ಎಲ್ಲ ಬಾಗಿಲು ಮುಚ್ಚಿದರೂ ಧೈರ್ಯಗೆಡದೇ ಮುಚ್ಚಿದ ಕಿಟಕಿಯ ಪುಟ್ಟ ಸಂದಿಯೊಂದರಿಂದ ತೂರಿಬರುವ ಬೆಳಕಿನಕೋಲನ್ನೇ ಏಣಿಯಾಗಿಸಿಕೊಂಡು ಆಗಸ ಮುಟ್ಟಿದ ಅಸಾಮಾನ್ಯರು ಕ್ರೀಡಾಲೋಕದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಇಂಥವರಲ್ಲೊಬ್ಬರು ಕರ್ನಾಟಕದ ಪ್ಯಾರಾಲಿಂಪಿಯನ್ ಈಜುಪಟು ನಿರಂಜನ್ ಮುಕುಂದನ್. ಬಾಲ್ಯದಿಂದಲೇ ಕಾಡಿದ ಅಂಗವೈಕಲ್ಯ ಸವಾಲು, 19 ಶಸ್ತ್ರಚಿಕಿತ್ಸೆಗಳ ನೋವು ಮೀರಿನಿಂತ ಬೆಂಗಳೂರಿನ ನಿರಂಜನ್ ಇದೀಗ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಟೋಕಿಯೊ ವಿಮಾನವೇರಲು ಸಿದ್ಧರಾಗಿದ್ದಾರೆ.
19 ಶಸ್ತ್ರಚಿಕಿತ್ಸೆ ಮೀರಿನಿಂತ ಸಾಧಕ :
ನಿರಂಜನ್‌ಗೆ ಹುಟ್ಟಿನಿಂದಲೇ ಕಾಡಿದ ಬೆನ್ನು ಹುರಿಯ ದೌರ್ಬಲ್ಯದಿಂದ ನಿಲ್ಲಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಅವರಿಗೆ 7 ವರ್ಷವಾದಾಗ ವೈದ್ಯರೊಬ್ಬರು ಅಕ್ವಾಥೆರಪಿ ಮಾಡಿಸಿ ಎಂದು ಪಾಲಕರಿಗೆ ಸಲಹೆ ನೀಡಿದ್ದು ಈಗ ಫಲ ಕೊಟ್ಟಿದೆ.
ನಿರಂಜನ್ ಅವರು ಅನುಭವಿಸಿದ ನೋವಿಗೆ ಲೆಕ್ಕವಿಲ್ಲ. ಒಂದಲ್ಲ, ಎರಡಲ್ಲ… ಬರೋಬ್ಬರಿ 19 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ. ಈ ನೋವನ್ನು ನುಂಗಿ ಅಂತಾರಾಷ್ಟ್ರೀಯ ಪ್ಯಾರಾ ಈಜುಕೂಟಗಳಲ್ಲಿ 60 ಪದಕಗಳನ್ನು ಗೆದ್ದ ದಾಖಲೆಯನ್ನೂ ಮಾಡಿದ್ದಾರೆ!
ಹುರಿದುಂಬಿಸಿದ ಕೋಚ್ :
“ನಡೆಯಲೂ ಆಗದ ನನಗೆ ಕಾಲುಗಳ ಶಕ್ತಿ ಹೆಚ್ಚಿಸುವ ಸಲುವಾಗಿ ಈಜು ಥೆರಪಿ ಆರಂಭಿಸಲಾಗಿತ್ತು. ಇದರಿಂದ ಮೀನಿಂತೆ ಈಜಲು ಸಾಧ್ಯವಾಯಿತು. ಇದೇ ವೇಳೆ ಕೆಲವು ಕೋಚ್‌ಗಳು ನಾನು ಈಜುವುದನ್ನು ಗಮನಿಸಿದರು. ಇವರಲ್ಲೊಬ್ಬರು ಜಾನ್ ಕ್ರಿಸ್ಟೋಫರ್. ನನ್ನ ಸಾಮರ್ಥ್ಯವನ್ನು ಗುರುತಿಸಿದ ಅವರು, ನನ್ನನ್ನು ಪ್ಯಾರಾ ಕ್ರೀಡೆಗೆ ಸೇರಿಸುವಂತೆ ಪೋಷಕರಲ್ಲಿ ಮನವಿ ಮಾಡಿಕೊಂಡರು. ಇದು ಆರಂಭ. ಮೊದಲ ಬಾರಿ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಲಭಿಸಿದ್ದು ಕೊನೆಯ ಸ್ಥಾನ. ಇದರಿಂದ ಬಹಳ ಬೇಸರವಾಗಿತ್ತು. ಆಗಲೇ ಈಜು ಬಿಟ್ಟುಬಿಡಬೇಕು ಎಂದು ಕೋಚ್ ಬಳಿ ಹೇಳಿಕೊಂಡೆ. ಅವರು ಒಪ್ಪಲಿಲ್ಲ. ಸೋಲುಗಳಿಗೆ ಹೆದರಬೇಡ. ಸಾಮಾನ್ಯರೊಂದಿಗೇ ಇಷ್ಟು ಚೆನ್ನಾಗಿ ಈಜಿದ್ದಿ, ಪ್ಯಾರಾ ಕೆಟಗರಿಯಲ್ಲಿ ಇನ್ನೂ ಚೆನ್ನಾಗಿ ಸಾಧನೆ ಮಾಡಲು ಸಾಧ್ಯವಿದೆ ಎಂದು ಹುರಿದುಂಬಿಸಿದರು. ಇದರ ಫಲವಾಗಿಯೇ ನಾನಿಂದು ಪ್ಯಾರಾಲಿಂಪಿಕ್ಸ್ ಪ್ರವೇಶ ಪಡೆಯುವ ಮಟ್ಟಕ್ಕೆ ಏರಿದ್ದೇನೆ’ ಎಂದು ನಿರಂಜನ್ ಹೇಳಿದರು.
ಫೈನಲ್ ಪ್ರವೇಶಿಸುವ ಗುರಿ :
50 ಮೀ. ಬಟರ್‌ಫ್ಲೈ ಸ್ಪರ್ಧೆಗೆ ಕ್ವಾಲಿಫೈ ಆಗಿರುವ ನಿರಂಜನ್, ವಿಶ್ವ ರ್‍ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿದ್ದಾರೆ. 2016ರಲ್ಲಿ ತಾಂತ್ರಿಕ ಕಾರಣದಿಂದ ರಿಯೋ ಒಲಿಂಪಿಕ್ಸ್ ಅವಕಾಶ ತಪ್ಪಿತ್ತು. ಇದೀಗ ಟೋಕಿಯೊ ಬಾಗಿಲು ತೆರೆದಿದೆ. ಜಪಾನ್ ವಾತಾವರಣಕ್ಕೆ ಬೇಕಾದ ಎಲ್ಲ ಸಿದ್ದತೆಯನ್ನು ಮಾಡಿಕೊಂಡಿದ್ದಾರೆ. ಉತ್ತಮ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸುವುದು ನಿರಂಜನ್ ಗುರಿಯಾಗಿದೆ.
ಅಭ್ಯಾಸಕ್ಕೆ ಕಾಡಿದ ಲಾಕ್‌ಡೌನ್ :
ಕೊರೊನಾ ಸೋಂಕಿನ ಪರಿಣಾಮ ಜಾರಿಗೊಳಿಸಲಾದ ಲಾಕ್‌ಡೌನ್ ನಿರಂಜನ್ ಅಭ್ಯಾಸಕ್ಕೆ ತೊಡಕಾಗಿ ಪರಿಣಮಿಸಿತು. ಈಜು ಕೊಳವನ್ನು ಬಳಸದಂತೆ ಸೂಚಿಸಲಾಗಿತ್ತು. ಪ್ರಯಾಣ ನಿರ್ಬಂಧದಿಂದ ಕೆಲವು ಸ್ಪರ್ಧೆಗಳಿಗೆ ಹೋಗುವುದು ಕೂಡ ಅಸಾಧ್ಯವಾಯಿತು.
ನೀರಜ್ ಚೋಪ್ರಾ ಸ್ಫೂರ್ತಿ :
“ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ನನಗೆ ಸ್ಫೂರ್ತಿ. ಇಡೀ ದೇಶವೇ ಬೆಳಗಿನ ಜಾವ ಎದ್ದು ಭಾರತೀಯರ ಪ್ರದರ್ಶನವನ್ನು ನೋಡಿದೆ. ಪ್ಯಾರಾಲಿಂಕ್ಸ್‌ಗೂ ಇದೇ ರೀತಿಯ ಪ್ರೋತ್ಸಾಹ ಲಭಿಸುವ ವಿಶ್ವಾಸವಿದೆ. ಪ್ರಧಾನಿ ಮೋದಿಯವರ ಸ್ಫೂರ್ತಿದಾಯಕ ಮಾತುಗಳು ಕೂಡ ನನಗೆ ಪ್ರೇರಣೆ…’ ಎಂದು ನಿರಂಜನ್ ಮುಕುಂದನ್ ಹೇಳಿದ್ದಾರೆ.
ಅಜ್ಜಿಯ ಆಶೀರ್ವಾದ :
“ಪ್ರೀತಿಯ ಅಜ್ಜಿ ಇಂದಿಲ್ಲ ಎನ್ನುವ ಬೇಸರ ಕಾಡುತ್ತಿದೆ. ಬಾಲ್ಯದಿಂದಲೇ ನನ್ನನ್ನು ನೋಡಿಕೊಳ್ಳುತ್ತಿದ್ದ ಅವಳನ್ನು 3 ತಿಂಗಳ ಹಿಂದೆ ಕೊರೊನಾದಿಂದ ಕಳೆದುಕೊಂಡೆ. ನನ್ನ ಪ್ರತೀ ಹೆಜ್ಜೆಯಲ್ಲೂ ಅವಳು ಜತೆಗಿದ್ದು ಬೆಂಬಲಿಸಿದ್ದಾಳೆ. ಆದರೆ ಇಂದು ಜಾಗತಿಕ ಮಟ್ಟದಲ್ಲಿ ನನ್ನ ಪ್ರದರ್ಶನ ನೋಡಲು ಅವಳಿಲ್ಲ ಎಂಬ ಬೇಸರವಿದ್ದರೂ ಅವಳ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತದೆ’ ಎನ್ನುತ್ತ ನಿರಂಜನ್ ಗದ್ಗರಿತರಾದರು.