ಮೈಸೂರು: ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕಾರಣಕ್ಕೆ ಡಿಐಜಿ ರೂಪಾ ಅವರಿಗೆ ಸರ್ಕಾರ ಶುಕ್ರಾವಾರ ನೊಟೀಸ್ ನೀಡಿದೆ.
ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಹಿರಿಯ ಅಧಿಕಾರಿಗೆ ವರದಿ ನೀಡಬೇಕೆ ವಿನಹ ಪದೇ ಪದೇ ಮಾಧ್ಯಮಗಳಿಗೆ ಹೇಳಿಕೆ ನೀಡುವುದು ಕಾನೂನು ಉಲ್ಲಂಘಿಸಿದಂತಾಗುತ್ತದೆ. ಆದ್ದರಿಂದ ಡಿಐಜಿ ರೂಪಾಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು.
ಇಂದು ವರುಣಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು. ಡಿಐಜಿ ರೂಪಾ ಅವರ ವರದಿ ಆಧಾರದ ಮೇಲೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ವಿಚಾರಣೆ ನಡೆಸುವಂತೆ ಆದೇಶ ನೀಡಿರುವುದಾಗಿ ತಿಳಿಸಿದರು.
ಪರಪ್ಪನ ಅಗ್ರಹಾರದಲ್ಲಿ ಸೆರೆವಾಸ ಅನುಭವಿಸುತ್ತಿರುವ ಎಐಎಡಿಎಂಕೆ (ಅಮ್ಮ ಬಣ) ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾಗೆ ವಿಶೇಷ ಆತಿಥ್ಯ ನೀಡಲು ಕಾರಾಗೃಹ ಡಿಜಿಪಿ ಸತ್ಯನಾರಾಯಣ 2 ಕೋಟಿ ರೂ. ಲಂಚ ಪಡೆದಿದ್ದಾರೆ. ಛಾಪಾ ಕಾಗದ ಆರೋಪಿ ತೆಲಗಿಗೆ ಕಾರಾಗೃಹ ನಿಯಮ ಉಲ್ಲಂಘಿಸಿ ಆತಿಥ್ಯ ನೀಡಲಾಗುತ್ತಿದೆ ಎಂಬ ಅಂಶವನ್ನು ರೂಪಾ ಬಹಿರಂಗಪಡಿಸಿದ್ದರು.
ಕಾರಾಗೃಹ ಡಿಜಿಪಿ ಸತ್ಯನಾರಾಯಣರಾವ್ ವಿರುದ್ಧ ಡಿಐಜಿ ರೂಪಾ ಮಾಡಿರುವ ಆರೋಪ ಪೊಲೀಸ್ ಇಲಾಖೆಯಷ್ಟೇ ಅಲ್ಲದೆ ಸರ್ಕಾರದ ಮಟ್ಟದಲ್ಲೂ ಸಂಚಲನ ಮೂಡಿಸಿದೆ.