ಬೆಂಗಳೂರು: ಕಾಂಗ್ರೆಸ್‌ನಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆಗೆ ಕಸರತ್ತು ನಡೆದಿರುವ ಹಿನ್ನೆಲೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ್ದಾರೆ. ಪರಮೇಶ್ವರ್ ಹಾಗೂ ಸೋನಿಯಾ ಗಾಂಧಿ ಭೇಟಿ ರಾಜ್ಯ ಕಾಂಗ್ರೆಸ್‌ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಮಂಗಳವಾರ ಭೇಟಿ ಮಾಡಿ ರಾಜ್ಯ ರಾಜಕೀಯದ ಪ್ರಸಕ್ತ ವಿಷಯಗಳು ಹಾಗೂ ಪಕ್ಷದಲ್ಲಿನ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿರುವುದಾಗಿ ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ. ಕಳೆದ ವಾರ ಸೋನಿಯಾ ಗಾಂಧಿಯನ್ನು ಭೇಟಿ ಮಾಡಲೆಂದೇ ದೆಹಲಿಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸೋನಿಯಾ ಗಾಂಧಿ ಭೇಟಿಗೆ ಅವಕಾಶ ದೊರೆತಿರಲಿಲ್ಲ.
ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿರುವುದರಿಂದ ಸಿದ್ದರಾಮಯ್ಯ ಹುದ್ದೆ ತಪ್ಪುವ ಸಾಧ್ಯತೆಯಿಂದ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ, ಪ್ರತಿಪಕ್ಷ ನಾಯಕನ ಹುದ್ದೆಯ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು. ಆದರೆ, ಸೋನಿಯಾ ಗಾಂಧಿಯವರು ಭೇಟಿಗೆ ಅವಕಾಶ ನೀಡದೆ ವಾಪಸ್ ಕಳುಹಿಸಿದ್ದು, ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾದಂತಾಗಿತ್ತು. ಅದರ ಬೆನ್ನಲ್ಲೇ ಡಾ.ಜಿ.ಪರಮೇಶ್ವರ್ ಅವರ ಭೇಟಿಗೆ ಅವಕಾಶ ಕಲ್ಪಿಸಿ ಮಾತುಕತೆ ನಡೆಸಿರುವುದು ಸಿದ್ದರಾಮಯ್ಯ ಬಣಕ್ಕೆ ಶಾಕ್ ನೀಡಿದಂತಾಗಿದೆ.
ನಾನು ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೇನೆ. ಅವರು ತಮ್ಮ ಕಾನೂನು ಹೋರಾಟದಲ್ಲಿ ಯಶಸ್ವಿಯಾಗುತ್ತಾರೆ ಎನ್ನುವ ವಿಶ್ವಾಸ ಇದೆ. ಅಲ್ಲದೇ ಆದಷ್ಟು ಬೇಗ ಗುಣಮುಖರಾಗುತ್ತಾರೆ ಎನ್ನುವ ವಿಶ್ವಾಸವಿದೆ.
-ಡಾ.ಜಿ.ಪರಮೇಶ್ವರ್, ಮಾಜಿ ಉಪ ಮುಖ್ಯಮಂತ್ರಿ