Advertisement
ಅಧಿಕಾರದಿಂದ ವಂಚಿತವಾಗಿದ್ದ ಪಕ್ಷಕ್ಕೆ ಮತ್ತೆ ಹುಮ್ಮಸ್ಸು ನೀಡಲು ಪರಮೇಶ್ವರ್ ಎಲ್ಲರನ್ನೂ ಒಟ್ಟುಗೂಡಿಸಿ ಕರೆದೊಯ್ಯಲು ಆರಂಭದಲ್ಲಿ ಅನೇಕ ಯಾತ್ರೆಗಳನ್ನು ಹಮ್ಮಿಕೊಂಡರು. ಕಾಂಗ್ರೆಸ್ ನಡಿಗೆ ಜನರ ಬಳಿಗೆ, ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ, ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ ಎಂಬ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಸಂಬಂಧ ಉಳಿಸಿಕೊಂಡು 2013ರಲ್ಲಿ ಕಾಂಗ್ರೆಸ್ ಸರಳ ಬಹುಮತ ಪಡೆದು ಅಧಿಕಾರಕ್ಕೆ ಬರುವಲ್ಲಿ ಶ್ರಮಿಸಿದರು. ಆದರೆ, ತಾವೇ ಚುನಾವಣೆಯಲ್ಲಿ ಸೋತು ಅಧಿಕಾರದಿಂದ ವಂಚಿತರಾಗುವಂತಾಯಿತು.
ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ ಎಲ್ಲ ಸಚಿವರೂ ತಿಂಗಳಲ್ಲಿ ಒಂದು ಬಾರಿಯಾದರೂ ಕೆಪಿಸಿಸಿ ಕಚೇರಿಗೆ ಆಗಮಿಸಿ ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಬೇಕೆಂದು ಸಚಿವರಿಗೆ 3 ಬಾರಿ ಪತ್ರ ಬರೆದರು. ಅದನ್ನು ಹಿರಿಯ ಸಚಿವರು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಪ್ರಥಮ ಬಾರಿ ಸಚಿವರಾದವರೂ ತಲೆ ಕೆಡಿಸಿಕೊಳ್ಳಲಿಲ್ಲ. ಜನಾರ್ದನ ಪೂಜಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನೇ ಕೆಪಿಸಿಸಿ ಕಚೇರಿಗೆ ಕರೆಯಿಸಿ, ಅರ್ಧ ಗಂಟೆ ಬಾಗಿಲು ಕಾಯುವಂತೆ ಮಾಡಿದ್ದರು.
Related Articles
Advertisement
ಈ ನಡುವೆ ದಲಿತ ಮುಖ್ಯಮಂತ್ರಿಯ ಕೂಗೆಬ್ಬಿಸಿ ಸಮುದಾಯದ ನಾಯಕರಂತೆ ಪ್ರತಿಬಿಂಬಿಸಿಕೊಳ್ಳುವ ಪ್ರಯತ್ನವನ್ನೂ ಸರಿಯಾಗಿ ನಿಭಾಯಿಸದೇ, ಅದೂ ದಾರಿ ತಪ್ಪುವಂತಾಯಿತು. 2018ರ ಚುನಾವಣೆ ದೃಷ್ಠಿಯಲ್ಲಿಟ್ಟುಕೊಂಡು ರಾಜ್ಯಾಧ್ಯಕ್ಷರಾಗಿಮುಂದುವರಿಯಲು ಗೃಹ ಸಚಿವರ ಹುದ್ದೆಯನ್ನೂ ಬಿಟ್ಟುಕೊಡುವಂತಾಯಿತು. ರಾಜ್ಯಾಧ್ಯಕ್ಷರಾಗಿಯೂ ಮುಂದುವರಿಯಲು ಮುಖ್ಯಮಂತ್ರಿಯ ಕೃಪೆಯೂ ಇದೆ ಎನ್ನಲಾಗುತ್ತಿದೆ. ರಾಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಇಂಧನ ಸಚಿವ ಡಿ.ಕೆ.
ಶಿವಕುಮಾರ್ ರಾಜ್ಯಾಧ್ಯಕ್ಷರಾಗಿದರೆ, ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರೆ ಕಷ್ಟ ಎನ್ನುವ ಆತಂಕ ಅರಿತ ಸಿದ್ದರಾಮಯ್ಯ ಯಾವುದಕ್ಕೂ ಅಡ್ಡಿಯಾಗದ ಪರಮೇಶ್ವರ್ ಮುಂದುವರಿದರೆ ತಮಗೇನೂ ತೊಂದರೆಯಿಲ್ಲವೆಂಬ ಕಾರಣಕ್ಕೆ ಅವರನ್ನೇ
ಮುಂದುವರಿಸುವ ಪ್ರಸ್ತಾಪಕ್ಕೆ ಬೆಂಬಲಿಸಿದರು ಎನ್ನಲಾಗಿದೆ. ಅಧ್ಯಕ್ಷರಾಗಿ ಅವರನ್ನೇ ಮುಂದುವರಿಸಿದರೂ, ಇಬ್ಬರು ಕಾರ್ಯಾಧ್ಯಕ್ಷರ ಹುದ್ದೆ ಸೃಷ್ಠಿಸಿ, ಉತ್ತರ ಮತ್ತು ದಕ್ಷಿಣ ಕರ್ನಾಟಕ ಭಾಗಕ್ಕೆ ಅವರನ್ನು ಉಸ್ತುವಾರಿ ಮಾಡಿರುವುದರಿಂದ ಅಧ್ಯಕ್ಷ ಹುದ್ದೆ ದಾಖಲೆಗಳಿಗೆ ಸಹಿ ಮಾಡುವುದಕಷ್ಟೇ ಸೀಮಿತ ಎನ್ನುವಂತಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿ 7 ವರ್ಷ ದಾಖಲೆ ಬರೆದರೂ, ಪಕ್ಷದಲ್ಲಿ ತಮ್ಮನ್ನು ನಂಬಿದ ಕಾರ್ಯಕರ್ತರಿಗೆ, ಹಿಂಬಾಲಕರಿಗೆ ವಿಧಾನ ಪರಿಷತ್ ಸದಸ್ಯತ್ವ ಕೊಡಿಸುವಲ್ಲಿಯೂ ಪರದಾಡುವಂತಾಯಿತು. ತಮ್ಮನ್ನು ನಂಬಿದ ಶಾಸಕರಿಗೆ ಸಚಿವ ಸ್ಥಾನ ಕೊಡಿಸುವಲ್ಲಿಯೂ ಸೋತು ಪರಮೇಶ್ವರ್ ಅಸಹಾಯಕರಾಗಿ ಕುಳಿತುಕೊಳ್ಳುವಂತಾಯಿತು. 2013ರ ಚುನಾವಣೆಯಲ್ಲಿ ಸೋತು ಸಂಕಟ ಅನುಭವಿಸಿರುವ ಪರಮೇಶ್ವರ್ 2018ರ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಕೊರಟಗೆರೆಯಲ್ಲಿಯೇ ಸುತ್ತಾಡುತ್ತಿದ್ದಾರೆ. ಟಿಕೆಟ್ ಕೊಡಿಸುವ ಸ್ವಾತಂತ್ರ ಇದೆಯಾ?
ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಂತಲೂ ಪರಮೇಶ್ವರ್ ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆದರೆ, ಪಕ್ಷದ ಅಧ್ಯಕ್ಷರಾದವರು ತಾವಷ್ಟೇ ಗೆದ್ದು ಬಂದರೆ ಸಾಲದು. ತಮ್ಮ ನಾಯಕತ್ವಕ್ಕೆ ಜೈ ಎನ್ನಲು ಮೂವತ್ತು ಶಾಸಕರನ್ನಾದರೂ ಗೆಲ್ಲಿಸಿಕೊಂಡು ಬರಬೇಕು. ಆದರೆ, ಅಷ್ಟು ಜನರಿಗೆ ಟಿಕೆಟ್ ಕೊಡಿಸುವಷ್ಟು ಸ್ವಾತಂತ್ರ್ಯ ಪರಮೇಶ್ವರ್ ಅವರಿಗೆ ಇದೆಯಾ ಎನ್ನುವುದು ಕೂಡ ಪ್ರಶ್ನಾರ್ಹ. ಸುದೀರ್ಘ ಅಧಿಕಾರದಲ್ಲಿದ್ದರೂ ಅಸಹಾಯಕತೆಯಿಂದಲೇ ದಾಖಲೆ ಮಾಡಿರುವುದು ವಿಪರ್ಯಾಸ. ●ಶಂಕರ ಪಾಗೋಜಿ