Advertisement

Paralympics;ಧರಂಬೀರ್‌ಗೆ ಚಿನ್ನ, ಪ್ರಣವ್‌ಗೆ ಬೆಳ್ಳಿಯ ಹಾರ: ಏನಿದು ಎಫ್ 51 ವಿಭಾಗ?

11:59 PM Sep 05, 2024 | Team Udayavani |

ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌ ಪುರುಷರ ಕ್ಲಬ್‌ ತ್ರೋ ಎಫ್51 ವಿಭಾಗದಲ್ಲಿ ಭಾರತ ಮೊದಲ ಬಾರಿ ಚಿನ್ನ, ಬೆಳ್ಳಿಯ ಪದಕ ತನ್ನದಾಗಿಸಿಕೊಂಡಿದೆ. 34.92 ಮೀ. ಸಾಧನೆಯೊಂದಿಗೆ ಧರಂಬೀರ್‌ ನೈನ್‌ ಸ್ವರ್ಣ ಪದಕ ತನ್ನದಾಗಿಸಿಕೊಂಡರೆ, 34.59 ಮೀ. ಸಾಧನೆಯೊಂದಿಗೆ ಪ್ರಣವ್‌ ಸೂರ್ಮ ರಜತ ಪದಕ ಗೆದ್ದಿದ್ದಾರೆ. ಇದರೊಂದಿಗೆ ಈ ಪ್ಯಾರಾಲಿಂಪಿಕ್ಸ್‌ನ ಆ್ಯತ್ಲೆಟಿಕ್ಸ್‌ ವಿಭಾಗದಲ್ಲಿ ಮೊದಲ ಬಾರಿಗೆ ಪ್ರಥಮ, ದ್ವಿತೀಯ ಎರಡೂ ಸ್ಥಾನ ತನ್ನದಾಗಿಸಿಕೊಂಡ ಸಾಧನೆಗೆ ಭಾರತ ಪಾತ್ರವಾಗಿದೆ.

Advertisement

ಇದೇ ವಿಭಾಗದಲ್ಲಿ ಧರಂಬೀರ್‌ ಅವರ ಕೋಚ್‌, ಸಹ ಆಟಗಾರ ಅಮಿತ್‌ ಕುಮಾರ್‌ ಸರೋಹ ಕೂಡ ಸ್ಪರ್ಧಿಸಿದ್ದು, ಅವರು 23.96 ಮೀ. ಎಸೆತದೊಂದಿಗೆ 10ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು.

ಶಿಷ್ಯನಿಗೆ ಗುರು ಅಮಿತ್‌ ಶ್ಲಾಘನೆ
ಕ್ಲಬ್‌ ತ್ರೋ ಬಗ್ಗೆ ಮಾರ್ಗದರ್ಶನ, ತರಬೇತಿ ನೀಡಿದ ಅಮಿತ್‌ ಕುಮಾರ್‌ ಅವರನ್ನೇ ಶಿಷ್ಯ ಧರಂಬೀರ್‌ ಸೋಲಿಸಿ ಗಮನ ಸೆಳೆದಿದ್ದಾರೆ. ಗೆದ್ದ ಪದಕವನ್ನು ಧರಂಭೀರ್‌, ಗುರು ಅಮಿತ್‌ಗೆ ಅರ್ಪಿಸಿದ್ದಾರೆ. ಈ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಅಮಿತ್‌ ಕುಮಾರ್‌, ದೇಶಕ್ಕೆ ಬಂಗಾರ ಗೆಲ್ಲುವ ಮೂಲಕ ಧರಂಬೀರ್‌ ಶಿಕ್ಷಕರ ದಿನದ ವೇಳೆ ಗುರುವಿಗೆ ಅರ್ಥಪೂರ್ಣ ಉಡುಗೊರೆ ನೀಡಿದ್ದಾರೆ ಎಂದಿದ್ದಾರೆ.

ನೀರಿಗೆ ಧುಮುಕುವಾಗ ಅವಘಢ
35 ವರ್ಷದ ಧರಂಬೀರ್‌ ಹುಟ್ಟಿದ್ದು 1989ರಲ್ಲಿ ಹರಿಯಾಣದ ರೋಹ¤ಕ್‌ನಲ್ಲಿ. ಹುಟ್ಟುವಾಗ ಸಾಮಾನ್ಯರಂತೆಯೇ ಇದ್ದರು. ಆದರೆ ಯುವಕರಾಗಿದ್ದಾಗ ನಡೆದ ದುರ್ಘ‌ಟನೆಯೊಂದರಲ್ಲಿ ಧರಂಬೀರ್‌ ಅಂಗವೈಕಲ್ಯಕ್ಕೆ ಒಳಗಾಗಬೇಕಾಯಿತು. ತಮ್ಮ ಊರಿನಲ್ಲಿ ಕಾಲುವೆಯೊಂದರಲ್ಲಿ ಈಜಲು ತೆರಳಿದ್ದ ಧರಂಬೀರ್‌, ನೀರಿನ ಆಳದ ಅರಿವಿ ಲ್ಲದೆ ನೀರಿಗೆ ಧುಮುಕಿದರು. ಈ ವೇಳೆ ಅವರ ದೇಹ ಕೆಳಗಿದ್ದ ಬಂಡೆಯೊಂದಕ್ಕೆ ಬಡಿಯಿತು. ಈ ವೇಳೆ ಬೆನ್ನುಮೂಳೆಗೆ ಗಾಯವಾಗಿ ಪಾರ್ಶ್ವವಾಯುಗೆ ತುತ್ತಾದ ಧರಂಬೀರ್‌, ಕೆಳ ದೇಹದ ಸ್ವಾಧೀನ ಕಳೆದುಕೊಂಡರು.

ಧರಂಬೀರ್‌ ಸಾಧನೆ
ಧರಂಬೀರ್‌ ವೃತ್ತಿಪರ ಪ್ಯಾರಾ ಆ್ಯತ್ಲೆಟಿಕ್ಸ್‌ಗೆ ಅಡಿಯಿಟ್ಟಿದ್ದು 2014ರಲ್ಲಿ. ಆಗ ಅಮಿತ್‌ ಕುಮಾರ್‌ ಸರೋಹ ಅವರೇ ಧರಂಬೀರ್‌ಗೆ ಡಿಸ್ಕಸ್‌ನ ಕೌಶಲಗಳನ್ನು ಹೇಳಿಕೊಟ್ಟರು. ಅಲ್ಲಿಂದ ಆಸಕ್ತಿ ಹೆಚ್ಚಿಸಿಕೊಂಡ ಧರಂಬೀರ್‌, 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು 9ನೇ ಸ್ಥಾನ ಪಡೆದರು. ಕಳೆದ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲೂ ಪಾಲ್ಗೊಂಡಿದ್ದ ಅವರು 8ನೇ ಸ್ಥಾನ ಪಡೆದಿದ್ದರು. ಇನ್ನು, 2018ರ ಏಷ್ಯನ್‌ ಪ್ಯಾರಾಗೇಮ್ಸ್‌ ಬೆಳ್ಳಿ ಗೆದ್ದ ಸಾಧನೆ ಧರಂಬೀರ್‌ ಅವರದ್ದಾಗಿದೆ.

Advertisement

ಸಿಮೆಂಟ್‌ ಶೀಟ್‌ ಬಿದ್ದು ಅಂಗ ಸ್ವಾಧೀನ ಕಳೆದುಕೊಂಡ ಪ್ರಣವ್‌
1994ರಲ್ಲಿ ಹರಿಯಾಣದ ಫ‌ರಿದಾಬಾದ್‌ನಲ್ಲಿ ಜನಿಸಿದ ಪ್ರಣವ್‌ ಸೂರ್ಮ ಕೂಡ ಅವಘಢದಿಂದಲೇ ದೇಹದ ಅಂಗ ಸ್ವಾಧೀನ ಕಳೆದುಕೊಂಡರು. 16 ವಯಸ್ಸಿನವರಾಗಿದ್ದ ವೇಳೆ ತಲೆ ಮೇಲೆ ಸಿಮೆಂಟ್‌ ಶೀಟೊಂದು ಬಿದ್ದು ಪ್ರಣವ್‌ ಅವರ ಬೆನ್ನು ಮೂಳೆಗೆ ಗಂಭೀರ ಗಾಯವಾಯಿತು. ಪಾರ್ಶ್ವವಾಯು ಬಡಿಯಿತು. 6 ತಿಂಗಳು ಆಸ್ಪತ್ರೆಯಲ್ಲೇ ಕಳೆದಿದ್ದ ಪ್ರಣವ್‌ ಎದ್ದು ನಡೆಯೋದೇ ಅನುಮಾನ ಎಂದು ವೈದ್ಯರು ಹೇಳಿದ್ದರು. ಅಂಥ ಪ್ರಣವ್‌ ಈಗ ಸಾಧಿಸಿ ನಮ್ಮ ಮುಂದೆ ನಿಂತಿದ್ದಾರೆ.

ಏಷ್ಯನ್‌ ಪ್ಯಾರಾ ಗೇಮ್ಸ್‌ ನಲ್ಲಿ ಚಿನ್ನದ ಸಾಧನೆ
2019ರ ಬೀಜಿಂಗ್‌ ಗ್ರ್ಯಾನ್‌ಪ್ರಿ ಆ್ಯತ್ಲೆಟಿಕ್ಸ್‌ ನಲ್ಲಿ ಬೆಳ್ಳಿ, 2022ರಲ್ಲಿ ಟ್ಯುನಿಶಿಯಾದಲ್ಲಿ ನಡೆದ ಗ್ರ್ಯಾನ್‌ಪ್ರಿ ಆ್ಯತ್ಲೆಟಿಕ್ಸ್‌ನಲ್ಲಿ ಬೆಳ್ಳಿ, 2022ರ ಹ್ಯಾಂಗ್‌ಝೂ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಬಂಗಾರ ಗೆದ್ದ ಹಿರಿಮೆ ಪ್ರಣವ್‌ ಅವರದ್ದಾಗಿದೆ.

ಏನಿದು ಎಫ್ 51 ವಿಭಾಗ?
ದೇಹದ ನಡುಭಾಗ, ಕಾಲು, ಕೈಗಳ ಚಲನೆಯ ದೌರ್ಬಲ್ಯ ಹೊಂದಿರುವ ಆ್ಯತ್ಲೀಟ್‌ಗಳು ಈ ವಿಭಾಗದಲ್ಲಿ ಸ್ಪರ್ಧಿಸುತ್ತಾರೆ. ಇಲ್ಲಿ “ಎಫ್’ ಎಂದರೆ ಫೀಲ್ಡ್‌ ಅಥವಾ ಓಟದ ಸ್ಪರ್ಧೆಗಳಿಗೆ ಹೊರತಾಗಿರುವ ವಿಭಾಗ ಎಂದು ಅರ್ಥೈಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next