Advertisement
ಲಡಾಖ್‌ನ ಪೆಂಗೊಂಗ್ ತ್ಸೋ ಸರೋವರದ ತಟದಲ್ಲಿ ನಿಂತಾಗ, ನಾನೂ 3 ಈಡಿಯಟ್ಸ್‌ನಂತೆ ಪುಳಕಿತನಾಗಿದ್ದೆ. “3 ಈಡಿಯಟ್’ನ ಕ್ಲೈಮ್ಯಾಕ್ಸ್‌ನಲ್ಲಿ ಆಮೀರ್ ಖಾನ್ ಹಾರಿಸಿದ ಗಾಳಿಪಟ ಇನ್ನೂ ಈ ಸರೋವರದ ಮೇಲೆ ಹಾರುತ್ತಿದೆಯೇನೋ ಅಂತನ್ನಿಸುತ್ತಿತ್ತು. ಕರೀನಾ ಕಪೂರ್ ವೆಸ್ಪಾ ಓಡಿಸಿಕೊಂಡು ಬಂದಂತೆ, ಹಿನ್ನೆಲೆಯ ದೃಶ್ಯದಲ್ಲಿ ಸರೋವರವು ಸುನೀಲ ವಿಸ್ತಾರವಾಗಿ ಹಬ್ಬಿದಂತೆ ಮನಸ್ಸು ತಂಪಾಗುತ್ತಿತ್ತು. ಪೆಂಗೊಂಗ್ ಸರೋವರ, 134 ಕಿ.ಮೀ. ಉದ್ದವಿದ್ದು, ಶೇ.60 ಭಾಗವು ಚೀನಾ- ಟಿಬೆಟ್‌ನಲ್ಲಿ, ಮಿಕ್ಕ ಭಾಗವು ಭಾರತದಲ್ಲಿ ಹರಡಿಕೊಂಡಿದೆ. ನೋಡಲು ವಿಶಾಲವಾದ, ಸ್ಫಟಿಕದಂತಿರುವ ಈ ಸರೋವರವು ಪ್ರಪಂಚದ ಅದ್ಭುತ ಜಲತಾಣಗಳಲ್ಲಿ ಒಂದು.
ತಿಳಿ ಹಸಿರನ್ನು ಹೊದ್ದಿರುವ ಪಾರದರ್ಶಕ ನೀರಿಗೆ ನೀಲಿ ಮೋಡ ಚುಂಬಿಸಿದಂತೆ ಕಾಣುವ ದೃಶ್ಯವೇ ಮನಮೋಹಕ. ಬಿಳಿಯ ಬಣ್ಣದ ಮೋಡಗಳು ಅಲ್ಲಲ್ಲಿ ಇಣುಕಿ, ಸರೋವರದಲ್ಲಿ ತಮ್ಮ ನೆರಳನ್ನು ನೋಡುತ್ತಿವೆ ಎಂಬ ಭಾವ ಹುಟ್ಟುತ್ತಿತ್ತು.
ಅಲ್ಲಿನ ಹರಳುಕಲ್ಲುಗಳ ತಟದಲ್ಲಿ ಆರಾಮವಾಗಿ ಕೂರುವ ಸುಖವೇ ಬೇರೆ. ಚಳಿಗಾಲ, ಮಳೆಗಾಲದಲ್ಲಿ ಈ ಸರೋವರದ ಕುರುಹೇ ಇರುವುದಿಲ್ಲ. ಹಿಮ ಹೊದ್ದು ಮಲಗುತ್ತದೆ. ಇನ್ನುಳಿದ ದಿನಗಳಲ್ಲಿ ಸ್ಫಟಿಕ ನೀರಿನದ್ದೇ ಚಮತ್ಕಾರ. ಹಸಿರು- ನೀಲಿಯ ಮಹೋನ್ನತ ಜುಗಲ್‌ಬಂದಿ. ಇಲ್ಲಿ ಬೀಸುವ ಗಾಳಿಗೆ ಎದೆಯೊಡ್ಡಿದಾಗ, ದೇಹವು ಹಗುರಾದ ಭಾವ. ನೋಡಿದರೆ ಈಜಬೇಕು ಎನಿಸುವ ನೀರಿನಲ್ಲಿ ಕಾಲಿಟ್ಟರೆ, ಮೈ ಕೊರೆಯುವ ತಂಪು ಅಡಗಿತ್ತು. ಹಿಮವನ್ನೇ ಮುಟ್ಟಿದಂತೆ ಅದು ತಣ್ಣಗೆ ಕೊರೆಯುತ್ತಿತ್ತು. ಎಷ್ಟೇ ಅಳವಿದ್ದರೂ, ತಳ ಕಾಣುವ ಅದರ ಮೋಡಿಗೆ ಬೇರೆ ಸಾಟಿಯೇ ಇಲ್ಲ. ಆದರೆ, ಜಾಸ್ತಿ ಹೊತ್ತು ಈ ಸ್ಥಳದಲ್ಲಿ ನಿಲ್ಲಲಾಗಲಿಲ್ಲ. ಕೆಲ ತಾಸು ನೀರಿನಲ್ಲಿ ಆಟವಾಡಿ, “3 ಈಡಿಯಟ್ಸ್’ ಎಂಬ ಹೋಟೆಲ್‌ನಲ್ಲಿ ಊಟ ಮುಗಿಸಿ, ಪುನಃ ಲೇಹ್‌ನತ್ತ ಹೊರಟೆವು. ಲೇಹ್ ತಲುಪಿದಾಗ ಸಂಜೆ 6. ಹೋಗುವ ದಾರಿಯಲ್ಲಿ ಸಿಕ್ಕ ಶಾಲೆಯಿಂದ ಮನೆಗೆ ತೆರಳುತ್ತಿರುವ ಹಲವು ಚಿಕ್ಕ ಪುಟ್ಟ ಮಕ್ಕಳೊಂದಿಗೆ ಆಟವಾಡಿ, ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ನಮ್ಮ ಹೋಟೆಲ್ ಅನ್ನು ತಲುಪಿದೆವು.
Related Articles
Advertisement