Advertisement
ಮೂಲತಃ ಬಿಜಾಪುರದ ಪರಶುರಾಮ್ ಅವರ ಕುಟುಂಬ ಸುಮಾರು 30 ವರ್ಷಗಳಿಂದ ಮಂಗಳೂರಿನಲ್ಲಿದೆ. ಅಪ್ಪ ಮಡಿವಾಳಪ್ಪ ಅವರಿಗೆ ಬೈಕಂಪಾಡಿ ಬಳಿ ಸಣ್ಣ ಗೂಡಂಗಡಿ ಇದೆ. ಅಮ್ಮ ರೇಣುಕಾ ಅಲ್ಲೇ ಸಹಾಯ ಮಾಡುತ್ತಿದ್ದಾರೆ. ಈ ದಂಪತಿಗೆ 7 ಮಂದಿ ಮಕ್ಕಳು. ಆರ್ಥಿಕವಾಗಿ ಹಿಂದುಳಿದ ಕಾರಣ ಶಾಲೆಯ ಫೀಸ್, ದಿನನಿತ್ಯದ ಖರ್ಚು ಸಹಿತ ಜೀವನದ ಬಂಡಿ ಸಾಗಿಸಲು ಕಷ್ಟಪಡುತ್ತಿದ್ದಾರೆ. ಇದೀಗ ಪರಶುರಾಮ್ ಅವರು ದುಡಿದು ಬಿಡಿಗಾಸು ಸಂಪಾದಿಸುತ್ತಿದ್ದು, ಇದುವೇ ಮನೆಗೆ ಆಧಾರವಾಗಿದೆ.
ಬೆಳಗ್ಗೆ 9 ಗಂಟೆಯಿಂದ ರಾತ್ರಿ ಯವರೆಗೆ ದಿನ ಬಿಟ್ಟು ದಿನ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದೇನೆ. ಪ್ರತೀ ದಿನ ಕೆಲಸ ಮಾಡಬೇಕೆಂಬ ಆಸೆ ಇದ್ದರೂ ದೇಹ ಬಿಡುತ್ತಿಲ್ಲ. ಸೊಂಟ, ಕೈ, ಕಾಲು ನೋಯುತ್ತದೆ. ಹಾಗಾಗಿ ಮಧ್ಯೆ ವಿಶ್ರಾಂತಿ ಪಡೆಯುತ್ತೇನೆ. ಸರಕಾರದ ಯೋಜನೆಯ ಹಣವೂ ಕೆಲವು ತಿಂಗಳಿನಿಂದ ಬರಲಿಲ್ಲ. ಸ್ಕೂಟರ್ ಕೂಡ ಆಗಾಗ್ಗೆ ತೊಂದರೆಕೊಡುತ್ತಿದ್ದು, ದುಡಿದ ಹಣದಲ್ಲಿಯೂ ಹೆಚ್ಚು ಉಳಿತಾಯ ವಾಗುತ್ತಿಲ್ಲ.-ಪರಶುರಾಮ್Related Articles
Advertisement
ಡೆಲಿವರಿ ಬಾಯ್ ಆಗಿದ್ದು ಹೇಗೆ?
ಪರಶುರಾಮ್ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಆಗ ನಿನಗೆ, ಓದಲು ಬರೆಯಲು ಬರುವುದಿಲ್ಲ, ಗಣಿತ ತಿಳಿದಿಲ್ಲ ಎಂದು ಕೆಲವರು ರೇಗಿಸುತ್ತಿದ್ದರು. ಇದರಿಂದಾಗಿ ಅವರು ಕೆಲಸ ಬಿಡಬೇಕಾಯಿತು. ಅದೇ ಸಮಯದಲ್ಲಿ ಟೀ ಶರ್ಟ್ ಹಾಕಿ ಫುಡ್ ಡೆಲಿವರಿ ಮಾಡುತ್ತಿದ್ದವರು ಕಣ್ಣಿಗೆ ಬಿದ್ದರು. ಅವರಲ್ಲಿ ಕೇಳಿದಾಗ ಹೆಚ್ಚೇನೂ ವಿದ್ಯಾರ್ಹತೆ ಬೇಕಾಗಿಲ್ಲ ಎಂದು ಅವರು ಧೈರ್ಯ ತುಂಬಿದರು. ಆ ವೇಳೆಗಾಗಲೇ ಪರಶುರಾಮ್ ಗೆ ಅಂಗವಿಕಲರ ಕೋಟಾದಡಿ ಸರಕಾರದಿಂದ ಸ್ಕೂಟರ್ ಕೂಡ ಸಿಕ್ಕಿತ್ತು. ಸ್ಕೂಟರ್ ಚಲಾಯಿಸಲು ಕಲಿತರು. ಈಗ ಒಂದು ವರ್ಷದಿಂದ ಮನೆ ಮನೆಗೆ ಫುಡ್ ಡೆಲಿವರಿ ಮಾಡುತ್ತಿದ್ದಾರೆ.
ಭಿಕ್ಷಾಟನೆ ಕೂಡ ನಡೆಸಿದ್ದರು
ಪರಶುರಾಮ್ ಕುಟುಂಬ ಕೂಲಿಗೆಂದು ಬಿಜಾಪುರದಿಂದ ಗೋವಾಕ್ಕೆ ಹೋಗಿತ್ತು. ಆಗ 2 ವರ್ಷದ ಮಗುವಿಗೆ ಜ್ವರ ಬಂದಿತ್ತು. ಬಳಿಕ ಕಾಲು ಸಣಕಾಲು ಆಗಲು ಶುರುವಾಯಿತು. ಪೋಲಿಯೋ ಇಂಜೆಕ್ಷನ್ ನೀಡಿದರೂ ಪ್ರಯೋಜನವಾಗಲಿಲ್ಲ. 30 ವರ್ಷದ ಹಿಂದೆ ಕುಟುಂಬ ಮಂಗಳೂರಿಗೆ ಬಂದಿದೆ. 9ನೇ ತರಗತಿವರೆಗೆ ಕಲಿತಿರುವ ಪರಶುರಾಮ್ ಮನೆಯ ಕಷ್ಟ ನೋಡಲಾಗದೆ ರಸ್ತೆಯಲ್ಲಿ ಭಿಕ್ಷಾಟನೆಯನ್ನು ನಡೆಸಿ ಸಿಕ್ಕ ಹಣವನ್ನು ಮನೆಗೆ ನೀಡುತ್ತಿದ್ದರು. ಆಗ ಸಿಕ್ಕ ಹಿರಿಯರೊಬ್ಬರು ದುಡಿದು ತಿನ್ನುವ ಸಲಹೆ ನೀಡಿದರು. ಅಲ್ಲಿಂದ ಬದುಕು ಬದಲಾಯಿತು, ಸೆಕ್ಯೂರಿಟಿ ಗಾರ್ಡ್ ಸಹಿತ ಕೆಲವೊಂದು ಕೆಲಸಗಳನ್ನು ಅವರು ನಿರ್ವಹಿಸಿದ್ದಾರೆ.
– ನವೀನ್ ಭಟ್ ಇಳಂತಿಲ