ಹೊಸದಿಲ್ಲಿ: 2025ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು 15 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧಚಿತ್ರಗಳಿಗೆ ಆಯ್ಕೆ ಮಂಡಳಿ ಒಪ್ಪಿಗೆ ಸೂಚಿಸಿದೆ. ಈ ಬಾರಿಯೂ ದೆಹಲಿಯನ್ನು ಕೈ ಬಿಟ್ಟಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
“ಕಳೆದ ಕೆಲವು ವರ್ಷಗಳಿಂದ ದೆಹಲಿಯ ಸ್ತಬ್ಧಚಿತ್ರಗಳನ್ನು ಕೈಬಿಡಲಾಗುತ್ತಿದೆ. ಇದು ಯಾವ ರೀತಿಯ ರಾಜಕೀಯ? ಏಕೆ ಅವರೆಲ್ಲಾ ದೆಹಲಿಯ ಜನರನ್ನು ವಿರೋಧಿಸುತ್ತಿದ್ದಾರೆ? ದೆಹಲಿಯ ಜನ ಅವರಿಗೇಕೆ ಮತ ಹಾಕಬೇಕು?’ ಎಂದು ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಅದಕ್ಕೆ ತಿರುಗೇಟು ನೀಡಿದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ “ಕೇಜ್ರಿವಾಲ್ ಹೇಳಿಕೆ ಅರಾಜಕತೆಯನ್ನು ಸೂಚಿಸುತ್ತದೆ. ಸ್ತಬ್ದ ಚಿತ್ರ ಮೂಲಕ ಕೇಜ್ರಿವಾಲ್ ಏನನ್ನು ಪ್ರದರ್ಶಿಸಲು ಮುಂದಾಗಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ. 2021ರಲ್ಲಿ ಕೊನೆಯ ಬಾರಿ ದೆಹಲಿಯ ಸ್ತಬ್ಧಚಿತ್ರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಗೆ ಪ್ರತಿವರ್ಷವೂ ಅವಕಾಶ ನೀಡುತ್ತಿರುವುದು ಸಹ ವಿವಾದಕ್ಕೆ ಕಾರಣವಾಗಿದೆ.
15 ರಾಜ್ಯಗಳಿಗೆ ಅವಕಾಶ:
ಈ ಬಾರಿ ಕರ್ತವ್ಯಪಥದಲ್ಲಿ ನಡೆಯುವ ಮೆರವಣಿಗೆಯಲ್ಲಿ ಕರ್ನಾಟಕ, ಬಿಹಾರ, ಗೋವಾ, ಜಾರ್ಖಂಡ್, ಮಧ್ಯಪ್ರದೇಶ, ಪಂಜಾಬ್, ಉತ್ತರಾಖಂಡ, ಆಂಧ್ರಪ್ರದೇಶ, ಗುಜರಾತ್, ತ್ರಿಪುರಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಚಂಡೀಗಢ ಹಾಗೂ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯುಗಳ ಸ್ತಬ್ಧಚಿತ್ರಗಳಿಗೆ ಅವಕಾಶ ನೀಡಲಾಗಿದೆ.