ಹಾವೇರಿ: ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದರು ಸರ್ಕಾರ ಶಾಲೆಗಳನ್ನು ಜುಲೈನಿಂದ ಪುನರಾರಂಭಿಸಲು ಉತ್ಸುಕತೆ ತೋರುತ್ತಿದ್ದರೂ ಪಾಲಕರು ಮಾತ್ರ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಉತ್ಸಾಹ ತೋರುತ್ತಿಲ್ಲ. ಒಂದು ವೇಳೆ ಸರ್ಕಾರ ಶಾಲೆ ಆರಂಭಿಸಿದರೆ ತಾವೇನು ನಿರ್ಧಾರ ಮಾಡಬೇಕು ಎಂಬ ಆತಂಕ ಪಾಲಕರನ್ನು ಕಾಡುತ್ತಿದೆ.
ಕೋವಿಡ್ ಮಟ್ಟ ಹಾಕಲು ಸದ್ಯಕ್ಕಿರುವ ಪರಿಹಾರ ಮಾರ್ಗಗಳಲ್ಲಿ ಸ್ವತ್ಛತೆ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಪ್ರಮುಖವಾಗಿವೆ. ಸರ್ಕಾರ ಶಾಲೆಗಳನ್ನು ಆರಂಭಿಸಿದರೆ ಮಕ್ಕಳಿಂದ ಈ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿಸುವುದು ಕಷ್ಟ ಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೂ.5 ರಿಂದಲೇ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗುವಂತೆ, ಜೂ.8 ರಿಂದ ಪ್ರವೇಶಾತಿ ಆರಂಭಕ್ಕೂ ಅವಕಾಶ ನೀಡಿದೆ. ಜುಲೈನಲ್ಲಿ ತರಗತಿ ಶುರು ಮಾಡುವ ಬಗ್ಗೆ ತಯಾರಿ ನಡೆಸಿದೆ. ಈ ನಡುವೆ ಶಾಲಾಭಿವೃದ್ಧಿ ಸಮಿತಿ ಮತ್ತು ವಿದ್ಯಾರ್ಥಿ ಪಾಲಕರ ಅಭಿಪ್ರಾಯ ಸಂಗ್ರಹಕ್ಕೂ ಮುಂದಾಗಿದೆ. ಸರ್ಕಾರದ ಈ ಉತ್ಸುಕತೆಗೆ ಪಾಲಕರಿಂದ ವಿರೋಧವೂ ವ್ಯಕ್ತವಾಗುತ್ತಿದೆ.
ಜಿಲ್ಲೆಯಲ್ಲಿ ಸದ್ಯ 18 ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ. ಹೀಗಿರುವಾಗ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೇಗೆ ಎಂಬ ಪ್ರಶ್ನೆ ಪಾಲಕರದ್ದು. ಸರ್ಕಾರ ಹಲವು ನಿಯಮಗಳನ್ನು ಹೇರಿ ಶಾಲೆ ಆರಂಭಿಸಿದರೂ ನೂರಾರು ಮಕ್ಕಳು ಸೇರಿದಾಗ ಅದರ ಪರಿಪಾಲನೆ ಅಸಾಧ್ಯದ ಮಾತು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಸೇರಿದಂತೆ 1567 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. ಎರಡು ಲಕ್ಷಕ್ಕೂ ಅಧಿಕ ಮಕ್ಕಳಿದ್ದಾರೆ. ಬಹುತೇಕ ಶಾಲೆಗಳಲ್ಲಿ ಮೂಲ ಸೌಕರ್ಯ ಕೊರತೆ ಇದೆ. ಎಷ್ಟೇ ಮುನ್ನೆಚ್ಚರಿಕಾ ಕ್ರಮ ಸೂಚಿಸಿದರೂ ಸುರಕ್ಷತಾ ಕ್ರಮ ಪಾಲಿಸುವುದು ಕಷ್ಟ.
ಪ್ರಾಣಕ್ಕೆ ಸಂಚಕಾರ: ಶಾಲೆ ಆರಂಭಿಸಿದಾಗ ಯಾವುದೇ ಮಗುವಿಗೆ ಸೋಂಕು ತಗುಲಿದರೆ ಇಡೀ ಶಾಲೆಯ ಮಕ್ಕಳು, ಆ ವಿದ್ಯಾರ್ಥಿಗಳ ಪಾಲಕರು ಆತಂಕ ಎದುರಿಸಬೇಕು. ಎಲ್ಲರೂ ಕ್ವಾರಂಟೈನ್‌ಗೆ ಒಳಗಾಗಬೇಕು. ಇಡೀ ಶಾಲೆ ಹಾಗೂ ಸುತ್ತಲಿನ ಪ್ರದೇಶವನ್ನು ಸೀಲ್ ಡೌನ್ ಮಾಡಬೇಕಾಗುತ್ತದೆ. ಆಟೋ, ಬಸ್ ಗಳಲ್ಲಿ ಮಕ್ಕಳು ಶಾಲೆಗೆ ಹೋಗಬೇಕಾಗುತ್ತದೆ. ನಡೆದು ಹೋದರೂ ಕೋವಿಡ್ ಬರುವ ಸಾಧ್ಯತೆ ತಿರಸ್ಕರಿಸುವಂತಿಲ್ಲ. ಸಾಮಾನ್ಯವಾಗಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸೋಂಕಿನಿಂದ ಮಕ್ಕಳ ಪ್ರಾಣಕ್ಕೂ ಸಂಚಕಾರ ಬರುವ ಸಾಧ್ಯತೆ ಇದೆ. ಹೀಗಾಗಿ ಸದ್ಯಕ್ಕೆ ಸೋಂಕು ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳನ್ನು ಪುನರಾರಂಭ ಗೊಳಿಸಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಪ್ರವೇಶಾತಿಗೆ ಖಾಸಗಿ ಶಾಲೆ ಮುಂದೆ: ಸರ್ಕಾರ ಶಾಲಾರಂಭದ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಯವರು ಮಾತ್ರ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಗೆ ಮುಂದಾಗಿವೆ. ಡೊನೇಶನ್, ಶಾಲಾ ಶುಲ್ಕ ಪಾವತಿಗೆ ಪಾಲಕರನ್ನು ಪೀಡಿಸುತ್ತಿವೆ. ವಾಟ್ಸ್‌ಆ್ಯಪ್‌ನಲ್ಲೇ ಆಯಾ ತರಗತಿ ಮಕ್ಕಳ ಪಾಲಕರ ಗ್ರೂಪ್ ರಚಿಸಿ ಪ್ರವೇಶ ಶುಲ್ಕ ಪಾವತಿಸುವಂತೆ, ಒಂದೇ ಬಾರಿ ಶುಲ್ಕ ಪಾವತಿಸಿದರೆ ಕ್ಯಾಶ್ ಬ್ಯಾಕ್ ರಿಯಾಯಿತಿ ಇತ್ಯಾದಿ ತಂತ್ರ ರೂಪಿಸುತ್ತಿವೆ. ಇವರ ಈ ಪೈಪೋಟಿಯಿಂದ ಪಾಲಕರು ಸಹ ಮುಂದೆ ತಮ್ಮ ಮಕ್ಕಳಿಗೆ ಪ್ರವೇಶ ಸಿಗದಿದ್ದರೆ ಎಂಬ ಆತಂಕದಿಂದ ಕೆಲವರು ಶುಲ್ಕ, ಡೊನೇಶನ್ ಕಟ್ಟಲು ಮುಂದಾಗುತ್ತಿದ್ದಾರೆ. ಮತ್ತೆ ಅನೇಕರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಒಟ್ಟಾರೆ ಪ್ರಸ್ತುತ ಶಾಲೆ ಪುನರಾರಂಭಕ್ಕೆ ಪಾಲಕರಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು ಜನಾಭಿಪ್ರಾಯ ಸಂಗ್ರಹದ ಬಳಿಕ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಸರ್ಕಾರದ ಸೂಚನೆಯಂತೆ ಶಾಲಾ ಆಡಳಿತ ಮಂಡಳಿ ಹಾಗೂ ಪಾಲಕರ ಸಭೆ ನಡೆಸುವ ಬಗ್ಗೆ ಎಲ್ಲ ಬಿಇಒಗಳೊಂದಿಗೆ ಜೂಮ್ ಆ್ಯಪ್ ಬಳಸಿ ಆನ್‌ಲೈನ್‌ನಲ್ಲೇ ಚರ್ಚೆ ನಡೆಸಿದ್ದೇವೆ. ಪಾಲಕರಿಂದ ಅಭಿಪ್ರಾಯ ಪಡೆದು ಅದನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ. ಸರ್ಕಾರದಿಂದ ಮುಂದೆ ಬರುವ ನಿರ್ದೇಶನದಂತೆ ಮುಂದುವರಿಯಲಾಗುವುದು. –
ಅಂದಾನಪ್ಪ ವಡಗೇರಿ, ಡಿಡಿಪಿಐ, ಹಾವೇರಿ.
ಕೋವಿಡ್ ಸೋಂಕು ಹೆಚ್ಚುತ್ತಿರುವ ಇಂಥ ಸಂದರ್ಭದಲ್ಲಿ ಶಾಲೆ ಆರಂಭಿಸುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಮಕ್ಕಳ ಆರೋಗ್ಯದ ಹಿತದೃಷ್ಟಿಯನ್ನು ಗಮನದಲ್ಲಿಇರಿಸಿಕೊಂಡು ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದು ಸದ್ಯ ಶಾಲೆ ಆರಂಭಿಸಬಾರದು. –
ಮಂಜುನಾಥ ಹಿರೇಮಠ, ವಿದ್ಯಾರ್ಥಿ ಪಾಲಕರು.