ವಿಜಯ ರಾಘವೇಂದ್ರ ಹಾಗೂ ನಿರ್ದೇಶಕ ರಾಜಶೇಖರ್ ಕಾಂಬಿನೇಶನ್ ಈ ಹಿಂದೆ “ರಾಜ ಲವ್ಸ್ ರಾಧೆ’ ಎಂಬ ಚಿತ್ರವೊಂದು ಬಂದಿತ್ತು. ಆ ಚಿತ್ರದಲ್ಲಿ ಕಾಮಿಡಿ ಹಿನ್ನೆಲೆಯಲ್ಲಿ ಲವ್‌ಸ್ಟೋರಿಯೊಂದನ್ನು ಕಟ್ಟಿಕೊಟ್ಟಿದ್ದ ಈ ಜೋಡಿ ಈ ಬಾರಿ “ಪರದೇಸಿ ಕೇರಾಫ್ ಲಂಡನ್’ ಚಿತ್ರದ ಮೂಲಕ ಒಂದು ಫ್ಯಾಮಿಲಿ ಡ್ರಾಮಾ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಫ್ಯಾಮಿಲಿ ಡ್ರಾಮಾ ಚಿತ್ರಗಳು ಬಂದಿವೆಯಾದರೂ “ಪರದೇಸಿ’ ಕೊಂಚ ಭಿನ್ನವಾಗಿ ಕಾಣುತ್ತದೆ ಎಂದರೆ ಅದಕ್ಕೆ ಕಾರಣ ಚಿತ್ರದಲ್ಲಿ ಬರುವ ಟ್ವಿಸ್ಟ್‌ಗಳು.
ಆಸ್ತಿ ವಿಚಾರವೊಂದರಿಂದ ಪ್ರಾರಂಭವಾಗುವ ಸಿನಿಮಾ ಮುಂದೆ ಲವ್, ಸೆಂಟಿಮೆಂಟ್, ಆ್ಯಕ್ಷನ್ ಮೂಲಕ ಸಾಗುತ್ತದೆ. ಇಷ್ಟು ಹೇಳಿದ ಮೇಲೆ ಇದೊಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ನಿರ್ದೇಶಕ ರಾಜಶೇಖರ್ ಗಾಂಧಿನಗರದ ಸಿದ್ಧಸೂತ್ರಗಳನ್ನು ಮೀರುವ ಬಗ್ಗೆ ಹೆಚ್ಚು ಆಲೋಚಿಸಿಲ್ಲ ಎಂಬುದು ಸಿನಿಮಾದುದ್ದಕ್ಕೂ ಎದ್ದು ಕಾಣುತ್ತದೆ.
ಅವರ ಉದ್ದೇಶ ಸಿನಮಾ ಕಲರ್‌ಫುಲ್ ಆಗಿ ಕಾಣಿಸಬೇಕೆಂಬುದು. ಹಾಗಂತ ಚಿತ್ರ ನಿಮಗೆ ಬೋರ್ ಹೊಡೆಸುತ್ತದೆ ಎನ್ನುವಂತಿಲ್ಲ. ಅಲ್ಲಲ್ಲಿ ಬರುವ ಪಂಚಿಂಗ್ ಡೈಲಾಗ್, ಟ್ವಿಸ್ಟ್, ಹೊಡೆದಾಟಗಳು ತೆರೆಯತ್ತ ದೃಷ್ಟಿ ನೆಡುವಂತೆ ಮಾಡುತ್ತದೆ. ಚಿತ್ರದ ಬಹುತೇಕ ಚಿತ್ರೀಕರಣ ಹಳ್ಳಿ ಪರಿಸರದಲ್ಲಿ ನಡೆದಿರುವುದರಿಂದ ಒಂದಷ್ಟು ಸುಂದರ ದೃಶ್ಯಗಳನ್ನು ನೋಡುವ ಅವಕಾಶ ಈ ಚಿತ್ರದಲ್ಲಿದೆ.
ಚಿತ್ರದಲ್ಲಿ ಬರುವ ಒಂದಷ್ಟು ಅನಾವಶ್ಯಕ ದೃಶ್ಯಗಳಿಗೆ ಕತ್ತರಿ ಹಾಕಿ, ನಿರೂಪಣೆಯನ್ನು ಇನ್ನಷ್ಟು ಬಿಗಿಗೊಳಿಸಿದ್ದರೆ “ಪರದೇಸಿ’ಯ ಓಟ ಇನ್ನಷ್ಟು ಸಲೀಸಾಗಿರುತ್ತಿತ್ತು. ಸಾಮಾನ್ಯವಾಗಿ ಸಾಗುತ್ತಿದ್ದ ಕಥೆಯಲ್ಲಿ ಕುತೂಹಲ ಹುಟ್ಟಿಸುವಂತೆ ಮಾಡುವಲ್ಲಿ ಚಿತ್ರದ ಟ್ವಿಸ್ಟ್‌ವೊಂದು ಪ್ರಮುಖ ಪಾತ್ರ ವಹಿಸುತ್ತದೆ. ಆ ಮೂಲಕ ಸಿನಿಮಾದ ವೇಗ ಹೆಚ್ಚುತ್ತದೆ. ಚಿತ್ರದಲ್ಲಿ ಸಾಕಷ್ಟು ಪಾತ್ರಗಳಿದ್ದು, ಎಲ್ಲಾ ಪಾತ್ರಗಳಿಗೂ ಪ್ರಾಮುಖ್ಯತೆ ಕೊಡಲು ದೊಡ್ಡ ಮನಸ್ಸು ಮಾಡಿದ ಕಾರಣ ಕೆಲವು ಅನಾವಶ್ಯಕ ಸನ್ನವೇಶಗಳು ಸೃಷ್ಟಿಯಾದಂತಿದೆ.
ಅದು ಬಿಟ್ಟರೆ ಒಂದು ಫ್ಯಾಮಿಲಿ ಡ್ರಾಮಾವನ್ನು ಕಲರ್‌ಫುಲ್ ಆಗಿ ನಿರೂಪಿಸಲು ರಾಜಶೇಖರ್ ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ. ನಾಯಕ ವಿಜಯ ರಾಘವೇಂದ್ರ ತಮ್ಮ ಪಾತ್ರದಲ್ಲಿ ಲವಲವಿಕೆಯಿಂದ ನಟಿಸಿದ್ದಾರೆ. ನಾಯಕಿ ರಾಶಿ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಶೋಭರಾಜ್, ತಬಲ ನಾಣಿ ಸೇರಿದಂತೆ ಇತರರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ, ಚಿದಾನಂದ್ ಛಾಯಾಗ್ರಹಣವಿದೆ.
ಚಿತ್ರ: ಪರದೇಸಿ ಕೇರಾಫ್ ಲಂಡನ್
ನಿರ್ಮಾಣ: ಬದರಿ ನಾರಾಯಣ
ನಿರ್ದೇಶನ: ಎಂ.ರಾಜಶೇಖರ್
ತಾರಾಬಳಗ: ವಿಜಯ ರಾಘವೇಂದ್ರ, ರಾಶಿ, ರಂಗಾಯಣ ರಘು, ಶೋಭರಾಜ್, ತಬಲ ನಾಣಿ, ಪ್ರಶಾಂತ್ ಸಿದ್ಧಿ ಮತ್ತಿತರರು.
* ಆರ್‌ಪಿ