ಗಾಯಕ ಕಮ್ ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರಿ ಅವರು ಚಿತ್ರದ ಕಥೆಯೊಂದನ್ನು ತುಂಬಾ ಇಷ್ಟಪಟ್ಟು, ತಮ್ಮ ಬ್ಯಾನರ್‌ನಲ್ಲೇ ಸಿನಿಮಾ ನಿರ್ಮಿಸುವುದಾಗಿ ತಯಾರಿ ನಡೆಸಿದ್ದರು. ಅಷ್ಟೇ ಅಲ್ಲ, ಆ ಚಿತ್ರದ ಶೀರ್ಷಿಕೆಯನ್ನೂ ತಮ್ಮ ಬ್ಯಾನರ್‌ನಲ್ಲಿ ನೋಂದಣಿ ಮಾಡಿಸಿದ್ದರು. ಆದರೆ, ಅನಾರೋಗ್ಯ ಆವರಿಸಿದ್ದರಿಂದ ಅವರು ಆ ಚಿತ್ರ ಮಾಡಲು ಸಾಧ್ಯವಾಗಲೇ ಇಲ್ಲ. ಅಷ್ಟಕ್ಕೂ ಎಲ್.ಎನ್.ಶಾಸ್ತ್ರಿ ಮಾಡಬೇಕಿದ್ದ ಚಿತ್ರ ಯಾವುದು ಗೊತ್ತಾ?
ಅದು “ಪರಸಂಗ’. ಹೌದು, ಎಲ್.ಎನ್.ಶಾಸ್ತ್ರಿ ಅವರು ನಿರ್ದೇಶಕ ರಘು ಹೇಳಿದ ಕಥೆ ಕೇಳಿ, “ನಾನೇ ನಿರ್ಮಾಣ ಮಾಡ್ತೀನಿ. ಈ ಕಥೆಯನ್ನು ಯಾರಿಗೂ ಕೊಡಬೇಡ’ ಅಂತ ಹೇಳಿದ್ದರಂತೆ. “ಪರಸಂಗ’ ಶೀರ್ಷಿಕೆಯನ್ನೂ ನೋಂದಣಿ ಮಾಡಿಸಿದ್ದರಂತೆ. ಆದರೆ, ಅನಾರೋಗ್ಯದಿಂದ ಅವರು ಅಗಲಿದ್ದರಿಂದ ಆ ಚಿತ್ರವನ್ನು ಅವರ ಶಿಷ್ಯ ನಿರ್ಮಾಪಕ ಕುಮಾರ್ ಅವರು ನಿರ್ಮಿಸುವ ಮೂಲಕ ಗುರುಗಳ ಆಸೆಯನ್ನು ಈಡೇರಿಸಿದ್ದಾರೆ.
ಸ್ವತಃ ಸಂಗೀತ ನಿರ್ದೇಶಕರಾಗಿದ್ದರೂ, ಎಲ್.ಎನ್.ಶಾಸ್ತ್ರಿ ಅವರು ಹೊಸ ಸಂಗೀತ ನಿರ್ದೇಶಕರನ್ನು ಪರಿಚಯಿಸಬೇಕೆಂದುಕೊಂಡು ಹರ್ಷವರ್ಧನ್‌ರಾಜ್ ಅವರ ಹೆಸರನ್ನು ಸೂಚಿಸಿದ್ದರಂತೆ. ಅದರಂತೆ, ನಿರ್ದೇಶಕರು ಹರ್ಷವರ್ಧನ ರಾಜ್ ಅವರಿಗೆ ಸಂಗೀತದ ಜವಾಬ್ದಾರಿ ವಹಿಸಿದ್ದಾರೆ. ಅವರು ಕೊಟ್ಟ “ಮರಳಿ ಬಾರದೂರಿಗೆ ನಿನ್ನ ಪಯಣ…’ ಹಾಡಿಗೆ ಎಲ್ಲೆಡೆ ಮೆಚ್ಚುಗೆ ಸಿಕ್ಕಿದ್ದರಿಂದ ಚಿತ್ರತಂಡಕ್ಕೆ ಸಹಜವಾಗಿಯೇ ಖುಷಿ ಇದೆ.
ಇನ್ನು, ಇತ್ತೀಚೆಗಷ್ಟೇ, ಎಲ್.ಎನ್.ಶಾಸ್ತ್ರಿ ಅವರ ಬ್ಯಾನರ್‌ನಲ್ಲಿದ್ದ “ಪರಸಂಗ’ ಚಿತ್ರದ ಶೀರ್ಷಿಕೆಯನ್ನು ನಿರ್ಮಾಪಕ ಕುಮಾರ್ ತಮ್ಮ ಬ್ಯಾನರ್‌ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅದಕ್ಕೂ ಮುನ್ನ, ಎಲ್.ಎನ್.ಶಾಸ್ತ್ರಿ ಅವರ ಪತ್ನಿ ಅವರಿಂದ ಒಪ್ಪಿಗೆ ಪಡೆದು ಶೀರ್ಷಿಕೆ ಪಡೆದಿದ್ದಾರೆ. ಇದು ಹಳ್ಳಿಯೊಂದರ ನೈಜ ಕಥೆ. ಅದರಲ್ಲೂ ತಿಮ್ಮ ಎಂಬ ವ್ಯಕ್ತಿಯ ನಿಜ ಕಥೆ. ಆತ ಊರು ಬಿಟ್ಟು ಹದಿನೈದು ವರ್ಷ ಕಳೆದಿವೆ.
ಆತನನ್ನು ಹುಡುಕಲು ಚಿತ್ರತಂಡ ಒಂದು ತಂಡ ಮಾಡಿ, ಮೂರು ತಿಂಗಳ ಕಾಲ ಅಲೆದಾಡಿದೆ. ಕೊನೆಗೆ ಆ ತಿಮ್ಮನನ್ನು ಹುಡುಕಿ ತಂದಿದೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಆ ರಿಯಲ್ ಪಾತ್ರದಾರಿಯನ್ನೂ ತೋರಿಸಿದ್ದಾರಂತೆ ನಿರ್ದೇಶಕರು. ಅದೇನೆ ಇರಲಿ, ತಿಮ್ಮನ ಕಥೆ ಹೊಂದಿರುವ “ಪರಸಂಗ’ನನ್ನು ನಿರ್ದೇಶಕ ಪ್ರೇಮ್ ಕೂಡ ಹಾಡಿ ಹೊಗಳಿರುವುದು ಇನ್ನೊಂದು ವಿಶೇಷ. ಚಿತ್ರ ಜುಲೈ 6 ಕ್ಕೆ ಸುಮಾರು 120 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.