Advertisement
ಒಂದು ವರ್ಷ ಮೂರು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ ಯೋಗೀಶ್ ಆಚಾರ್ಯ ಮೇ 23ರಂದು ಉಡುಪಿಯ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಹಾಜರಾಗಿ ಶರಣಾಗಿದ್ದನು. ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಪ್ರಕರಣದ ಪ್ರಸ್ತುತ ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಆರೋಪಿಯನ್ನು ನ್ಯಾಯಾಂಗ ಬಂಧನದಿಂದ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಯೋಗೀಶನನ್ನು ಪೊಲೀಸರು ವಿವಿಧೆಡೆ ತನಿಖೆಗಾಗಿ ಕರೆದೊಯ್ದಿದ್ದು ಆತನ ಮನೆ, ಹತ್ಯೆ ನಡೆದಿದ್ದ ಪರಿಸರ, ಪಾಂಗಾಳ ಹೊಳೆ ಸಹಿತವಾಗಿ ವಿವಿಧೆಡೆ ಸ್ಥಳ ಮಹಜರು ನಡೆಸಿದ್ದಾರೆ. ಆರೋಪಿಯು ಹತ್ಯೆಗೆ ಸಂಬಂಧಪಟ್ಟು ಮಹತ್ವದ ಮಾಹಿತಿಗಳನ್ನು ನೀಡಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರ ಮುಂದೆ ನಿಲ್ಲಿಸುವೆ ಎಂದಿದ್ದ ದೈವ!
ಶರತ್ ಶೆಟ್ಟಿ ಕೊಲೆ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿರುವಂತೆಯೇ ಮನೆಯವರು ಕುಟುಂಬದ ದೈವದ ಮೊರೆ ಹೋಗಿದ್ದರು. ಆರೋಪಿ ಎಲ್ಲೇ ಇದ್ದರೂ ಪೊಲೀಸರ ಮುಂದೆತಂದು ನಿಲ್ಲಿಸುತ್ತೇನೆ ಎಂದು ದೈವ ಮನೆಯವರಿಗೆ ಅಭಯ ನೀಡಿತ್ತು. ಅದರಂತೆ ಆತ ಮೇ 23ರಂದು ತಾನಾಗಿಯೇ ನ್ಯಾಯಾಲಯದ ಮುಂದೆ ಹಾಜರಾಗಿರುವುದು ವಿಶೇಷವಾಗಿದೆ.