ಕಾಪು: ಬೆಳಪು ಗ್ರಾಮದ ಪಣಿಯೂರು ಸತೀಶ್ ಮೋನಯ್ಯ ಆಚಾರ್ಯ ಅವರ ವಾಸದ ಮನೆಯ ಮೇಲೆ ತೆಂಗಿನ ಮರ ಬಿದ್ದು ಲಕ್ಷಾಂತರ ರೂ. ಮೌಲ್ಯದ ಸೊತ್ತು ನಷ್ಟ ಉಂಟಾಗಿದೆ.
ಹಂಚಿನ ಮನೆಯ ಮೇಲೆ ತೆಂಗಿನ ಮರ ಉರುಳಿ ಬಿದ್ದು ಒಂದು ಲಕ್ಷ ರೂಪಾಯಿಗೂ ಮಿಕ್ಕಿ ನಷ್ಟ ಅಂದಾಜಿಸಲಾಗಿದೆ.
ಗುರುವಾರ ಬೆಳಗ್ಗೆ 7.30ರ ಸುಮಾರಿಗೆ ಘಟನೆ ಸಂಭವಿಸಿದ್ದು, ಮರ ಉರುಳಿ ಬೀಳುವ ಸಂದರ್ಭ ಸತೀಶ್ ಆಚಾರ್ಯ ಮತ್ತು ಮಕ್ಕಳು ಮನೆಯೊಳಗೆ ಇದ್ದು, ಅವರ ಪತ್ನಿ ಮನೆಯ ಹೊರಗೆ ಪಾತ್ರೆ ತೊಳೆಯುತ್ತಿದ್ದರು. ಅದೃಷ್ಟವಶಾತ್ ಮನೆಯಲ್ಲಿದ್ದವರು ಯಾವುದೇ ನೋವಿಲ್ಲದೇ ಅಪಾಯದಿಂದ ಪಾರಾಗಿದ್ದಾರೆ. ಬೆಳಪು ಗ್ರಾಮ ಕರಣಿಕ ಗಣೇಶ್ ಮೇಸ್ತ ಅವರು ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದ್ದು, ತಾಲೂಕು ಕಚೇರಿಗೆ ಮಾಹಿತಿ ನೀಡಿದ್ದಾರೆ.
ಕಂದಾಯ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಭೇಟಿ ನೀಡಿ ಹಾನಿ ಪರಿಶೀಲಿಸಿದ್ದು, ಸರಕಾರದಿಂದ ಗರಿಷ್ಠ ಪರಿಹಾರ ಧನವನ್ನು ಒದಗಿಸಿಕೊಡುವ ಭರವಸೆ ನೀಡಿದ್ದಾರೆ.
ದೇವಸ್ಥಾನಕ್ಕೆ ಹಾನಿ
ಬ್ರಹ್ಮಾವರ: ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಕೊಕ್ಕರ್ಣೆ ಸಮೀಪದ ಇತಿಹಾಸ ಪ್ರಸಿದ್ಧ ಜೆಡ್ಡು ಶ್ರೀ ವೀರಭದ್ರ ದೇವಸ್ಥಾನದ ಗೋಪುರದ ಮೇಲೆ ಸಿಡಿಲು ಎರಗಿ ಭಾಗಶಃ ಜಖಂಗೊಂಡಿದೆ.ಗೋಪುರದ ಕಲಶಕ್ಕೆ ಸಿಡಿಲು ಬಡಿದ ಪರಿಣಾಮ ವಿದ್ಯುತ್ ವಯರಿಂಗ್‌ನೊಂದಿಗೆ ಸರ್ವಿಸ್ ವಯರ್‌ಗಳು ಸುಟ್ಟು ಕರಕಲಾಗಿವೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್. ನಾರಾಯಣ ಮರಕಾಲ ತಿಳಿಸಿದ್ದಾರೆ.