ಲಕ್ನೋ: ಕಾನ್ಸ್ ಟೇಬಲ್ ನೇಮಕಾತಿಯ ಪ್ರಶ್ನೆಪತ್ರಿಕೆ ಸೋರಿಕೆ ಆದ ಘಟನೆ ಬಳಿಕ ಉತ್ತರಪ್ರದೇಶ ಸರ್ಕಾರ ಮಂಗಳವಾರ (ಮಾರ್ಚ್ 05) ಯುಪಿ ಪೊಲೀಸ್ ನೇಮಕಾತಿ ಮತ್ತು ಬಡ್ತಿ ಮಂಡಳಿ ಅಧ್ಯಕ್ಷೆ ರೇಣುಕಾ ಮಿಶ್ರಾ ಅವರನ್ನು ವಜಾಗೊಳಿಸಿರುವುದಾಗಿ ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಇದನ್ನೂ ಓದಿ:ಜನನಿಬಿಡ ರಸ್ತೆಯಲ್ಲೇ ಪತ್ನಿಯನ್ನು ಥಳಿಸಿ ಹತ್ಯೆಗೈದ ಪತಿ: ಭೀಕರ ಘಟನೆಗೆ ಸಾಕ್ಷಿಯಾದ ಜನ
ವಜಾಗೊಂಡ ರೇಣುಕಾ ಮಿಶ್ರಾ ಹುದ್ದೆಗೆ ಐಪಿಎಸ್ ಅಧಿಕಾರಿ ರಾಜೀವ್ ಕೃಷ್ಣ ಅವರನ್ನು ನೇಮಕ ಮಾಡಲಾಗಿದೆ. ಉತ್ತರಪ್ರದೇಶದ 60,000ಕ್ಕೂ ಅಧಿಕ ಕಾನ್ಸ್ ಟೇಬಲ್ ಹುದ್ದೆಗಳಿಗೆ 48 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಿತ್ತು.
ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪರಿಣಾಮ ಉತ್ತರಪ್ರದೇಶ ಸರ್ಕಾರ ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದರು. ಫೆಬ್ರವರಿ 17ರಂದು ಪರೀಕ್ಷೆ ನಡೆದಿದ್ದು, ಫೆ.18ರಂದು ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು.
ಆರು ತಿಂಗಳೊಳಗೆ ಮರು ಪರೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿರುವುದಾಗಿ ಸಿಎಂ ಯೋಗಿ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಯಾರು ತಪ್ಪಿತಸ್ಥರಾಗುತ್ತಾರೋ ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಸಿಎಂ ಯೋಗಿ ತಿಳಿಸಿದ್ದರು.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಮಟ್ಟದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದರು.