Advertisement
ಹರೆಗೋಡು ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆ ಹಾಗೂ ಸಿಗಡಿ ಕೆರೆಯಿಂದಾಗಿ ಸುಮಾರು 100 ಎಕರೆಗೂ ಮಿಕ್ಕಿ ಗದ್ದೆ ಪ್ರದೇಶ ಬರಡು ಭೂಮಿಯಾಗಿತ್ತು. ಇದರಿಂದ ಈ ಭಾಗದ ಹತ್ತಾರು ಮಂದಿ ರೈತರು ಬೇಸತ್ತು, ನಾಟಿ ಮಾಡದೇ ಹಡಿಲು ಬಿಟ್ಟಿದ್ದಾರೆ. ಆದರೆ ಇದೇ ಊರಿನ ಪ್ರಗತಿಪರ ಕೃಷಿಕ ವಿಶ್ವನಾಥ ಗಾಣಿಗ ತಮ್ಮ ಗದ್ದೆಯಲ್ಲಿ ಪ್ರಾಯೋಗಿಕವಾಗಿ ಮಾಡಿದ ಲೋಟ ಕೃಷಿ ಯಶಸ್ವಿಯಾಗಿದೆ.
ಹಿಂದೆ ಎರಡು ಋತುವಿನಲ್ಲಿ ಭತ್ತದ ಕೃಷಿ, ಕಬ್ಬು ಕೂಡ ಬೆಳೆಯಲಾಗುತ್ತಿತ್ತು. ಆದರೆ ಉಪ್ಪು ನೀರು ಹಾಗೂ ಇಲ್ಲೇ ಸಮೀಪದಲ್ಲಿ ಸಿಗಡಿ ಕೆರೆ ಆರಂಭವಾದ ಬಳಿಕ ಅದಕ್ಕೆ ಸಿಂಪಡಿಸುವ ರಾಸಾಯನಿಕ ನೀರಲ್ಲಿ ಬೆರೆತು, ಇಲ್ಲಿ ಗದ್ದೆ ಬೆಳೆದರೂ ಸಸಿ ಸುಟ್ಟು ಹೋಗಿ, ಯಾವುದೇ ಫಸಲು ಸಿಗುತ್ತಿರಲಿಲ್ಲ. ಕಳೆದ 4-5 ವರ್ಷದಿಂದ ಗದ್ದೆಯಲ್ಲಿ ಇಳುವರಿಯೇ ಕಡಿಮೆಯಾಗಿದೆ. ಆ ಕಾರಣಕ್ಕೆ ಈ ಭಾಗದಲ್ಲಿ ಈ ವರ್ಷ ಹೆಚ್ಚಿನ ಗದ್ದೆಗಳನ್ನು ಹಡಿಲು ಬಿಟ್ಟಿದ್ದಾರೆ. ಆದರೆ ನಾನು ಈಗ ಪ್ರಾಯೋಗಿಕವಾಗಿ 20 ಸೆಂಟ್ಸ್ ಗದ್ದೆಯಲ್ಲಿ ಸುಮಾರು 1 ಸಾವಿರ ಲೋಟಗಳಲ್ಲಿ ಸಸಿ ಬೆಳೆದಿದ್ದೇನೆ. ಈಗಿನ ಫಸಲು ನೋಡಿದರೆ ಉತ್ತಮ ಇಳುವರಿ ಬರುವ ನಿರೀಕ್ಷೆಯಿದೆ. ಮುಂದಿನ ಬಾರಿ ಇನ್ನಷ್ಟು ಹೆಚ್ಚಿನ ಗದ್ದೆಗೆ ಈ ಪ್ರಯೋಗವನ್ನು ವಿಸ್ತರಿಸುವ ಯೋಜನೆಯಿದೆ ಎನ್ನುತ್ತಾರೆ ಕೃಷಿಕ, ಪ್ರವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿರುವ ವಿಶ್ವನಾಥ ಗಾಣಿಗ. ಲೋಟ ಸಹಿತ ನಾಟಿಯ ಜತೆಗೆ, ಇದೇ ಗದ್ದೆಯ ಪಕ್ಕದಲ್ಲಿ ಕೈ ನಾಟಿ ಮಾಡಿ ಕೂಡ ನೇಜಿ ಮಾಡಿದ್ದಾರೆ. ಆದರೆ ಅದು ಉಪ್ಪು ನೀರಿನಿಂದಾಗಿ ಕರಟಿ ಹೋಗಿದೆ. ಲೋಟ ಕೃಷಿ ಮಾತ್ರ ಯಶಸ್ವಿಯಾಗಿದೆ.
Related Articles
ಮಣ್ಣಿನಲ್ಲಿ ಕರಗಿ ಹೋಗುವ ಪೇಪರ್ ಲೋಟದ ಅಡಿ ಭಾಗದಲ್ಲಿ ಸ್ವಲ್ಪ ಮಣ್ಣು ಹಾಕಿ, ಆ ಬಳಿಕ 5-6 ಭತ್ತದ ಬೀಜ ಹಾಕಿ, ಅದರ ಮೇಲೆ ಸ್ವಲ್ಪ ಮಣ್ಣು ಹಾಕಿ, ಮನೆ ಅಂಗಳದಲ್ಲಿ ಜೋಡಿಸಿಡಲಾಗುತ್ತದೆ. ಮಳೆ ಬಂದು, ಲೋಟದಲ್ಲಿರುವ ಮಣ್ಣು ನೆನೆದು ಭತ್ತದ ಬೀಜ ಸಸಿ (ನೇಜಿ) ಯಾಗುತ್ತದೆ. ಮಳೆ ಬರದೆ ಇದ್ದಲ್ಲಿ, ಅಗತ್ಯವಿರುವಷ್ಟು ಪ್ರಮಾಣದಲ್ಲಿ ನೀರು ಚಿಮುಕಿಸುವ ಮೂಲಕವೂ ನೇಜಿ ಬೆಳೆಸಬಹುದು. ಸಸಿಯಾದ 16ರಿಂದ 18 ದಿನದಲ್ಲಿ ನಾಟಿ ಮಾಡಲಾಗುತ್ತದೆ. ಕೈ ನಾಟಿ ಮಾಡುವ ಹಾಗೆ, ಗದ್ದೆಯನ್ನು ಎರಡು ಬಾರಿ ಹದ ಮಾಡಿ, ನಾಟಿ ಮಾಡುವ ದಿನ ಭೂಮಿಗೆ ಹಟ್ಟಿಗೊಬ್ಬರ ಹಾಕಿ ಮತ್ತೆ ಭೂಮಿ ಹದ ಮಾಡಲಾಗುತ್ತದೆ. ಹದ ಮಾಡಿದ ಅನಂತರ ಭತ್ತದ ನೇಜಿಯಿದ್ದ ಕಾಗದದ ಲೋಟ ಸಹಿತ ಗದ್ದೆಯಲ್ಲಿ ನೆಡಬೇಕು. ಮಣ್ಣಲ್ಲಿ ಕಾಗದದ ಲೋಟ ಕರಗುವಷ್ಟರಲ್ಲಿ ಭತ್ತ ಸಸಿ ಗಟ್ಟಿಯಾಗಿ ನಿಲ್ಲುತ್ತದೆ. ಭತ್ತದ ಪೈರು ಬೆಳೆದು, ಫಸಲು ಬರುವವರೆಗೆ ಉಪ್ಪು ನೀರು ತಗುಲುವುದಿಲ್ಲ.
Advertisement
ಉತ್ತಮ ಫಸಲುಇದೇ ಗದ್ದೆಯಲ್ಲಿ ಈ ಹಿಂದೆ ಸಾಮಾನ್ಯ ನಾಟಿ ಮಾಡಿದಾಗ ನೇಜಿ ಹನ್ನೆರಡರಿಂದ ಹದಿನೈದು ಸಸಿಯಷ್ಟೇ ಚಿಗುರೊಡೆಯುತ್ತಿತ್ತು. ಆದರೆ ಈಗ ಈ ಲೋಟದ ಮೂಲಕ 5-6 ಬೀಜ ಮಾತ್ರ ಹಾಕಿದ್ದರೂ, ಸುಮಾರು 50ಕ್ಕೂ ಹೆಚ್ಚು ಸಸಿಗಳು ಚಿಗುರೊಡೆದಿದೆ. ಅಂದರೆ ಉತ್ತಮ ಫಸಲು ಬರುವ ನಿರೀಕ್ಷೆಯಿದೆ. ಅದಕ್ಕಿಂತಲೂ ಉಪ್ಪು ನೀರಿನಿಂದಾಗಿ ಇಲ್ಲಿ ಗದ್ದೆ ಬೆಳೆಯುತ್ತಿದ್ದರೂ, ಅದರಲ್ಲಿ ಕನಿಷ್ಠ ಕೃಷಿ ಬೆಳೆಯಲು ವಿನಿಯೋಗಿಸಿದ ಹಣವೂ ಸಿಗುತ್ತಿರಲಿಲ್ಲ.
– ವಿಶ್ವನಾಥ್ ಗಾಣಿಗ ಹರೆಗೋಡು, ಕೃಷಿಕ ಶೀಘ್ರ ಕಾಮಗಾರಿಗೆ ಆರಂಭ
ಈ ಹರೆಗೋಡು ಭಾಗದ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಪ್ಪು ನೀರಿಗೆ ಪರಿಹಾರವೆನ್ನುವಂತೆ ರಾಜಾಡಿ ಕಳುವಿನ ಬಾಗಿಲು ಬಳಿ ವೆಂಟೆಂಡ್ ಡ್ಯಾಂಗಾಗಿ 4.40 ಕೋ.ರೂ. ಮಂಜೂರಾಗಿದ್ದು, ಟೆಂಡರ್ ಕೂಡ ಆಗಿದೆ. ಶೀಘ್ರ ಕಾಮಗಾರಿ ಕೂಡ ಆರಂಭವಾಗಲಿದೆ. ಮಳೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು.
– ಬಿ.ಎಂ.ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕರು