Advertisement

ವಿಪತ್ತು ನಿರ್ವಹಣೆಗೆ ವಿಮಾನ ನಿಲ್ದಾಣದಲ್ಲಿ ಅಣಕು ಪ್ರದರ್ಶನ

12:26 PM Nov 18, 2018 | Team Udayavani |

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಶನಿವಾರ ವಿಷಪೂರಿತ ಪರಮಾಣು ಹಾಗೂ ರಸಾಯನಿಕ ಸೋರಿಕೆಯಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು!  ಮಾಹಿತಿ ತಿಳಿದ ಕೆಲಹೊತ್ತಿನಲ್ಲಿ ಸ್ಥಳಕ್ಕೆ ಧಾವಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಸಾಯನಿಕ ಸೋರಿಕೆ ವಿಫ‌ಲಗೊಳಿಸಿ ಸಂಕಷ್ಟಕ್ಕೀಡಾದವರನ್ನು ಪಾರು ಮಾಡಿತು. ಹೌದಾ? ಎಂದು ಹುಬ್ಬೇರಿಸಬೇಡಿ!

Advertisement

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಚಾನಕ್‌ ಆಗಿ ವಿಷಪೂರಿತ ರಸಾಯನಿಕ, ಪರಮಾಣು, ಜೈವಿಕ ಇಂಧನಗಳು ಸೋರಿಕೆ ಆದರೆ ಅಥವಾ ದಾಳಿ ನಡೆದರೆ ಯಾವ ರೀತಿ ಸಾರ್ವಜನಿಕರು ಸ್ಪಂದಿಸಬೇಕು, ರಕ್ಷಣಾ ಕಾರ್ಯ ಹೇಗೆ ನಡೆಯಲಿದೆ ಎಂದು ಎನ್‌ಡಿಆರ್‌ಎಫ್ ತಂಡ ಅಣಕು ಪ್ರದರ್ಶನ ನೀಡಿದ ಬಗೆ ಇದು.

ವಿಮಾನ ನಿಲ್ದಾಣದ ಆವರಣದಲ್ಲಿ ನಡೆದ ಅಣಕು ಪ್ರದರ್ಶನದಲ್ಲಿ, ರಸಾಯನಿಕ ವಸ್ತುಗಳ ಸೋರಿಕೆ ಹಾಗೂ ದಾಳಿ ನಡೆದರೆ ಪರಿಸ್ಥಿತಿ ಹೇಗಿರಲಿದೆ? ಸಾರ್ವಜನಿಕರು ಹಾಗೂ ವಿಮಾನ ನಿಲ್ದಾಣ ಸಿಬ್ಬಂದಿ ಹೇಗೆ ಪ್ರತಿಕ್ರಿಯಿಸಬೇಕು. ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯಲಿದೆ ಎಂಬುದರ ಬಗ್ಗೆ ಎನ್‌ಡಿಆರ್‌ಎಫ್ ತಂಡ ಕಣ್ಣಿಗೆ ಕಟ್ಟಿದಂತೆ ಅಣಕು ಪ್ರಯೋಗ ತೋರಿಸಿಕೊಟ್ಟಿತು.

ಈ ರೀತಿಯ ದಾಳಿಗಳು ನಡೆದರೆ ಮೊದಲು ಗಮನಿಸಿದರೆ ಸಹಾಯಕ್ಕೆ ಕಿರುಚಿಕೊಳ್ಳಬೇಕು. ಬಳಿಕ ಕಂಟ್ರೋಲ್‌ ರೂಂಗೆ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ಆಗಮಿಸುವ ಎನ್‌ಡಿಆರ್‌ಎಫ್ ಸಿಬ್ಬಂದಿ 4 ತಂಡಗಳಲ್ಲಿ ಕಾರ್ಯನಿರ್ವಹಿಸಲಿದೆ. ರಕ್ಷಣಾ ತಂಡ, ರಸಾಯನಿಕ ಸೋರಿಕೆ ವಿಫ‌ಲಗೊಳಿಸುವ ತಂಡ, ವೈದ್ಯಕೀಯ ತಂಡ, ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ವಿಕಿರಣ ಸೋಂಕದಂತೆ ಅವರ ರಕ್ಷಣೆಗೆ ಒಂದು ಪ್ರತ್ಯೇಕ ತಂಡ ಕಾರ್ಯನಿರ್ವಹಿಸಲಿದೆ.

50 ಮಂದಿಗೆ ತರಬೇತಿ: ಕೇಂದ್ರ ಗೃಹ ಇಲಾಖೆಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಇನ್ಸ್‌ಟಿಟ್ಯೂಟ್‌ ಆಫ್ ನ್ಯೂಕ್ಲಿಯರ್‌ ಮೆಡಿಸನ್‌ ಆ್ಯಂಡ್‌  ಅಲೈಡ್‌ ಸೈನ್ಸ್‌ ( ಐಎನ್‌ಎಂಎಸ್‌) ಜಂಟಿ ಸಹಯೋಗದಲ್ಲಿ ಕಳೆದ ಒಂದು ವಾರದಿಂದ ರಸಾಯನಿಕ ಸೋರಿಕೆ ಹಾಗೂ ದಾಳಿ ಘಟನೆಗಳು ನಡೆದಾಗ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ವಿಮಾನನಿಲ್ದಾಣ ಸಿಬ್ಬಂದಿ ಹಾಗೂ ಎಸ್‌ಡಿಆರ್‌ಎಫ್ನ 50 ಕ್ಕೂ ಅಧಿಕ ಮಂದಿಗೆ ತರಬೇತಿ ಕಾರ್ಯಾಗಾರ ನೀಡಲಾಗಿದೆ ಎಂದು ಎಸ್‌ಡಿಆರ್‌ಎಫ್ನ ಕಮಾಡೆಂಟ್‌ ಆಫೀಸರ್‌ ಡಾ. ಚೇತನ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next