ಲಕ್ನೋ : ಇಲ್ಲಿನ ಬ್ರೈಟ್ ಲ್ಯಾಂಡ್ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿ ರಿತಿಕ್ ಎಂಬಾತನನ್ನು ಶಾಲೆಯ ಹಿರಿಯ ವಿದ್ಯಾರ್ಥಿನಿಯೊಬ್ಬಳು ಶಾಲಾ ಶೌಚಾಲಯದಲ್ಲಿ ಹರಿತವಾದ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ನಿನ್ನೆ ಬುಧವಾರ ನಡೆದಿದ್ದು ಈ ಸಂಬಂಧ ಆರೋಪಿ ವಿದ್ಯಾರ್ಥಿನಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಆಕೆಯನ್ನು ಬಾಲಾಪರಾಧ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿದ್ದಾರೆ.
ಈ ಘಟನೆಯ ಬಗ್ಗೆ ತೀವ್ರ ಆಕ್ರೋಷಿತರಾಗಿರುವ ಶಾಲೆಯ ಮಕ್ಕಳ ಹೆತ್ತವರು ದೊಡ್ಡ ಸಂಖ್ಯೆಯಲ್ಲಿ ಶಾಲೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಘಟನೆ ನಡೆದ ಒಂದು ದಿನದ ಬಳಿಕ ವಿಷಯವನ್ನು ಪೊಲೀಸರಿಗೆ ತಿಳಿಸಿದ ಹಾಗೂ ಅಲ್ಲಿಯ ವರೆಗೂ ಅದನ್ನು ಮುಚ್ಚಿಟ್ಟು ಕರ್ತವ್ಯ ಲೋಪ ಎಸಗಿದ ಶಾಲೆಯ ಪ್ರಾಂಶುಪಾಲರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಇರಿತದ ಗಾಯಕ್ಕೆ ಗುರಿಯಾದ ವಿದ್ಯಾರ್ಥಿ ರಿತಿಕ್‌ನನ್ನು ದಾಖಲಿಸಲಾಗಿರುವ ದೇವಕಿ ಆಸ್ಪತ್ರೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ನೀಡಿದ್ದಾರೆ. ಬಾಲಕನ ಮೈಮೇಲೆ ಇದ್ದ ಆರೋಪಿ ವಿದ್ಯಾರ್ಥಿನಿಯ ಕೂದಲನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ.
ವಿದ್ಯಾರ್ಥಿ ರಿತಿಕ್ ನ ತಂದೆ ಅಲಹಾಬಾದ್ ಹೈಕೋರ್ಟಿನ ಲಕ್ನೋ ಪೀಠದ ನ್ಯಾಯಾಲಯದಲ್ಲಿ ಪಿಯೋನ್ ಆಗಿದ್ದಾರೆ. ರಿತಿಕ್ ಗೆ ಇರಿತದ ಗಾಯವಾಗಿದೆ ಎಂದು ಶಾಲಾಡಳಿತದವರು ಅವರಿಗೆ ಫೋನ್ ಮೂಲಕ ತಿಳಿಸಿದ್ದಾರೆ. ಆ ಕೂಡಲೇ ಅವರು ಪತ್ನಿಗೆ ಫೋನ್ ಮಾಡಿ ಶಾಲೆಗೆ ಹೋಗಿ ಮಗನನ್ನು ನೋಡುವಂತೆ ಹೇಳಿದ್ದಾರೆ. ಆದರೆ ಶಾಲಾಡಳಿತೆಯವರು ವಿಷಯವನ್ನು ಪೊಲೀಸರಿಗೆ ತಿಳಿಸಲಿಲ್ಲ.
ಶಾಲಾಡಳಿಯ ಅಧಿಕಾರಿಯಾಗಿರುವ ರೀನಾ ಮಾನಸ್ ಎಂಬವರು “ಗಾಯಗೊಂಡ ರಿತಿಕ್‌ನನ್ನು ನಾವು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದೇವೆ. ವಿಷಯವನ್ನು ಕೂಡಲೇ ಹೆತ್ತವರಿಗೆ ತಿಳಿಸಿದ್ದೇವೆ; ಶಾಲೆಯಲ್ಲಿ 70 ಸಿಸಿಟಿವಿ ಕ್ಯಾಮೆರಾಗಳಿವೆ; ಅವೆಲ್ಲವನ್ನೂ ಘಟನೆ ಸಂಬಂಧ ಪರಿಶೀಲಿಸಲಾಗುತ್ತಿದೆ’ ಎಂದಿದ್ದಾರೆ.
1ನೇ ತರಗತಿಯ ವಿದ್ಯಾರ್ಥಿಯಾಗಿರುವ ಬಾಲಕ ರಿತಿಕ್ ಹೇಳಿರುವ ಪ್ರಕಾರ, ಆರೋಪಿ ಹಿರಿಯ ವಿದ್ಯಾರ್ಥಿನಿಯು ಆತನನ್ನು ಶೌಚಾಲಯಕ್ಕೆ ಕರೆದೊಯ್ದು ಅಲ್ಲಿ ಆತನನ್ನು ಕಿಚನ್ ನೈಫ್ ನಿಂದ ಇರಿದಿದ್ದಾಳೆ. ಪೊಲೀಸ್ ತನಿಖೆ ಮುಂದುವರಿದಿದೆ.