Advertisement

ಪರಪ್ಪನ ಅಗ್ರಹಾರ ಮಾದಕ ವ್ಯಸನಿಗಳಲ್ಲಿ ಪೀಕಲಾಟ

08:00 AM Jul 23, 2017 | |

ಬೆಂಗಳೂರು: ಪರಪ್ಪನ ಅಗ್ರಹಾರದ ಅಕ್ರಮದ ಬೆನ್ನಲ್ಲೇ ಜೈಲಿನ ಇಡೀ ವ್ಯವಸ್ಥೆಯೇ ಬದಲಾಗಿದ್ದು, ಮಾದಕ
ವಸ್ತುಗಳ ಪೂರೈಕೆಗೆ ಸಂಪೂರ್ಣ ಬ್ರೇಕ್‌ ಬಿದ್ದಿದೆ. ಪರಿಣಾಮ ಇದರ ದಾಸರಾಗಿದ್ದ ಕೈದಿಗಳಿಗೆ ಚಡಪಡಿಕೆ ಶುರುವಾಗಿದೆ.

Advertisement

ಅಕ್ರಮ ಬಯಲಾಗುತ್ತಿದ್ದಂತೆ ಕಾರಾಗೃಹ ಇಲಾಖೆ ಚಿತ್ರಣವೇ ಬದಲಾಗಿದೆ. ಕೆಳಗಿನಿಂದ ಮೇಲಿನ ಹಂತದವರೆಗಿನ ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ. ಹಾಗಾಗಿ ಈ ಹಿಂದೆ ಸುಲಭವಾಗಿ ಕೈಗೆಟಕುತ್ತಿದ್ದ ಮಾದಕ ವಸ್ತುಗಳ ಪೂರೈಕೆ ನಿಂತಿದೆ. ಇದೀಗ ಅವುಗಳಿಗೆ ದಾಸರಾಗಿದ್ದ ಕೈದಿಗಳು ತೊಳಲಾಟವನ್ನು ಬಹಿರಂಗವಾಗಿ ಹೇಳಿಕೊಳ್ಳುವಂತೆಯೂ ಇಲ್ಲ, ಅದುಮಿಟ್ಟುಕೊಳ್ಳುವಂತೆಯೂ ಇಲ್ಲ ಎಂಬ ಸ್ಥಿತಿಯಲ್ಲಿದ್ದಾರೆ.

ಡಿಐಜಿ ರೂಪಾ ನೀಡಿರುವ ಎರಡು ವರದಿಗಳ ಪ್ರಕಾರ ಜೈಲಿಗೆ ಅಕ್ರಮವಾಗಿ ಮಾದಕ ವಸ್ತುಗಳು ಸರಬರಾಜಾಗುತ್ತಿದ್ದು, ಕೈದಿಗಳ ಸ್ನೇಹಿತರು ಹಾಗೂ ಸಂಬಂಧಿಕರು ಭೇಟಿ ಸಂದರ್ಭದಲ್ಲೇ ಕದ್ದುಮುಚ್ಚಿ ನೀಡುತ್ತಿದ್ದರು ಎನ್ನಲಾಗಿದೆ. ಈ ಮೂಲಕ ಮಾದಕ ವ್ಯಸನಿಗಳಾಗಿರುವ ಕೈದಿಗಳು ಇದೀಗ ತಮ್ಮ ಅನಧಿಕೃತ ಚಟಗಳ ಬಗ್ಗೆ ಜೈಲಿನ ಅಧಿಕಾರಿಗಳು ಅಥವಾ ವೈದ್ಯರ ಬಳಿ ಹೇಳಿಕೊಳ್ಳುವಂತಿಲ್ಲ. ಒಂದು ವೇಳೆ ಹೇಳಿಕೊಂಡರೆ ಅಥವಾ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟರೆ ಮಾದಕ ದ್ರವ್ಯ ಸೇವಿಸಿರುವ ಬಗ್ಗೆ ದೃಢವಾಗುತ್ತದೆ. ಆಗ ಮಾದಕ ವಸ್ತುಗಳ ಬರುವಿಕೆಯ ಬಗ್ಗೆ ತನಿಖೆಗೆ ಒಳಪಡಬೇಕಾಗುತ್ತದೆ.

ಮತ್ತೂಂದೆಡೆ ಹೇಳಿಕೊಳ್ಳದಿದ್ದರೆ ಕೈದಿಗಳು ಮಾನಸಿಕ ಖನ್ನತೆಗೊಳ್ಳಗಾಗುತ್ತಾರೆ. ಏಕೆಂದರೆ ನಿರಂತರವಾಗಿ ಮಾದಕ ವಸ್ತು ಸೇವನೆ ಮಾಡುತ್ತಿದ್ದ ವ್ಯಕ್ತಿ ಏಕಾಏಕಿ ದುಶ್ಚಟಗಳನ್ನು ನಿಲ್ಲಿಸಿದರೆ ಕೆಲ ದಿನಗಳ ಕಾಲ ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಇದು ಆತ್ಮಹತ್ಯೆ ಹಂತಕ್ಕೂ ತಲುಪಬಹುದು ಎಂಬುದು ಮಾನಸಿಕ ತಜ್ಞರ ಅಭಿಪ್ರಾಯ. 

ಅಕ್ರಮಗಳಿಗೆ ಬ್ರೇಕ್‌
ಇಷ್ಟು ದಿನ ಕೈದಿಗಳಿಗೆ ಸುಲಭವಾಗಿ ಸಿಗುತ್ತಿದ್ದ ಡ್ರಗ್ಸ್‌, ಬೀಡಿ, ಸಿಗರೇಟ್‌, ಗಾಂಜಾ, ಮದ್ಯಕ್ಕೆ ಕತ್ತರಿ ಬಿದ್ದಿದೆಯಲ್ಲದೆ,
ಜೈಲಿನಲ್ಲಿ ಗಂಟೆಗಟ್ಟಲೆ ಕುಟುಂಬದ ಸದಸ್ಯರ ಜತೆ ಮಾತನಾಡುವುದು, ಜೈಲಿನಲ್ಲಿದ್ದುಕೊಂಡೇ ಅಪರಾಧ
ಚಟುವಟಿಕೆಗೆ ಸಂಚು ರೂಪಿಸುವುದಕ್ಕೂ ಕಡಿವಾಣ ಹಾಕಲಾಗಿದೆ. ಕಾರಾಗೃಹ ಇಲಾಖೆಗೆ ನೂತನವಾಗಿ ನೇಮಕಗೊಂಡ ಎಡಿಜಿಪಿ ಎನ್‌.ಎಸ್‌. ಮೇಘರಿಕ್‌ ಎಲ್ಲಾ ರೀತಿ ಅಕ್ರಮಗಳಿಗೆ ಬ್ರೇಕ್‌ ಹಾಕಿದ್ದಾರೆ. ಅಲ್ಲದೆ, ಕೈದಿಗಳನ್ನು ಭೇಟಿ ಮಾಡಲು ಬರುವ ಕುಟುಂಬದ ಸದಸ್ಯರಿಗೆ ಕೇವಲ 10 ನಿಮಿಷ ಭೇಟಿ ಅವಕಾಶ ಕಲ್ಪಿಸಲಾಗಿದೆ. ಮನೆಯೂಟವನ್ನೂ ನಿಲ್ಲಿಸಲಾಗಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next