೆ ಎಂದು ಅಭಿಪ್ರಾಯಿಸಿದರು. ಉದ್ಯಮಿ ಗಿರೀಶ್ ಮಲ್ಲಪ್ಪ ಮಾತನಾಡಿ, ಕಳೆದ ವರ್ಷ ಎದುರಾದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ಥರಾದ ಈ ಭಾಗದ ಮಂದಿ ಯಾವದೇ ಹೋರಾಟವನ್ನು ಮಾಡದ ಹಿನ್ನೆಲೆ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ. ಸರ್ಕಾರದಿಂದ ಪರಿಹಾರದ ಹಣ ಬಿಡುಗಡೆಯಾಗಿದ್ದರೂ ಸಂತ್ರಸ್ಥ ರೈತರಿಗೆ ಲಭಿಸುತ್ತಿಲ್ಲ. ಸೌಲಭ್ಯಗಳಿಗಾಗಿ ಹೋರಾಟ ರೂಪಿಸದ ಹೊರತು ಯಾವದೇ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುವದಿಲ್ಲ ಎಂದರು.
ಶ್ರೀಕುಮಾರಲಿಂಗೇಶ್ವರ ಪೂರ್ವ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂಗಪ್ಪ, ಪ್ರೌಢಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಂದರ್, ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಗೋಪಾಲ್, ಖಜಾಂಚಿ ಎ.ಕೆ. ಮಾಚಯ್ಯ, ಮುಖ್ಯೋಪಾಧ್ಯಾಯಿನಿ ರತ್ನಾವತಿ, ಶಿಕ್ಷಕ ಶಿವಾನಂದಪ್ಪ, ಸರ್ಕಾರಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಸೇರಿದಂತೆ ಕುಮಾರಲಿಂಗೇಶ್ವರ ಶಾಲಾಭಿವೃದ್ಧಿ ಸಮಿತಿಯ ನಿರ್ದೇಶಕರುಗಳು ಉಪಸ್ಥಿತರಿದ್ದರು.