Advertisement

ಪಂಡಿತರಿಗೆ ತವರಿಗೆ ತೆರಳುವ ಕಾತರ

12:56 PM Aug 07, 2019 | Team Udayavani |

ಬೆಂಗಳೂರು: ಕರ್ನಾಟಕ ನಮಗೆ ಎಲ್ಲವನ್ನು ಕೊಟ್ಟಿದೆ. ಈಗ ಕೇಂದ್ರ ಸರ್ಕಾರ ಸಕಲ ಭದ್ರತೆ ಹಾಗೂ ಗೌರವದೊಂದಿಗೆ ನಮ್ಮ ತವರು ನೆಲ ಕಾಶ್ಮೀರಕ್ಕೆ ಕರೆಸಿಕೊಂಡರೆ ಹೋಗಲು ಉತ್ಸುಕರಾಗಿದ್ದೇವೆ!

Advertisement

ಇದು, ಕಾಶ್ಮೀರ ಕಣಿವೆಯಿಂದ ಕಂಗೆಟ್ಟು 30-40 ವರ್ಷಗಳ ಹಿಂದೆಯೇ ಕರ್ನಾಟಕಕ್ಕೆ ಬಂದು ನೆಲೆಸಿರುವ ಕಾಶ್ಮೀರ ವಾಸಿಗಳ ಹರ್ಷೋದ್ಘಾರ.

ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸಹಿತವಾಗಿ ರಾಜ್ಯದ ವಿವಿಧ ಭಾಗದಲ್ಲಿ ಸುಮಾರು 400 ಕಾಶ್ಮೀರಿ ಪಂಡಿತರ ಕುಟುಂಬಗಳು ವಾಸಿಸುತ್ತಿವೆ. ಸಂಖ್ಯಾ ಲೆಕ್ಕಾಚಾರದಲ್ಲಿ 2,000ದಿಂದ 2,500 ಮಂದಿ ಕರ್ನಾಟಕದಲ್ಲಿ ಇರಬಹುದು. ರಾಜಧಾನಿಯ ವಿದ್ಯಾರಣ್ಯಪುರ, ಎಚ್ಎಂಟಿ ಬಡವಾಣೆ, ಯಲಹಂಕ, ಯಶವಂತಪುರ, ಕೆ.ಆರ್‌.ಪುರ ಮೊದಲಾದ ಕಡೆಗಳಲ್ಲಿ ಹೆಚ್ಚು ಕುಟುಂಬಗಳಿವೆ. ಇಡೀ ಕರ್ನಾಟಕದಲ್ಲಿರುವ ಒಟ್ಟಾರೆ ಕಾಶ್ಮೀರಿ ಪಂಡಿತರ ಕುಟುಂಬಗಳ ಪೈಕಿ ಬೆಂಗಳೂರಿನಲ್ಲೇ ಹೆಚ್ಚಿವೆ ಎಂದು ಕಾಶ್ಮೀರದ ಮೂಲ ನಿವಾಸಿ ದಿಲೀಪ್‌ ಕಾಚ್ರೂ ‘ಉದಯವಾಣಿ’ಗೆ ಮಾಹಿತಿ ನೀಡಿದರು.

ಯಾವಾಗ ಬೇಕಾದರೂ ಕಾಶ್ಮೀರಕ್ಕೆ ಹೋಗಲು ಸಿದ್ಧರಿದ್ದೇವೆ. ಅಲ್ಲಿಯೇ ನಮ್ಮ ಕುಟುಂಬಗಳು ನೆಲೆಸಲು ತಯಾರಿದ್ದೇವೆ. ಆದರೆ, ಸರ್ಕಾರ ನಮ್ಮ ಕುಟುಂಬಗಳಿಗೆ ಸೂಕ್ತ ಭದ್ರತೆ ಹಾಗೂ ಗೌರವದಿಂದ ಕರೆಸಿಕೊಳ್ಳುವಂತಾಗಬೇಕು ಎಂದು ಕಾಶ್ಮೀರ ಮೂಲದ ಓಪೇಂದ್ರ ಬಲಿ ಅಭಿಪ್ರಾಯ ವ್ಯಕ್ತಪಡಿಸಿದರು.

1970-80ರ ದಶಕದಲ್ಲಿ ಅತ್ಯಂತ ದುಃಖೀತವಾಗಿ ಕಾಶ್ಮೀರದಿಂದ ದೇಶದ ಬೇರೆ ಬೇರೆ ರಾಜ್ಯಗಳಿಗೆ ನಾವು( ಕಾಶ್ಮೀರಿ ಪಂಡಿತರ ಸಮೂಹ) ವಲಸೆ ಹೋಯಿತು. ಕೆಲವು ಕುಟುಂಬಗಳು ಕರ್ನಾಟಕಕ್ಕೂ ಬಂದಿವೆ. ಕರ್ನಾಟಕಕ್ಕೆ ಬಂದ ದಿನಗಳಲ್ಲಿ ನಮ್ಮ ಬಳಿ ಯಾವ ಉದ್ಯೋಗವೂ ಇರಲಿಲ್ಲ. ಜಮೀನು ಮತ್ತು ವಸತಿ ದೂರದ ಮಾತಾಗಿತ್ತು. ನಮ್ಮ ಅಳಲು ಕೇಳುವವರು ಇರಲಿಲ್ಲವಾಗಿತ್ತು. ನಂತರ ವರ್ಷಗಳಲ್ಲಿ ಸ್ಥಳೀಯರ ಸಹಕಾರದಿಂದ ಇಲ್ಲಿನವರೊಂದಿಗೆ ಅನ್ಯೋನ್ಯವಾಗಿ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ. ಇಲ್ಲಿನ ಸರ್ಕಾರ ಕೂಡ ನಮಗೆ ಯಾವುದೇ ಸಮಸ್ಯೆ ನೀಡಿಲ್ಲ. ಮಕ್ಕಳು ಇಲ್ಲಿಯೇ ಓದಿ, ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ಎಲ್ಲರೂ ಒಟ್ಟಿಗೆ ಸೇರುತ್ತೇವೆ ಎಂದು ಅವರು ಭಾವುಕರಾದರು.

Advertisement

ಕರ್ನಾಟಕ ಮತ್ತು ಕಾಶ್ಮೀರಕ್ಕೆ ಅವಿನಾಭಾವ ಸಂಬಂಧವಿದೆ. ಅಲ್ಲಿನ ಸಂಸ್ಕೃತಿ, ಸಂಪ್ರದಾಯದ ಕೆಲವು ಅಂಶಗಳನ್ನು ಇಲ್ಲಿಯೂ ಕಾಣಬಹುದಾಗಿದೆ. ನಾವು ಕಾಶ್ಮೀರದಿಂದ ಬಂದಿದ್ದರೂ, ಕರ್ನಾಟಕದ ಆಹಾರ ಪದ್ಧತಿಗೆ ಹೊಂದಿಕೊಂಡಿದ್ದೇವೆ. ಹಾಗಂತ ಕಾಶ್ಮೀರಿ ಆಹಾರ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ದೇವಿ ಹಾಗೂ ಶಿವನ ಆರಾಧಕರಾಗಿರುವ ನಾವು ಅಷ್ಟಮಿಯನ್ನು ಅತ್ಯಂತ ವೈಭವದಿಂದ ಆಚರಣೆ ಮಾಡುತ್ತೇವೆ. ನಮ್ಮ ಪುರ್ವಜರು ಕಾಶ್ಮೀರದಲ್ಲಿ ಯಾವೆಲ್ಲ ಹಬ್ಬ, ಉತ್ಸವ ಇತ್ಯಾದಿಗಳನ್ನು ಮಾಡುತ್ತಿದ್ದರೋ ಅದನ್ನೆಲ್ಲವನ್ನೂ ಈಗಲೂ ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅಚರಣೆಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುತ್ತಿದ್ದೇವೆ ಎಂದು ನುಡಿದರು.

ನಮ್ಮಲ್ಲಿ ವ್ಯಾಪಾರಿಗಳು ತುಂಬಾ ಕಡಿಮೆ. ಹೀಗಾಗಿ ಉದ್ಯಮ ಅಥವಾ ಸಗಟು ವ್ಯಾಪರಗಳಲ್ಲಿ ತೊಡಗಿಸಿಕೊಂಡಿರುವ ಕುಟುಂಬಗಳು ತೀರ ಕಡಿಮೆ. ಬಹುತೇಕರು ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳು ಎಂಜಿನಿಯರಿಂಗ್‌, ವೈದ್ಯಕೀಯ ಹಾಗೂ ಇತರೆ ವಿಭಾಗಗಳಲ್ಲಿ ಉನ್ನತ ಶಿಕ್ಷಣ ಪಡೆದು ಬೆಂಗಳೂರಿನಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕದೊಂದಿಗೆ ಒಂದಾಗಿ ಬಾಳುತ್ತಿರುವ ನಮಗೆ ಕೇಂದ್ರ ಸರ್ಕಾರದಿಂದ ಈಗ ಹೊಸ ಆಶಾಕಿರಣ ಸಿಕ್ಕಿದೆ. ತವರು ನೆಲಕ್ಕೆ ವಾಪಾಸ್‌ ಹೋಗುತ್ತೇವೆ ಎಂಬ ಭರವಸೆಯೂ ಮೂಡಿದೆ ಎಂದು ಖುಷಿಯನ್ನು ಹಂಚಿಕೊಂಡರು.

ಕರ್ನಾಟಕದಲ್ಲಿರುವ ಕಾಶ್ಮೀರಿ ಪಂಡಿತ ಸಮೂಹದ ಮೂರ್‍ನಾಲ್ಕು ಸಂಘಟನೆಗಳು ಇವೆ. ಇದಲ್ಲೆ, ಕಾಶ್ಮೀರದ ಸಮಸ್ಯೆಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸುವ ಸಾಮಾಜಿಕ ಸಂಘಟನೆಗಳಲ್ಲೂ ಕಾಶ್ಮೀರಿ ಪಂಡಿತರ ಕುಟುಂಬದ ಸದಸ್ಯರು ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮುದಾಯಕ್ಕೆ ಯಾವುದೆ ಸಮಸ್ಯೆ ಎದುರಾದರೂ ಒಂದಾಗುತ್ತೇವೆ. ನಮ್ಮ ಆಚರಣೆಯಲ್ಲೂ ಯಾವುದೇ ರೀತಿಯ ಬದಲಾವಣೆ ಮಾಡಿಕೊಂಡಿಲ್ಲ. ಅತ್ಯಂತ ಕಷ್ಟದ ದಿನಗಳಲ್ಲೂ ಆಚರಣೆಗಳನ್ನು ಬಿಟ್ಟು ಬದುಕಲಿಲ್ಲ. ಈಗಲೂ ನಾವು ಕುಟುಂಬ ಸಮೇತರಾಗಿ ಕಾಶ್ಮೀರಕ್ಕೆ ಹೋಗಲು ಶೇ.100ರಷ್ಟು ಸಿದ್ಧರಿದ್ದೇವೆ. ಶಾರದಾ ದೇವಿಯ ನೆಲೆಬೀಡಾಗಿರುವ ಕಾಶ್ಮೀರದಲ್ಲಿ ವಾಸವಾಗಿರಲು ಹೆಮ್ಮೆಯಿದೆ ಎಂದು ಬೆಳೆದುಬಂದ ಬಗೆಯನ್ನು ಇನ್ನೋರ್ವ ಕಾಶ್ಮೀರಿ ನಿವಾಸಿ ವಿವರಿಸಿದರು.

ಕಾಶ್ಮೀರಕ್ಕೆ ಹೋಗಿ ಬರುತ್ತೇವೆ:

ಕರ್ನಾಟಕದಲ್ಲಿರುವ ಸುಮಾರು 400 ಕುಟುಂಬಗಳ ಪೈಕಿ ಬಹುತೇಕರು ಕಾಶ್ಮೀರದಲ್ಲಿ ಇರುವ ತಮ್ಮ ಪೂರ್ವಜರ ಆಸ್ತಿಯನ್ನು ಕಳೆದುಕೊಂಡಿದ್ದಾರೆ. ಆದರೆ, ಕೆಲವು ಜಮೀನು ಇನ್ನೂ ಇದೆ. ಅಲ್ಲಿ ವ್ಯವಸಾಯ ಕೂಡ ನಡೆಯುತ್ತಿದೆ. ಎರಡು ಅಥವಾ ಮೂರು ವರ್ಷಕ್ಕೆ ಒಮ್ಮೆ ಕಾಶ್ಮೀರಕ್ಕೆ ಹೋಗಿ ನಮ್ಮ ಜಮೀನು ನೋಡಿಕೊಂಡು ಬರುತ್ತೇವೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನಮ್ಮಲ್ಲಿದೆ. ಅನೇಕ ಕುಟುಂಬದ ಮಕ್ಕಳು ಇಲ್ಲಿ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ವಿದ್ಯಾಭ್ಯಾಸದ ಒದಗಿಸಲು ಬೇಕಾದ ಅಗತ್ಯ ಲಿಂಕೇಜ್‌ ವ್ಯವಸ್ಥೆಯನ್ನು ವಿವಿಧ ಸಂಘಟನೆಗಳ ಮೂಲಕ ಮಾಡಲಾಗುತ್ತದೆ. ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಶಿಕ್ಷಣ ಸಂಸ್ಥೆಗಳಲ್ಲೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರೈಸಿದ ನಂತರ ತವರಿಗೆ ಹೋಗಿ ಉದ್ಯೋಗ ಮಾಡುವಂತಾಗಬೇಕು. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಲಿದೆ ಎಂಬ ಆಶಾಭಾವನೆ ಇದೆ ಎಂದು ದಿಲೀಪ್‌ ಕಾಚ್ರೂ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
● ರಾಜು ಖಾರ್ವಿ ಕೊಡೇರಿ
Advertisement

Udayavani is now on Telegram. Click here to join our channel and stay updated with the latest news.

Next