ತೆಲಸಂಗ: ಸಮೀಪದ ಕೊಟ್ಟಲಗಿ ಗ್ರಾಮದ ಸಿದ್ದೇಶ್ವರ ಹೂತೋಟದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕೊಠಡಿ ಕೊರತೆ ಪರಿಹರಿಸುವಂತೆ ಆಗ್ರಹಿಸಿ ಪಾಲಕರು ಮಕ್ಕಳೊಂದಿಗೆ ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಮೂಲ ಸೌಕರ್ಯಕ್ಕಾಗಿ ಅದೆಷ್ಟು ಬಾರಿ ಅಧಿಕಾರಿಗಳಿಗೆ ವಿನಂತಿಸಿದರೂ ಪ್ರಯೋಜನವಾಗುತ್ತಿಲ್ಲ. ಜನಪ್ರತಿನಿಧಿಗಳಂತೂ ಇದ್ದೂ ಇಲ್ಲದಂತಾಗಿದೆ. ಹಿಗಾದರೆ ನಮ್ಮ ಮಕ್ಕಳ ಭವಿಷ್ಯ ಹೇಗೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಯುವ ಮುಖಂಡ ರಘುನಾಥ ದೊಡ್ಡನಿಂಗಪ್ಪಗೋಳ ಮಾತನಾಡಿ, ಶಾಲೆಯಲ್ಲಿ 250 ವಿದ್ಯಾರ್ಥಿಗಳಿದ್ದು, ಇನ್ನೂ ದಾಖಲಾತಿ ನಡೆಯುತ್ತಿದೆ. 7ನೇ ತರಗತಿಯವರೆಗಿನ ಶಾಲೆಗೆ ಕೇವಲ 2ಕೊಠಡಿಗಳಿವೆ. ಇನ್ನೂ ಇಲ್ಲಿ 5ಕೊಠಡಿ ನಿರ್ಮಾಣವಾಗಬೇಕು. ಅಡುಗೆ ಕೋಣೆ ಶಿಥಿಲಗೊಂಡಿದೆ. ಮಕ್ಕಳಿಗೆ ಬಿಸಿಯೂಟಕ್ಕೆ ತಟ್ಟೆಗಳಿಲ್ಲ. 6ಜನ ಶಿಕ್ಷಕರಿದ್ದು, ಇನ್ನೂ ಇಬ್ಬರಾದರೂ ಶಿಕ್ಷಕರು ಬೇಕು. 4 ವರ್ಷದಿಂದ ಮಾಡುತ್ತಿರುವ ಮನವಿಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯ ಶಿಕ್ಷಕ ಅಶೋಕ ಜಲವಾದಿ ಸಮಜಾಯಿಷಿ ನೀಡಿದರೂ ಪ್ರಯೋಜನವಾಗಲಿಲ್ಲ. ಪಾಲಕರು ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಕರೆ ಮಾಡಿ ಸಮಸ್ಯೆ ಬಿಚ್ಚಿಟ್ಟರು. ಸದ್ಯ ಕೊಠಡಿ ನಿರ್ಮಾಣಕ್ಕೆ ಪ್ರಸ್ತಾವನೆ ಕಳಿಸಿದ್ದು, ಅನುದಾನ ಬಂದ ತಕ್ಷಣ ಕಟ್ಟಡ ಕೆಲಸ ಪ್ರಾರಂಭಿಸಲಾಗುವುದು ಎಂಬ ಬಿಇಒ ಉತ್ತರಕ್ಕೆ, ಪ್ರತಿಭಟನೆ ಕೈಬಿಡಲಾಯಿತು. ಎರಡು ತಿಂಗಳಲ್ಲಿ ಕಟ್ಟಡ ಕೆಲಸ ಪ್ರಾರಂಭಿಸದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಮುಖ್ಯ ಶಿಕ್ಷಕರಿಗೆ ಎಚ್ಚರಿಕೆ ನೀಡಿದರು.
ಪಾಲಕರಾದ ರಘು ದೊಡ್ಡನಿಂಗಪ್ಪಗೋಳ, ಸಿದ್ದಣ್ಣ ಕೊಂಡಿ, ಸಿದ್ದಪ್ಪ ದೊಡ್ಡನಿಂಗಪ್ಪಗೋಳ, ಭೀಮಣ್ಣ ಬಡವಗೋಳ, ನಿಜಗುಣಿ ದಾನಪ್ಪಗೋಳ, ಮಾಳ್ಪಪ ಜೋಗಿ, ಬಸಣ್ಣ ಮಾನಿಂಗಪ್ಪಗೋಳ, ಮಹಾದೇವ ಬಡವಗೋಳ, ಇನೋಬಾ ದೊಡ್ಡನಿಂಗಪ್ಪಗೋಳ ಸೇರಿದಂತೆ ಅನೇಕರು ಇದ್ದರು.