Advertisement

ಪಾರಂಪಳ್ಳಿ: ನನಸಾಗದ ಶಾಶ್ವತ ಸೇತುವೆ ಕನಸು

06:50 AM Apr 24, 2018 | |

ಕೋಟ : ಸಂಪರ್ಕಕ್ಕೆ ಸುಲಭ ಎನ್ನುವ ಕಾರಣಕ್ಕೆ ಹೊಸ ಸೇತುವೆ ಬೇಕು ಎಂದು ಪಾರಂಪಳ್ಳಿ ಜನ ದಶಕಗಳಿಂದ ಜನಪ್ರತಿನಿಧಿಗಳು,ಅಧಿಕಾರ ವರ್ಗದ ಹಿಂದೆ ಅಲೆಯುತ್ತಿದ್ದಾರೆ. ಆದರೆ ಅವರ ಕನಸು ನನಸು ಇನ್ನೂ ಆಗಿಲ್ಲ.ಪಾರಂಪಳ್ಳಿ ತೋಡ್ಕಟ್ಟು, ನಾಯ್ಕನ್‌ ಬೈಲು ಮರದ ಸೇತುವೆಯ ಜಾಗದಲ್ಲಿ ಶಾಶ್ವತ ಸೇತುವೆ ನಿರ್ಮಾಣಗೊಂಡರೆ, ಇಲ್ಲಿನ ಸಂಪರ್ಕಕ್ಕೆ ಪ್ರಮುಖ ಕೊಂಡಿಯಾಗಲಿದೆ. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಯೋಜನೆ ನಿರ್ಲಕ್ಷಿತವಾಗಿಯೇ ಉಳಿಯುವಂತಾಗಿದೆ.  

Advertisement

ಮರದ ಸೇತುವೆಯೇ ಕೊಂಡಿ!
ಸೀತಾನದಿಯ ಉಪನದಿ ನಾಯ್ಕನ್‌ಬೈಲು ಹೊಳೆಗೆ 1952ರಲ್ಲಿ  70 ಮೀ.ಉದ್ದ, 1ಮೀ. ಅಗಲದ ಮರದ ಸೇತುವೆ ನಿರ್ಮಿಸಲಾಗಿತ್ತು. ಅನಂತರ ಉಪ್ಪು ನೀರು ಹಾಗೂ  ಪ್ರಕೃತಿ ವಿಕೋಪದ  ಹೊಡೆತಕ್ಕೆ  ಸಿಲುಕಿ ಸೇತುವೆ  ಹಲವು  ಬಾರಿ ಶಿಥಿಲಗೊಂಡು ದುರಸ್ತಿ ಕಂಡಿತ್ತು. ಇಲ್ಲಿನ ನಿವಾಸಿಗಳು ಬೇರೆ ಮಾರ್ಗದ ಮೂಲಕ ಸಾಲಿಗ್ರಾಮ,  ಕೋಟ ತಲುಪಬೇಕಾದರೆ 8 ಕಿ.ಮೀ. ಸುತ್ತಬೇಕು. ಆದರೆ ಈ ಮರದ ಸೇತುವೆ ಮೂಲಕ ಕೇವಲ 2 ಕಿ.ಮೀ. ಪ್ರಯಾಣಿಸಿ ಈ ಪ್ರದೇಶಗಳನ್ನು ತಲುಪ
ಬಹುದು.

ರಸ್ತೆ ಸಿದ್ಧವಿದೆ; ಸೇತುವೆ ಇಲ್ಲ
ಸಾಲಿಗ್ರಾಮ ಗಣೇಶ ಕೃಪಾ ಕಲ್ಯಾಣ ಮಂಟಪದಿಂದ ಹಾಗೂ  ಪಡುಕರೆಯಿಂದ ಈ ಸೇತುವೆ ಬುಡದ ವರೆಗೆ ಹಲವು ವರ್ಷದ ಹಿಂದೆ ರಸ್ತೆ ನಿರ್ಮಾಣಗೊಂಡಿತ್ತು. ಆದರೆ ಶಾಶ್ವತ ಸೇತುವೆ ಇಂದಿಗೂ ನಿರ್ಮಾಣವಾಗದ ಕಾರಣ ರಸ್ತೆ ನಿರುಪಯುಕ್ತವಾಗಿದೆ.

ಬೇಡಿಕೆ ಸಲ್ಲಿಸಿ ಬೇಸತ್ತರು 
ಪ್ರತಿ ಚುನಾವಣೆ ಸಂದರ್ಭ ಜನಪ್ರತಿನಿಧಿಗಳಿಂದ ಇಲ್ಲಿ ಸೇತುವೆ ನಿರ್ಮಿಸುವುದಾಗಿ  ಆಶ್ವಾಸನೆ ಕೇಳಿ ಬರುತ್ತದೆ.ಆದರೆ ಚುನಾವಣೆ ಮುಗಿದ ಮೇಲೆ ಭರವಸೆ  ಈಡೇರುವುದಿಲ್ಲ ಎನ್ನುವುದು ಗ್ರಾಮಸ್ಥರ ಮಾತು.ಸ್ಥಳೀಯ ವಾರ್ಡ್‌  ಸದಸ್ಯರಿಂದ ಹಿಡಿದು ಶಾಸಕರು,ಸಚಿವರ  ತನಕ  ಮನವಿ ಮಾಡಲಾಗಿದೆ.ಆದರೆ ಸೇತುವೆ ನಿರ್ಮಾಣ ಸಾಧ್ಯವಾಗಿಲ್ಲ. 

ಮಳೆಗಾಲದಲ್ಲಿ ಸರ್ಕಸ್‌ 
ಈಗಿರುವ ಮರದ ಸೇತುವೆಯೂ ಹಲವು ಬಾರಿ ಮುರಿದು ದುರಸ್ತಿ ಕಂಡಿದೆ.ಮಳೆಗಾಲದಲ್ಲಿ ಇದು ಶಿಥಿಲಗೊಳ್ಳುವುದರಿಂದ ಸ್ಥಳೀಯರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕು. ಶಾಲಾ-ಕಾಲೇಜಿಗೆ ತೆರಳುವ ಹತ್ತಾರು ವಿದ್ಯಾರ್ಥಿಗಳು ಹಾಗೂ ರೈತರು, ಮೀನುಗಾರರು, ಕೂಲಿ ಕಾರ್ಮಿಕರು  ತಮ್ಮ ಚಟುವಟಿಕೆಗಳಿಗೆ ಅನಿವಾರ್ಯವಾಗಿ ಇದರ ಮೂಲಕ ತೆರಳುತ್ತಾರೆ. ಪುಟ್ಟ ಮಕ್ಕಳನ್ನು ಹೆತ್ತವರೇ ಸೇತುವೆ ದಾಟಿಸಿ ಬರುತ್ತಾರೆ. ಮಳೆಗಾಲದಲ್ಲಿ ಇದರ ಮೇಲೆ ಸಂಚರಿಸುವುದು ಅಕ್ಷರಶಃ ಸರ್ಕಸ್‌ ಆಗಿದೆ. 

Advertisement

ಯೋಜನೆ ಪ್ರಸ್ತಾವನೆ 
ಶಾಶ್ವತ ಸೇತುವೆ ನಿರ್ಮಾಣಕ್ಕೆ ಕೋಟ್ಯಂತರ ರೂ. ಹಣ ಬೇಕು. ಆದರೆ ಪ.ಪಂ. ಅನುದಾನದಲ್ಲಿ ಇದು ಸಾಧ್ಯವಿಲ್ಲ. ಜನರಿಂದ ತೀವ್ರ ಬೇಡಿಕೆ ಇರುವ ಯೋಜನೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜನರಿಗೆ ಸಮಸ್ಯೆಯಾಗದಂತೆ ಮರದ ಸೇತುವೆಯನ್ನು ಆಗಾಗ ದುರಸ್ತಿ ಮಾಡುತ್ತಿದ್ದೇವೆ.

– ಶ್ರೀಪಾದ್‌ ಪುರೋಹಿತ್‌, ಮುಖ್ಯಾಧಿಕಾರಿಗಳು ,
ಸಾಲಿಗ್ರಾಮ ಪ.ಪಂ.

ಸೇತುವೆ ನಿರ್ಮಿಸಿ 
ಪಾರಂಪಳ್ಳಿ ನಾೖಕ್‌ನಬೈಲು ಹೊಳೆಗೆ ಶಾಶ್ವತ ಸೇತುವೆ ನಿರ್ಮಾಣ ಆಗಬೇಕಿದೆ.ಈ ಬಗ್ಗೆ ಯಾರೂ ಸಮರ್ಪಕ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಸಂಬಂಧ ಪಟ್ಟವರು ಸೇತುವೆ ನಿಮಾರ್ಣ ಬಗ್ಗೆ ಗಮನ ಹರಿಸಬೇಕು. 

– ಮಂಜುನಾಥ ಉಪಾಧ್ಯ, ಸ್ಥಳೀಯರು

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next