“ಈ ಮೆರವಣಿಗೆ ಎಲ್ಲಿಗೆ ಹೊರಟಿದೆ?’
ಅವನು ತಲೆಯಲ್ಲಾಡಿಸುತ್ತ, “ಗೊತ್ತಿಲ್ಲ’ ಎನ್ನುತ್ತಾನೆ.
“ಮತ್ತೆ ನೀನು ಹೋಗುತ್ತಿರುವುದು ಎಲ್ಲಿಗೆ?’
“ಎಲ್ಲರೂ ಹೋದಲ್ಲಿಗೆ ನಾನೂ ಹೋಗುವುದು?’
ಇದು ನಿರೀಕ್ಷಿಸಿರಬಹುದಾದ ಉತ್ತರವೇ. ಮೆರವಣಿಗೆಯಲ್ಲಿ ಸಾಗುವುದು ಎಷ್ಟೊಂದು ಸುಲಭ; ಎಲ್ಲರೂ ಸಾಗಿದಲ್ಲಿಗೆ ತಾನೂ ಸಾಗುವುದು. ಒಂದಿಷ್ಟೂ ತಲೆ ಓಡಿಸಬೇಕಾಗಿಲ್ಲ !
ಮೆರವಣಿಗೆಯ ಮುನ್ನೆಲೆಯಲ್ಲಿ ಸಾಗುತ್ತಿರುವವನಿಗೆ ಮಾತ್ರ ಅವನದೇ ಆದ ಕಷ್ಟಗಳಿವೆ. ಅದು ಅವನಾಗಿಯೇ ಮೈಮೇಲೆ ಎಳೆದುಕೊಂಡ ಕಷ್ಟಗಳು. ತನ್ನನ್ನು ಎಲ್ಲರೂ ಅನುಸರಿಸುತ್ತಿ¤ರುವಂತೆ ಮಾಡಿಕೊಂಡ ಮೇಲೆ ಸವಾಲನ್ನೂ ಎದುರಿಸಲೇಬೇಕಲ್ಲ ! ಬುದ್ಧನ ಮುಂದೆಯೂ ಇಂಥದೇ ಸವಾಲು ಇದ್ದಿರಬಹುದೆ?
Advertisement
ಬುದ್ಧನೇನು, ಎಲ್ಲ ದಾರ್ಶನಿಕರೂ ಎದುರಿಸಿದ್ದರು, ಗಾಂಧೀಜಿಯೂ! ಬಹುಶಃ ಜಗತ್ತಿನಲ್ಲಿ ಮೊತ್ತಮೊದಲಬಾರಿಗೆ ಲಕ್ಷಾಂತರ ಮಂದಿ ಒಬ್ಬನನ್ನು ಅನುಸರಿಸಿ ಸಾಗಿದ್ದರೆ ಅದು ಬುದ್ಧನನ್ನು ಇರಬೇಕು. ಬೃಹತ್ ಜಾತ್ರೆ, ಮಹೋತ್ಸವದ ಕಲ್ಪನೆ ಬಂದದ್ದೇ ಬೌದ್ಧರ ಪ್ರಭಾವದಿಂದ ಎಂದು ಹೇಳಲಾಗುತ್ತದೆ. ಬುದ್ಧ ಹೋದಲ್ಲೆಲ್ಲ ಜಾತ್ರೆಯೇ. ಸಂತೆಗದ್ದಲದ ನಡುವೆ ಬುದ್ಧನಿಗೆ ಒಮ್ಮೊಮ್ಮೆ ಒಂಟಿಯಾಗಬೇಕೆನ್ನಿಸಿ ತಿಂಗಳುಗಟ್ಟಲೆ ಕಾಣೆಯಾಗಿ, ಕಾಡನ್ನು ಸೇರಿ, ಧ್ಯಾನಾಸಕ್ತನಾಗಿದ್ದು, ಸಾಮಾಜಿಕ ಬದುಕಿಗೆ ಮರಳುತ್ತಿದ್ದನಂತೆ. ಕೆಲವೊಮ್ಮೆ ಒಂಟಿಯಾದಾಗ ಮಾತ್ರ ಗೊತ್ತಾಗುವುದು- ತಾನೇನು ಎಂದು. ಎಲ್ಲರ ನಡುವೆ ಇದ್ದಾಗ ಅದು ಹೇಗೋ ಸಾಗುತ್ತದೆ, ಬದುಕು.
ಬದುಕೇ ಒಂದು ಮೆರವಣಿಗೆ ! ಪ್ರತಿಯೊಬ್ಬರೂ ತಮಗೆ ಅರಿವಿಲ್ಲದಂತೆಯೇ ಈ ಮೆರವಣಿಗೆಯಲ್ಲಿ ಯಾರಾದರೊಬ್ಬನ ಬೆನ್ನ ಹಿಂದೆ ನಿಂತಿರುತ್ತಾರೆೆ. ಮುಂದಿನವನು ಸಾಗಿದರೆ ತಾವೂ ಚಲಿಸುತ್ತಾರೆ.
ಸುಮ್ಮನೆ ಯೋಚಿಸಿ, ಒಬ್ಬೊಬ್ಬರು ಒಂದೊಂದು ರೀತಿ ಇರುವುದಾದರೆ, “ಸತ್ಯ’ ಎಂಬುದು ಎಲ್ಲರಿಗೂ ಒಂದೇ ಆಗುವುದು ಹೇಗೆ? ಎಲ್ಲರ ದಾರಿ ಒಂದೇ ಆಗುವುದು ಹೇಗೆ?
“ನಿನಗೆ ಹೇಗೆ ಹೊಳೆಯುತ್ತದೆಯೋ ಹಾಗೆ’ ಎಂಬಂಥ ವಿನಯವಂತಿಕೆಯ ಧೋರಣೆ ಭಾರತೀಯ ದರ್ಶನಗಳದ್ದಾಗಿತ್ತು. ಋಷಿಗಳು ಕಾಡಿಗೆ ತೆರಳಿ ಏಕಾಂತದ ಬದುಕನ್ನು ಬಯಸುತ್ತಿದ್ದರೇ ವಿನಾ ತಮ್ಮನ್ನು ಇಡೀ ಜಗತ್ತು ಅನುಸರಿಸಲಿ, ತಮ್ಮ ಹಿಂದೊಂದು ಗುಂಪು ಇರಲಿ ಎಂಬ ಆಗ್ರಹವನ್ನು ಹೊಂದಿರಲಿಲ್ಲ. ಉಪನಿಷದುಕ್ತ ಸತ್ಯ ಕೂಡ ಬಂಗಾರದ ಪಾತ್ರೆಯಡಿಯಲ್ಲಿ ಅಡಗಿತ್ತು, ಮುಚ್ಚಿರುವುದೇ ಯುಕ್ತ ಎಂಬಂತೆ.
ಯಾವುದೇ ಸಂಗತಿ ತನ್ನದು ಆಗಿರುವವರೆಗೆ ಅದು “ಬದುಕು’ ಆಗುತ್ತದೆ, “ಉಪದೇಶ’ವಾದ ಕೂಡಲೇ ಅದಕ್ಕೆ “ರಾಜಕೀಯ’ ಆಯಾಮ ಬಂದುಬಿಡುತ್ತದೆ. ನಮ್ಮ ಹೆಚ್ಚಿನ ದಾರ್ಶನಿಕರು ಬದುಕಿನ ಕೊನೆಯ ದಿನಗಳಲ್ಲಿ ಸವಾಲುಗಳನ್ನು ಎದುರಿಸಿದ್ದು ಇದೇ ಕಾರಣಕ್ಕಾಗಿ. ಚಾರ್ಲ್ಸ್ ಟೇಲರ್ ಎಂಬ ತಣ್ತೀಜ್ಞಾನಿ “ಪಾಲಿಟಿಕ್ಸ್ ಆಫ್ ರೆಕಗ್ನಿಶನ್’ ಎನ್ನುತ್ತಾನೆ.
Related Articles
ನೀವು ವಾಟ್ಸಾಪ್‌ನಲ್ಲಿದ್ದೀರಿ ಎಂದಿಟ್ಟುಕೊಳ್ಳಿ. ತತ್‌ಕ್ಷಣ ಉಳಿದವರು ಕೇಳುವ ಪ್ರಶ್ನೆ, “ನೀವು ಯಾವೆಲ್ಲ ಗ್ರೂಪ್‌ಗ್ಳಲ್ಲಿದ್ದೀರಿ?’
ಇದು, ನಿಮ್ಮನ್ನು ಮೆರವಣಿಗೆಯತ್ತ ಸೆಳೆಯುವ ಹೊಸ ವರಸೆ !
Advertisement
ಶ್ವೇತಕೇತು